ಧರ್ಮಸ್ಥಳದಲ್ಲಿ ಕೊಲೆ: ಎಸ್‌ಐಟಿಗೆ ಹೆಚ್ಚಿದ ಒತ್ತಾಯ.

‘ಧರ್ಮಸ್ಥಳದಲ್ಲಿ ಅಪಾರ ಸಂಖ್ಯೆಯ ಅತ್ಯಾಚಾರ, ಕೊಲೆ ಮತ್ತು ಹೆಣಗಳನ್ನು ಹೂಳಿರುವ ಪ್ರಕರಣದಲ್ಲಿ ಫಿರ್ಯಾದುದಾರ ಸಾಕ್ಷಿಗೆ ರಾಜ್ಯ ಸರ್ಕಾರವು ತಕ್ಷಣವೇ ಭದ್ರತೆ ಒದಗಿಸಬೇಕು. ಆರೋಪಗಳ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಬೇಕು’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ ನಂತರವೂ, ತನಿಖೆ ಸರಿಯಾಗಿ ಆಗುತ್ತಿಲ್ಲ. ಶವಗಳನ್ನು ಎಲ್ಲಿ ಹೂಳಲಾಗಿದೆ ಎಂಬುದನ್ನು ಖಾಲಿ ಹಾಳೆಯಲ್ಲಿ ಗುರುತು ಮಾಡಿಕೊಡು ಎಂದು ಪೊಲೀಸರು ಫಿರ್ಯಾದುದಾರ ಸಾಕ್ಷಿಯ ಮೇಲೆ ಒತ್ತಡ ಹೇರುತ್ತಿದ್ದಾರೆ. ಆತ ನೀಡಿರುವ ಹೇಳಿಕೆಗಳು ಆಯ್ದ ಮಾಧ್ಯಮಗಳಿಗೆ ಸೋರಿಕೆಯಾಗುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

ಸಾಕ್ಷಿಯು ತನ್ನ ವಕೀಲರೊಂದಿಗೆ ಒಂದು ಸ್ಥಳಕ್ಕೆ ತೆರಳಿ, ಕಳೇಬರವನ್ನು ತೆಗೆಯುವುದಾಗಿ ನ್ಯಾಯಾಲಯ ಮತ್ತು ಪೊಲೀಸರಿಗೆ ಮಾಹಿತಿ ನೀಡಿರುತ್ತಾರೆ. ಹೀಗಿದ್ದೂ ಪೊಲೀಸರು ಸ್ಥಳಕ್ಕೆ ತೆರಳಿಲ್ಲ. ಆತನ ಹೇಳಿಕೆ ದಾಖಲಿಸುವ ತನಿಖಾಧಿಕಾರಿಯು ಯಾರಿಗೋ ಕರೆ ಮಾಡಿ, ಅವರು ಸೂಚಿಸಿದ್ದಂತೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಹೀಗಾಗಿ ತಕ್ಷಣವೇ ತನಿಖಾ ತಂಡವನ್ನು ಬದಲಿಸಬೇಕು. ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಯ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ರಚಿಸಬೇಕು’ ಎಂದು ಒತ್ತಾಯಿಸಿದರು.
‘ಸಾಕ್ಷಿ ಮತ್ತು ಆತನ ವಕೀಲರಿಗೆ ಬೆದರಿಕೆ ಇದೆ. ಅವರಿಗೆ ತಕ್ಷಣವೇ ಭದ್ರತೆ ಒದಗಿಸಬೇಕು. ಅವರಿಗೆ ಏನಾದರೂ ಆದರೆ ಗೃಹ ಸಚಿವ, ರಾಜ್ಯದ ಪೊಲೀಸ್ ಮಹಾನಿರ್ದೇಶಕ ಮತ್ತು ಸರ್ಕಾರವೇ ಅದರ ಹೊಣೆ ಹೊರಬೇಕಾಗುತ್ತದೆ’ ಎಂದರು.

