
ಮಿಲೆನಿಯಂ ಸಮೂಹದ ಮುಂದೆ ಪರ್ಯಾಯವೊಂದನ್ನು ಇಡದಿದ್ದರೆ ನಮ್ಮ ಶ್ರಮ ನಿರರ್ಥಕವಾಗುತ್ತದೆ
ನಾ ದಿವಾಕರ
ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ರಾಜಕೀಯ ಚಟುವಟಿಕೆಗಳನ್ನು ನಿಯಂತ್ರಿಸುವ ಭರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ, 2013ರಲ್ಲಿ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ನಿಯಮಗಳನ್ನೇ ಮತ್ತಷ್ಟು ವಿಸ್ತರಿಸಿ ಎಲ್ಲ ಸಂಘ-ಸಂಘಟನೆಗಳಿಗೂ ಅನ್ವಯಗೊಳಿಸಿದೆ. 2013ರ ಆದೇಶದಲ್ಲಿ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ, ಸರ್ಕಾರಿ ಶಾಲೆ ಮತ್ತು ಶಾಲಾ ಮೈದಾನಗಳನ್ನು, ಕಟ್ಟಡಗಳನ್ನು, ಶೈಕ್ಷಣಿಕ ಮತ್ತು ಕ್ರೀಡೆ ಇತರ ಚಟುವಟಿಕೆಗಳಿಗೆ ಮಾತ್ರ ಸೀಮಿತಗೊಳಿಸಿತ್ತು. ಶಿಕ್ಷಣೇತರ ಚಟುವಟಿಕೆ-ಸಭೆಗಳಿಗೆ ಅನುಮತಿ ನೀಡದಂತೆ ನಿರ್ಬಂಧ ಹೇರಿತ್ತು. ಹಾಲಿ ಕಾಂಗ್ರೆಸ್ ಸರ್ಕಾರ , ಆರೆಸ್ಸೆಸ್ ಸಂಘಟನೆಯ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ, ಇದೇ ಕಾಯ್ದೆಯನ್ನೇ ಪರಿಷ್ಕರಿಸಿ, ಹೊಸ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಿದೆ. ಸರ್ಕಾರದ ಈ ಕ್ರಮ ಪ್ರಜಾಸತ್ತಾತ್ಮಕ ದನಿಯನ್ನು ದಾಖಲಿಸಲು ಸಾರ್ವಜನಿಕ ಜಾಗಗಳನ್ನು ಬಳಸುವ ಎಲ್ಲ ಸಂಘಟನೆಗಳಿಗೂ ಮಾರಕವಾಗಿ ಪರಿಣಮಿಸುತ್ತದೆ.
ಪಸ್ತುತ ಆದೇಶದ ಅನುಸಾರ, ಸರ್ಕಾರಿ ಜಾಗಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಖಾಸಗಿ ಸಂಘಟನೆಗಳು, ಸಂಘಗಳು ಮತ್ತು ಟ್ರಸ್ಟ್‌ಗಳು ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಆದೇಶದನ್ವಯ ಸರ್ಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳು, ಉದ್ಯಾನಗಳು, ಆಟದ ಮೈದಾನಗಳು ಮತ್ತು ಸಾರ್ವಜನಿಕ ರಸ್ತೆಗಳೂ ಸಹ ನಿರ್ಬಂಧಿತ ಜಾಗಗಳಾಗುತ್ತವೆ. ಹತ್ತು ಜನಕ್ಕಿಂತಲೂ ಹೆಚ್ಚು ಭಾಗವಹಿಸಿದ್ದರೆ ಅಂತಹ ಮೆರವಣಿಗೆಗಳನ್ನೂ ಈ ಜಾಗಗಳಲ್ಲಿ ನಿರ್ಬಂಧಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದರೆ, ಆಯೋಜಕರಿಗೆ ದಂಡ ವಿಧಿಸಲಾಗುತ್ತದೆ. ಆರೆಸ್ಸೆಸ್ ಸಂಘಟನೆಯ ಪ್ರಸ್ತಾಪ ಮಾಡದೆ ಇದ್ದರೂ, ರಾಜ್ಯ ಸರ್ಕಾರದ ಉದ್ದೇಶ ಇಲ್ಲಿ ಸ್ಪಷ್ಟವಾಗಿದ್ದು, ನಿಷೇಧ ಹೇರುವುದು ಕಾನೂನಾತ್ಮಕ ಮಾನ್ಯತೆ ಪಡೆಯದೆ ಇರುವುದರಿಂದ, ಚಟುವಟಿಕೆಗಳನ್ನು ನಿರ್ಬಂಧಿಸುವ ತಂತ್ರ ಅನುಸರಿಸಿದೆ.
