“ಮತದಾರರಲ್ಲಿ ರಾಜಕೀಯ ಹೋರಾಟಗಳು ನಡೆಯಲಿ. ನಿಮ್ಮನ್ನು ಏಕೆ ಬಳಸಿಕೊಳ್ಳಲಾಗುತ್ತಿದೆ?” ಎಂದು ಮಾನ್ಯ ಸರ್ವೋಚ್ಛ ನ್ಯಾಯಾಲಯ ಇಡಿ ಸಂಸ್ಥೆಯನ್ನು ಕೇಳಿದೆ.

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಇಡಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದಲ್ಲದೆ, ಇಡಿ ಬಿಜೆಪಿಯ ಕೈಗೊಂಬೆಯಾಗಿದೆ ಮತ್ತು ರಾಜಕೀಯ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಟೀಕಿಸಿರುವ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿನ ಪ್ರತಿ ಪಕ್ಷದ ನಾಯಕರಾದ ಆರ್.ಅಶೋಕ (R Ashok) ಮತ್ತು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಅವರಲ್ಲಿ ಕಿಂಚಿತ್ತು ನಾಚಿಕೆ ಎನ್ನುವುದು ಉಳಿದಿದ್ದರೆ ತಕ್ಷಣ ರಾಜೀನಾಮೆ ನೀಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ (Priyanka Kharge) ಒತ್ತಾಯಿಸಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಿಯಾಂಕ್ ಖರ್ಗೆ ಕರ್ನಾಟಕದ ಬಿಜೆಪಿ ಮುಡಾ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರದ ವಿರುದ್ಧ ದೆಹಲಿ ಯಜಮಾನರು ಹೇಳಿದಂತೆ ನಿರಂತರ ಅಪಪ್ರಚಾರ ನಡೆಸಿದರು. ಬಿಜೆಪಿ ಸುಳ್ಳು ಆರೋಪಗಳನ್ನು ಮಾಡಿ, ನಕಲಿ ಇಡಿ ದಾಳಿಗಳನ್ನು ಮಾಡಿಸಿತು ಮತ್ತು ರಾಜ್ಯಪಾಲರ ಕಚೇರಿಯನ್ನು ದುರುಪಯೋಗಪಡಿಸಿಕೊಂಡಿತು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರಲ್ಲದೆ, ಈ ಸಂಬಂಧ ಹೈಕೋರ್ಟ್ ಮತ್ತು ಈಗ ಸುಪ್ರೀಂ ಕೋರ್ಟ್ ಎರಡೂ ಬಿಜೆಪಿ ಸುಳ್ಳುಗಳನ್ನು ಬಹಿರಂಗಪಡಿಸಿವೆ, ಇಡಿ-ಬಿಜೆಪಿ ನಡುವಿನ ಸಂಬಂಧ ಮತ್ತು ಪಿತೂರಿ ಬಹಿರಂಗಗೊಂಡಿದ್ದು ಬಿಜೆಪಿ ಹೂಡಿದ ಸಂಚು ಛಿದ್ರಗೊಂಡಿದೆ ಎಂದಿದ್ದಾರೆ.