ಭೋಪಾಲ್: ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧದ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯವನ್ನು ರೋಗಗ್ರಸ್ತವನ್ನಾಗಿ ಮಾಡುತ್ತದೆ ಇದರಲ್ಲಿ ಯಾವುದೇ ಸಂಶಯ ಬೇಡ ಎಂದಿದ್ದಾರೆ.
ಮಧ್ಯಪ್ರದೇಶದ ಭೋಪಾಲ್ನಲ್ಲಿ ಕಾರ್ಯಕರ್ತ ಮಹಾಕುಂಭ ಸಮಾವೇಶವನ್ನುದ್ಧೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಕಾಂಗ್ರೆಸ್ ಆಡಳಿತ ನಡೆಸಿರುವ ಪ್ರತಿಯೊಂದು ರಾಜ್ಯವನ್ನು ಹಾಳು ಮಾಡಿದೆ. ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಬಂದರೆ ಅದೇ ರೀತಿ ಮಾಡಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಳೆದ 20 ವರ್ಷದಿಂದ ಮಧ್ಯಪ್ರದೇಶದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಈಗಿನ ಯುವಕರು ಕಾಂಗ್ರೆಸ್ ದುರಾಡಳಿತವನ್ನು ನೋಡದ ಅದೃಷ್ಟವಂತರು. ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಮಧ್ಯಪ್ರದೇಶದಲ್ಲಿ ಸುದೀರ್ಘವಾಗಿ ಆಡಳಿತ ನಡೆಸಿದ್ದು, ರಾಜ್ಯವನ್ನು ರೋಗಗ್ರಸ್ತವನ್ನಾಗಿ ಮಾಡಿದೆ. ನಾವು ಅಧಿಕಾರಕ್ಕೆ ಬರುವ ಮೂಲಕ ಕಾಂಗ್ರೆಸ್ನ ದುರಾಡಳಿತಕ್ಕೆ ಕೊನೆಗಾಣಿಸಿದ್ದೇವೆ.
ಬಿಜೆಪಿಯ ಡಬಲ್ ಇಂಜಿನ್ ಸರ್ಕಾರವು ದಣಿವರಿಯದೆ ಜನರ ಏಳಿಗೆಗಾಗಿ ದುಡಿಯುತ್ತಿದೆ. ಕಾರ್ಯಕರ್ತ ಮಹಾಕುಂಭ ಸಮಾವೇಶದಲ್ಲಿ ಪಾಲ್ಗೊಂಡಿರುವ ಜನರನ್ನು ನೋಡಿ ಅವರ ಮನಸ್ಸಿನಲ್ಲಿ ಏನಿದೆ ಎಂದು ನನಗೆ ಅರ್ಥವಾಗುತ್ತಿದೆ. ಮಧ್ಯಪ್ರದೇಶ ದೇಶದ ಹೃದಯಭಾಗದಲ್ಲಿ ನೆಲೆಸಿದ್ದು, ಜನರು ಪ್ರತಿಬಾರಿಯೂ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಮುಂದೆಯೂ ನಮ್ಮನ್ನು ಬೆಂಬಲಿಸಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾರ್ಯಕರ್ತರ ಮಹಾಕುಂಭ ಸಮಾವೇಶದಲ್ಲಿ ಹೇಳಿದ್ದಾರೆ.