ರಾಜಕೀಯ ಕ್ರಮ-ತಾತ್ವಿಕ ಗೊಂದಲ
ಕಾಂಗ್ರೆಸ್ ಸರ್ಕಾರದ ಈ ನಿರ್ಧಾರಕ್ಕೆ ಸೈದ್ಧಾಂತಿಕ ತಳಹದಿ, ತಾತ್ವಿಕ ಚೌಕಟ್ಟು ಆಧಾರವಾಗಿಲ್ಲ ಎನ್ನುವುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ. ಏಕೆಂದರೆ ಆರೆಸ್ಸೆಸ್ ತನ್ನದೇ ಆದ ಒಂದು ಸ್ಪಷ್ಟ ತತ್ವ-ಸಿದ್ಧಾಂತದ ಅನುಸಾರ, ಎಲ್ಲ ಕಾರ್ಯಕ್ರಮಗಳನ್ನೂ ರೂಪಿಸುತ್ತದೆ, ಸಂಘಪರಿವಾರದ ಸಹ ಸಂಘಟನೆಗಳಾದ ಭಜರಂಗದಳ, ವಿಶ್ವ ಹಿಂದೂ ಪರಿಷತ್ ಮುಂತಾದವು ನಾಗಪುರದ ಆದೇಶದ ಅನುಸಾರವೇ ನಡೆದುಕೊಳ್ಳುತ್ತವೆ. ತಮ್ಮದೇ ಆದ ಸ್ವಂತ ಸಂವಿಧಾನ ಅಥವಾ ಸೈದ್ಧಾಂತಿಕ ಆಕರಗಳಿಲ್ಲದೆಯೇ ಈ ಸಹ ಸಂಘಟನೆಗಳು ಕಾರ್ಯನಿರ್ವಹಿಸುತ್ತಿರುವುದು ಚಾರಿತ್ರಿಕ ಸತ್ಯ. ನೂರು ವರ್ಷ ಪೂರೈಸಿರುವ ಆರೆಸ್ಸೆಸ್ ತನ್ನ ಫ್ಯಾಸಿಸ್ಟ್ ಚಿಂತನಾಧಾರೆಗಳನ್ನು ಕಾಲಕಾಲಕ್ಕೆ ಪುನರ್ ಪರಿಷ್ಕರಿಸುತ್ತಾ, ಬದಲಾಗುತ್ತಿರುವ ಭಾರತದ ರಾಜಕಾರಣಕ್ಕೆ ಪೂರಕವಾಗಿ, ತನ್ನ ಚಟುವಟಿಕೆಗಳನ್ನು ರೂಪಿಸುತ್ತಾ ಬಂದಿದೆ. ಆದರೆ ಅದರ ತಾತ್ವಿಕ ತಳಹದಿ ಕಿಂಚಿತ್ತೂ ಬದಲಾಗಿಲ್ಲ ಎನ್ನುವುದು ಗಮನಿಸಬೇಕಾದ ಅಂಶ.
