ಯುಪಿಎ ಮೊದಲ ಅವಧಿಗೆ ಅಧಿಕಾರಕ್ಕೆ ಬಂದಾಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಪ್ರಧಾನಮಂತ್ರಿ ಆಗಬೇಕಿತ್ತು ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ.
ಸೋನಿಯಾ ಗಾಂಧಿ ಭಾರತದ ಪ್ರಜೆ ಹಾಗೂ ಲೋಕಸಭಾ ಸದಸ್ಯಾರಾಗಿರುವಾಗ ಅವರ (ಸೋನಿಯಾ ಗಾಂಧಿಯ) ʼವಿದೇಶಿ ಮೂಲʼವನ್ನು ಉಲ್ಲೇಖಿಸಿ ಅವರಿಗೆ ಪ್ರಧಾನಮಂತ್ರಿ ಸ್ಥಾನವನ್ನು ನಿರಾಕರಿಸುವುದು “ಅರ್ಥಹೀನ” ಎಂದು ಅವರು ಹೇಳಿದ್ದಾರೆ.
ಶನಿವಾರ ಇಂದೋರ್‌ನಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ʼ2004 ರಲ್ಲಿ ಯುಪಿಎ ಬಹುಮತ ಗೆದ್ದಾಗ, ಸೋನಿಯಾ ಗಾಂಧಿ ಪ್ರಧಾನಿಯಾಗಲೆಂದು ನಾನು ಸಲಹೆ ನೀಡಿದ್ದೆ. ಅವರ ವಿದೇಶಿ ಮೂಲವನ್ನು ಉಲ್ಲೇಖಿಸಿ ಸ್ಥಾನ ನಿರಾಕರಿಸುವುದು ಅರ್ಥಹೀನ ಎಂದು ನಾನು ಭಾವಿಸಿದ್ದೆ. ಕಮಲಾ ಹ್ಯಾರಿಸ್ ಅಮೆರಿಕಾದ ಉಪಾಧ್ಯಕ್ಷೆ ಆಗಬಹುದಾದರೆ ಭಾರತದ ಪ್ರಜೆಯಾಗಿರುವ ಸೋನಿಯಾ ಗಾಂಧಿ ಯಾಕೆ ಭಾರತದ ಪ್ರಧಾನಿಯಾಗಬಾರದು? ಮಾಜಿ ಪ್ರಧಾನಮಂತ್ರಿ ರಾಜಿವ್ ಗಾಂಧಿ ಪತ್ನಿ ಹಾಗೂ ಲೋಕಸಭಾ ಸದಸ್ಯೆ ಸೋನಿಯಾ ಗಾಂಧಿ ಭಾರತದ ಪ್ರಧಾನಿ ಆಗಬಾರದೆಂದರೆ ಏನರ್ಥ? ಎಂದು ಮೋದಿ ಸಂಪುಟದ ಸಚಿವರು ಕೇಳಿದ್ದಾರೆ.
ಅದಾಗ್ಯೂ, ಸೋನಿಯಾ ಗಾಂಧಿಯವರಿಗೆ ಪ್ರಧಾನಿ ಆಗುವ ಇಚ್ಛೆ ಇಲ್ಲದಿದ್ದರೆ, ಮನಮೋಹನ ಸಿಂಗ್ ಅವರ ಬದಲಾಗಿ ಹಿರಿಯ ರಾಜಕಾರಣಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಬೇಕಿತ್ತು ಎಂದು ಅವರು ಹೇಳಿದ್ದಾರೆ.
ಶರದ್ ಪವಾರ್ ಅವರನ್ನು ಸಾರ್ವಜನಿಕ ನಾಯಕ ಎಂದು ವಿಶೇಷಿಸಿದ ಅಠಾವಳೆ, ಮನಮೋಹನ್ ಸಿಂಗ್ ಬದಲು ಪವಾರ್ ಪ್ರಧಾನ ಮಂತ್ರಿ ಹುದ್ದೆಗೆ ಸೂಕ್ತ ವ್ಯಕ್ತಿಯಾಗಿದ್ದರು ಎಂದು ಹೇಳಿದ್ದಾರೆ.
ವಿಶೇಷವೆಂದರೆ, 1999 ರಲ್ಲೇ ಸೋನಿಯಾ ಗಾಂಧಿ ಅವರ ವಿದೇಶಿ ಮೂಲವನ್ನು ಪ್ರಶ್ನಿಸಿದ್ದಕ್ಕೆ ಶರದ್ ಪವಾರ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಆ ಬಳಿಕ ಅವರು ತಮ್ಮದೆ ಸ್ವಂತ ಪಕ್ಷ ಎನ್‌ಸಿಪಿಯನ್ನು ಕಟ್ಟಿದ್ದರು. ಪ್ರಸ್ತುತ, ಎನ್‌ಸಿಪಿಯು ಮಹಾರಾಷ್ಟ್ರದಲ್ಲಿ ಶಿವಸೇನಾ ಹಾಗೂ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ರಚಿಸಿಕೊಂಡು ಸರ್ಕಾರ ನಿರ್ಮಿಸಿದೆ.
2004 ರಲ್ಲಿ ಶರದ್ ಪವಾರ್ ಕಾಂಗ್ರೆಸ್‌ನಿಂದ ಪ್ರಧಾನಿಯಾಗಿದ್ದಿದ್ದರೆ ಕಾಂಗ್ರೆಸ್‌ನ ಇಂದಿನ ಪರಿಸ್ಥಿತಿಯೇ ಬೇರೆ ರೀತಿ ಇರುತ್ತಿತ್ತು. ಕಾಂಗ್ರೆಸ್ ಇಂದು ಇಷ್ಟು ಅನಿಶ್ಚಿತತೆಯಿಂದ ಇರಬೇಕಾದ ಪ್ರಮೇಯವೇ ಬರುತ್ತಿರಲಿಲ್ಲ. ಕಾಂಗ್ರೆಸ್ ಬಲ ಸಂವರ್ಧನೆ ಮಾಡಬಹುದಿತ್ತು ಎಂದು ಅಠಾವಳೆ ಹೇಳಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್ ಒಳ ಜಗಳದಿಂದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿರುವ ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರನ್ನು ಬಿಜೆಪಿ ಅಥವಾ ಎನ್‌ಡಿಎ ಜೊತೆ ಸೇರುವಂತೆ ಕರೆ ನೀಡಿರುವ ಅಠಾವಳೆ, ಸಿಂಗ್ ಗಾದ ಅಪಮಾನಕ್ಕೆ ಪ್ರತ್ಯುತ್ತರ ನೀಡುವಂತೆ ಕೇಳಿದ್ದಾರೆ.
ಒಂದು ವೇಳೆ ಅಮರಿಂದರ್ ಸಿಂಗ್ ಬಿಜೆಪಿ ಸೇರ್ಪಡೆಗೊಂಡರೆ ಮುಂದಿನ ಪಂಜಾಬ್ ವಿಧಾನ ಸಭೆಯಲ್ಲಿ ಬಿಜೆಪಿ ಶಕ್ತಿ ಪಡೆಯುತ್ತದೆ ಎಂದು ಅವರು ಇದೇ ಸಂಧರ್ಭದಲ್ಲಿ ಹೇಳಿದ್ದಾರೆ.