ವಕೀಲ ಸಿ.ಎಸ್.ದ್ವಾರಕನಾಥ್, ‘ಬಿಎನ್‌ಎಸ್ 183ನೇ ಸೆಕ್ಷನ್ ಅಡಿಯಲ್ಲಿ ಸಾಕ್ಷಿ ಫಿರ್ಯಾದಿ ನೀಡಿದ ಹೇಳಿಕೆ ಸಾಕ್ಷ್ಯವಾಗುತ್ತದೆ. ಈ ಹೇಳಿಕೆಗಳು ಖಾಸಗಿ ವ್ಯಕ್ತಿಗಳಿಗೆ ಸೋರಿಕೆಯಾಗುತ್ತಿದೆ. ಇದನ್ನು ತಪ್ಪಿಸಿ ಎಂದು ವಕೀಲರು ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.
‘ಧರ್ಮಸ್ಥಳದಲ್ಲಿ 367 ಬಾಲಕಿಯರು ಮತ್ತು ಯುವತಿಯರು ಅಪರಿಚಿತ ಶವಗಳಾಗಿ ಪತ್ತೆಯಾಗಿದ್ದಾರೆ. ಪತ್ತೆಯಾಗದ ಶವಗಳೂ ಇನ್ನೂ ಇರುವ ಶಂಕೆಯಿಂದ. ಅವರೆಲ್ಲರಿಗೂ ನ್ಯಾಯ ಸಿಗಬೇಕಾದರೆ ತನಿಖೆ ನಡೆಯಬೇಕು’ ಎಂದು ವಕೀಲ ಎಸ್.ಬಾಲನ್ ಒತ್ತಾಯಿಸಿದರು. ‘ಬಾಲಕಿಯರು ಮತ್ತು ಯುವತಿಯರು ಮಾತ್ರವಲ್ಲದೆ ಯುವಕರು ಹಾಗೂ ಪುರುಷರ ಹತ್ಯೆಗಳೂ ನಡೆದಿರುವ ಬಗ್ಗೆ ಶಂಕೆಯಿದೆ. ಸಾಮಾನ್ಯ ವ್ಯಕ್ತಿಗಳಿಂದ ಈ ಮಟ್ಟದ ಕೃತ್ಯ ಎಸಗಲು ಸಾಧ್ಯವಿಲ್ಲ. ಅತ್ಯಂತ ಪ್ರಭಾವಿಗಳು ಇದರ ಹಿಂದೆ ಇರುವ ಶಂಕೆಯಿದೆ. ಎಸ್‌ಐ ದರ್ಜೆಯ ಅಧಿಕಾರಿಯಿಂದ ತನಿಖೆ ಸಾಧ್ಯವಿಲ್ಲ’ ಎಂದರು.

‘ಕೇರಳದ ಸಾವಿರಾರು ಭಕ್ತಾದಿಗಳು ಪ್ರತಿವರ್ಷ ಧರ್ಮಸ್ಥಳಕ್ಕೆ ಬಂದು ಹೋಗುತ್ತಾರೆ. ಆರೋಪಗಳ ಪ್ರಕಾರ ನೂರಾರು ಶವಗಳನ್ನು ಗೌಪ್ಯವಾಗಿ ಹೂತಿರುವುದು ನಿಜವೇ ಆಗಿದ್ದರೆ ಅವುಗಳಲ್ಲಿ ಕೇರಳದ ಸಂತ್ರಸ್ತರೂ ಇರಬಹುದು. ಹೀಗಾಗಿ ಕರ್ನಾಟಕದಲ್ಲಿ ತನಿಖೆ ಸರಿಯಾಗಿ ನಡೆಯುವಂತೆ ಖಚಿತಪಡಿಸಿಕೊಳ್ಳುವ ಎಲ್ಲ ಸಾಂವಿಧಾನಿಕ ಹಕ್ಕುಗಳೂ ಕೇರಳ ಸರ್ಕಾರಕ್ಕೆ ಇದೆ’ ಎಂದು ವಕೀಲ ಕೆ.ವಿ.ಧನಂಜಯ ಅವರು ಹೇಳಿದ್ದಾರೆ. ಕೇರಳ ಸರ್ಕಾರವು ಅಲ್ಲಿನ ವಿಧಾನಸಭೆಯಲ್ಲಿ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕು ಎಂದು ಧನಂಜಯ ಅವರು ಬುಧವಾರ ನೀಡಿದ್ದ ಪತ್ರಿಕಾ ಹೇಳಿಕೆಗೆ ಆಕ್ಷೇಪ ವ್ಯಕ್ತವಾಗಿತ್ತು. ಅದಕ್ಕೆ ಪ್ರತಿಕ್ರಿಯೆಯಾಗಿ ಗುರುವಾರ ಮತ್ತೊಂದು ಹೇಳಿಕೆ ನೀಡಿರುವ ಅವರು ‘ಕೇರಳ ವಿಧಾನಸಭೆಯಲ್ಲಿ ಈ ವಿಚಾರ ಚರ್ಚೆಯಾಗುವುದಾದರೆ ಕರ್ನಾಟಕದ ವಿಧಾನಸಭೆಯಲ್ಲೂ ಚರ್ಚೆಗೆ ಎತ್ತಿಕೊಳ್ಳಬಹುದು. ಇದರಿಂದ ರಾಜ್ಯದ ಸಾರ್ವಭೌಮತೆಗೆ ಧಕ್ಕೆಯಾಗುವುದಿಲ್ಲ’ ಎಂದಿದ್ದಾರೆ.