ರಾಜಕೀಯ ಪರಿಭಾಷೆಯಲ್ಲಿ ಆರೆಸ್ಸೆಸ್ ಸಂಘಟನೆಯನ್ನು ಅಥವಾ ಸಂಘಪರಿವಾರವನ್ನು ʼ ಫ್ಯಾಸಿಸ್ಟ್ ʼ ಎಂದು ಬಣ್ಣಿಸುವುದು ಸ್ವೀಕೃತ ಪರಿಭಾಷೆಯಾಗಿ ಬಳಕೆಯಾಗುತ್ತಿದೆ. ಈ ಸೈದ್ಧಾಂತಿಕ ತಳಹದಿಯನ್ನು ಅಲುಗಾಡಿಸುವ ನಿಟ್ಟಿನಲ್ಲಿ ಅಥವಾ ತಾತ್ವಿಕವಾಗಿ ಭೇದಿಸುವ ನಿಟ್ಟಿನಲ್ಲಿ , ಶತಮಾನದ ಇತಿಹಾಸ ಹೊಂದಿರುವ ಕಾಂಗ್ರೆಸ್ ಆಗಲೀ, ಎಡಪಕ್ಷಗಳಾಗಲೀ ಅಥವಾ ಪ್ರಗತಿಪರ-ಪುರೋಗಾಮಿ ಚಿಂತನಾ ವಾಹಿನಿಗಳಾಗಲೀ ಯಾವ ರೀತಿಯ ಬೌದ್ಧಿಕ-ತಾತ್ವಿಕ-ಸಾಂಸ್ಥಿಕ ಅಥವಾ ರಾಜಕೀಯ ಕಾರ್ಯಸೂಚಿಯನ್ನು ಸಿದ್ಧಪಡಿಸಿವೆ ? ಬಹುಶಃ ಈ ಪ್ರಶ್ನೆಗೆ ಉತ್ತರವನ್ನು ಆಂತರಿಕ ಶೋಧದ ಮೂಲಕ, ಆತ್ಮಾವಲೋಕನದ ಹಾದಿಯಲ್ಲಿ, ಸಾಫಲ್ಯ ವೈಫಲ್ಯಗಳ ನೆಲೆಯಲ್ಲಿ ಕಂಡುಕೊಳ್ಳಬಹುದು. ಆರೆಸ್ಸೆಸ್ ಅಥವಾ ಸಂಘಪರಿವಾರವನ್ನು ವಿಮರ್ಶಾತ್ಮಕವಾಗಿ ನೋಡುವುದು, ಪ್ರತಿಕ್ರಿಯಾತ್ಮಕವಾಗಿ ವಿರೋಧಿಸುವುದು ಅನೂಚಾನವಾಗಿ ನಡೆದುಬಂದಿದ್ದರೂ, ಇದನ್ನು ದಾಟಿ ಏನಾದರೂ ಆಲೋಚನೆ ಬಂದಿದ್ದರೆ, ಅದು ನಿಷೇಧ, ನಿರ್ಬಂಧ, ಚಟುವಟಿಕೆಗಳ ನಿಯಂತ್ರಣ ಇಷ್ಟಕ್ಕೇ ಸೀಮಿತವಾಗಿರುವುದು ಒಪ್ಪಲೇಬೇಕಾದ ಸತ್ಯ.

ಶಕ್ತಿ ಪ್ರದರ್ಶನ-ಸಾಮರ್ಥ್ಯದ ಬಳಕೆ
ಕೆಲವು ಅಂಬೇಡ್ಕರ್‌ವಾದಿ ಸಂಘಟನೆಗಳು ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನಕ್ಕೆ ಅನುಮತಿ ನೀಡಿದರೆ, ತಾವೂ ಸಹ ನೀಲಿ ಶಾಲು ಧರಿಸಿ, ಪಥಸಂಚಲನ ನಡೆಸುತ್ತೇವೆ ಎಂದು ಘೋಷಿಸಿರುವುದು, ಮೇಲ್ನೋಟಕ್ಕೆ ರೋಮಾಂಚಕ ಎನಿಸಿದರೂ, ತಾತ್ವಿಕವಾಗಿ ಅಪ್ರಬುದ್ಧ ಚಿಂತನೆ ಎನಿಸುತ್ತದೆ. ʼ ಪಥ ಸಂಚಲನ ʼ ಎನ್ನುವ ಪ್ರಕ್ರಿಯೆ ಒಂದು ಸಂಘಟನೆಯ, ಸಂಸ್ಥೆಯ ಮತ್ತು ಅದಕ್ಕೆ ಅಡಿಪಾಯವಾಗಿರುವ ಸೈದ್ಧಾಂತಿಕ ಆಲೋಚನೆಗಳ ಶಕ್ತಿ ಪ್ರದರ್ಶನದ ಮಾದರಿ. ಇಲ್ಲಿ ಎಷ್ಟು ಜನರು ಭಾಗವಹಿಸುತ್ತಾರೆ ಎನ್ನುವುದಕ್ಕಿಂತಲೂ, ಎಷ್ಟು ಶಿಸ್ತುಬದ್ಧತೆಯಿಂದ, ತದೇಕಚಿತ್ತ ಗುರಿಯೊಂದಿಗೆ, ಭವಿಷ್ಯದತ್ತ ಮುಖಮಾಡಿ, ಸದಸ್ಯರು ಭಾಗವಹಿಸುತ್ತಾರೆ ಎನ್ನುವುದು ಮುಖ್ಯವಾಗುತ್ತದೆ. ಸೇನಾ ವಲಯಗಳಲ್ಲಿ ಇದನ್ನು March past ಎಂದೂ, ನಿರ್ದಿಷ್ಟ ಉದ್ದೇಶದೊಂದಿಗೆ ನಡೆಯುವುದನ್ನು Route march ಎಂದು ಕರೆಯಲಾಗುತ್ತದೆ. ಎರಡೂ ಪ್ರಕ್ರಿಯೆಗಳಲ್ಲಿ ಸಾಂಘಿಕ ಶಕ್ತಿ ಪ್ರದರ್ಶನವೇ ಮುಖ್ಯವಾಗಿರುತ್ತದೆ.
