ಕಾಂಗ್ರೆಸ್ ಪಕ್ಷದ ಚುನಾವಣೆ ಪ್ರಣಾಳಿಕೆ ಸಂಬಂಧ, ಕೋಲಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೋಲಾರ ಸಂಸದ ಮುನಿಸ್ವಾಮಿ, ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ʻಮೀಸಲಾತಿ ರದ್ದು ಮಾಡ್ತೀವಿ ಅಂತ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದವರಿಗೆ ತಾಕತ್ತಿದ್ದರೆ ಮೀಸಲಾತಿ ಹಾಗೂ ಭಜರಂಗದಳವನ್ನು ಮುಟ್ಟಿ ನೋಡಲಿ. ನಮಗೆ ತಾಕತ್ತಿತ್ತು ಅದಕ್ಕೆ ಪಿಎಫ್ ಐ ಬ್ಯಾನ್ ಮಾಡಿದ್ವಿ. ನಮಗೆ ತಾಕತ್ತು ಇತ್ತು ರಾಮ ಮಂದಿರ ನಿರ್ಮಾಣ ಮಾಡಿದ್ವಿ. ನಮಗೆ ತಾಕತ್ತು ಇದ್ದಿದ್ದರಿಂದಲೇ ತ್ರಿಬಲ್ ತಲಾಕ್ ಬ್ಯಾನ್ ಮಾಡಿದ್ವಿ. ಆರ್ಟಿಕಲ್ 370ರದ್ದು ಮಾಡಿದ್ವಿ. ಕಾಂಗ್ರೆಸ್ ಪಕ್ಷದವರಿಗೆ ತಾಕತ್ತಿದ್ರೆ ರಿಸರ್ವೇಷನ್ ಟಚ್ ಮಾಡಲಿ ನೋಡೋಣ ಎಂದು ಸಂಸದ ಮುನಿಸ್ವಾಮಿ ಸವಾಲೆಸೆದರು. ʻಕಾಂಗ್ರೆಸ್ಸಿನವರು ಒಳ ಮೀಸಲಾತಿ ಮಾಡುತ್ತೇವೆಂದು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದರು. ಆದ್ರೆ ಈವರೆಗೂ ಅದನ್ನು ಟಚ್ ಮಾಡಿಲ್ಲ. 60 ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ಜನ ನೋಡಿದ್ದಾರೆ. ಕಾಂಗ್ರೆಸ್ನವರು ಹೇಳುವುದನ್ನು ಮಾಡುವುದಿಲ್ಲ ಎಂದು ಎಲ್ಲರಿಗೂ ಗೊತ್ತಿದೆ ಅಂತ ಹೇಳಿದ್ರು.
ಬಳಿಕ ಮಾತ್ನಾಡಿದ ಅವರು, ʻಇನ್ನು ಕಾಂಗ್ರೆಸ್ ಅಭ್ಯರ್ಥಿಗಳಾದ ನಂಜೇಗೌಡ, ಎಸ್.ಎನ್. ನಾರಾಯಣಸ್ವಾಮಿ, ರೂಪಕಲಾ ಅವರ ವಿಚಾರದಲ್ಲಿ ನಾನು ಮಾಡಿರುವ ಆರೋಪಗಳು ನನ್ನ ವೈಯಕ್ತಿಕ ಅಲ್ಲ. ಅವರ ಕ್ಷೇತ್ರದಲ್ಲಿ ಸ್ಥಳೀಯರು ಮಾಡಿರುವ ಆರೋಪಗಳನ್ನೇ ನಾನು ಹೇಳಿದ್ದೇನೆ. ಈ ಬಾರಿ ಹಣಬಲ, ತೋಳ್ಬಲದಿಂದ ಚುನಾವಣೆ ನಡೆಯುತ್ತಿದೆ. 60 ವರ್ಷಗಳಿಂದ ಕೇಂದ್ರ ಸರ್ಕಾರದ ಹಣವನ್ನು ತಿಂದಿರುವುದರಿಂದ ಕಾಂಗ್ರೆಸ್ ಪಕ್ಷದವರ ಬಳಿ ಹೆಚ್ಚು ಹಣ ಇದೆ. ನಾಲ್ಕು ತಲೆಮಾರುಗಳಿಗಾಗುವಷ್ಟು ಹಣ ಮಾಡಿಕೊಂಡಿದ್ದೇವೆ ಎಂದು ರಮೇಶ್ ಕುಮಾರ್ ಅವರೇ ಹೇಳಿದ್ದಾರೆ. ನಾವು ಸುಳ್ಳು ಹೇಳಿ ಮತ ಕೇಳುವ ಅಭ್ಯಾಸ ಇಲ್ಲ. ಪ್ರಧಾನಿ ಮೋದಿ ಅವರು ಮಾಡಿರುವ ಕೆಲಸಗಳನ್ನ ಹೇಳಿ ಮತಗಳನ್ನು ಕೇಳುತ್ತಿದ್ದೇವೆ ಅಂತ ಸಂಸದ ಮುನಿಸ್ವಾಮಿ ಹೇಳಿದರು.