ಆರೆಸ್ಸೆಸ್ ತನ್ನ ಸಾಂಘಿಕ ಶಕ್ತಿ ಮತ್ತು ಭವಿಷ್ಯದ ಗುರಿಯನ್ನು ಸಮಾಜಕ್ಕೆ ಮನದಟ್ಟು ಮಾಡಲೆಂದೇ ಆಗಿಂದಾಗ್ಗೆ ಪಥಸಂಚಲನವನ್ನು ನಡೆಸುತ್ತಿರುತ್ತದೆ. ಈ ಪ್ರಕ್ರಿಯೆಯನ್ನು ಆಚರಣಾತ್ಮಕವಾಗಿ ಎದುರಿಸಿದರೆ ಅದು ಕೇವಲ ಪ್ರತಿಕ್ರಿಯಾತ್ಮಕ ಚಟುವಟಿಕೆಯಾಗಿಬಿಡುತ್ತದೆ. ಹೀಗೆ ಪ್ರತಿಕ್ರಿಯಿಸುವ ಸಂಘಟನೆಗೆ ಸ್ಪಷ್ಟ ಭವಿಷ್ಯದ ಗುರಿ ಅಥವಾ ಸಂಘಟನಾತ್ಮಕ ಶಕ್ತಿ ಇದೆಯೇ ಎಂಬ ಪ್ರಶ್ನೆ ನಮ್ಮನ್ನು ಕಾಡಬೇಕಾಗುತ್ತದೆ. ಎರಡೂ ನೆಲೆಗಳಲ್ಲಿ ಪ್ರಧಾನವಾಗಿ ಇರುವುದು ಭೌತಿಕ ಐಕ್ಯತೆ ಮತ್ತು ತಾತ್ವಿಕ ಏಕತೆ. ಭಾರತದ ಎಡಪಕ್ಷಗಳಾಗಲೀ, ಅಂಬೇಡ್ಕರ್‌ವಾದಿ ದಲಿತ ಸಂಘಟನೆಗಲಾಗಲೀ ಈ ಎರಡನ್ನೂ ಸಾಧಿಸಲು ಈವರೆಗೂ ಏಕೆ ಸಾಧ್ಯವಾಗಿಲ್ಲ ? ಸಾಂದರ್ಭಿಕವಾಗಿ ಒಂದು ವೇದಿಕೆಯನ್ನು ಹಂಚಿಕೊಳ್ಳುವುದು ತಾತ್ಕಾಲಿಕ ಸಮಾಧಾನ ನೀಡುತ್ತದೆ. ಆದರೆ ತಾವು ಅವಲಂಬಿಸುವ ಸಿದ್ಧಾಂತ-ತತ್ವಗಳು ಭವಿಷ್ಯದಲ್ಲಿ ಸಂಘಟನೆಯನ್ನು ಹೇಗೆ ಮುನ್ನಡೆಸುತ್ತವೆ ಎಂಬ ಜಟಿಲ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ.

ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ಇದೇ ಜಿಜ್ಞಾಸೆಯನ್ನು ಎದುರಿಸುತ್ತಿದೆ. ಏಕೆಂದರೆ ತಾತ್ವಿಕ ನೆಲೆಯಲ್ಲಿ ಆರೆಸ್ಸೆಸ್‌ನ ಅಂತರಂಗವನ್ನು ಭೇದಿಸಲು ಪಕ್ಷಕ್ಕೆ ಸಾಧ್ಯವಾಗಿಲ್ಲ. ಚುನಾವಣಾ ರಾಜಕಾರಣ, ಕೆಲವು ಸಂದರ್ಭಗಳ ಒಳ ಒಪ್ಪಂದಗಳಿಂದಾಚೆ ನೋಡಿದಾಗ, ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿರುವಾಗ ಆರೆಸ್ಸೆಸ್ ಚಟುವಟಿಕೆಗಳನ್ನು ನಿರ್ಬಂಧಿಸುವ ಉಪಕ್ರಮಗಳನ್ನು ಮಾತ್ರವೇ ಪ್ರಯೋಗಿಸಿರುವುದನ್ನು ಕಾಣಬಹುದು. ಯಾವುದೇ ಒಂದು ಸಂಘಟನೆಯನ್ನು ನಿಷೇಧಿಸುವ ಉಪಕ್ರಮವು ಎದುರಿಸಬೇಕಾದ ಕಾನೂನು ಮತ್ತು ನ್ಯಾಯಾಂಗದ ಅಡೆತಡೆಗಳನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಸರ್ಕಾರ ನಿಷೇಧಿಸುವ ದುಸ್ಸಾಹಸಕ್ಕೆ ಮುಂದಾಗದೆ, ನಿರ್ಬಂಧಗಳ ಮೂಲಕ ನಿಯಂತ್ರಣಾಧಿಕಾರವನ್ನು ಪ್ರಯೋಗಿಸಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಕಾಂಗ್ರೆಸ್ ಪಕ್ಷದೊಳಗೆ ಇರುವ ಆರೆಸ್ಸೆಸ್ ತತ್ವಗಳಿಗೆ ಹತ್ತಿರವಾದ ನಾಯಕರು ಈ ಆಡಳಿತಾತ್ಮಕ ಕ್ರಮಗಳಿಗೂ ತೊಡಕಾಗುತ್ತಿರುವುದು, ಈಗಿನ ಸನ್ನಿವೇಶದಲ್ಲೂ ಗುರುತಿಸಬಹುದು.
Brain Wash ಮತ್ತು ಸಾಂಘಿಕ ರೂಪ
ಸಾಮಾನ್ಯವಾಗಿ ಪುರೋಗಾಮಿ-ಪ್ರಗತಿಶೀಲ-ಎಡಪಂಥೀಯ ಚಳುವಳಿಗಳಲ್ಲಿ, ಆರೆಸ್ಸೆಸ್ ಯುವ ಸಮೂಹವನ್ನು ಆಕರ್ಷಿಸುವ ಸಲುವಾಗಿ, Brain Wash ಮಾಡುತ್ತಿದೆ ಎಂಬ ಮಾತುಗಳು ಕೇಳಿಬರುತ್ತವೆ. ಆಂತರಿಕ ಪ್ರಜಾಪ್ರಭುತ್ವ ಇಲ್ಲದ, ವಿಶಾಲ ಹಂದರದ ಯಾವುದೇ ಸಂಘಟನೆಯಾದರೂ ಇದನ್ನೇ ಮಾಡುತ್ತದೆ. ಏಕೆಂದರೆ ಅಲ್ಲಿ ಮೇಲಿನವರು ಹೇಳಿದ್ದನ್ನು ಶಿರಸಾವಹಿಸಿ ಪಾಲಿಸುವ, ಅನುಸರಿಸುವ ಕೆಳಹಂತದ ಕಾರ್ಯಕರ್ತರು ಬೇಕಾಗುತ್ತಾರೆ. ಪ್ರಶ್ನಿಸುವುದು ಅಪರಾಧವಾಗಿ ಕಾಣುತ್ತದೆ. ಭಿನ್ಮಮತವನ್ನು ವಿರೋಧಿ ನೆಲೆಯಲ್ಲೇ ನೋಡಲಾಗುತ್ತದೆ. ಮಾವೋವಾದಿ ಪಕ್ಷಗಳಲ್ಲೂ ಇದೇ ಮಾದರಿಯನ್ನು, ಭಿನ್ನ ರೂಪದಲ್ಲಿ( ಪರಿಭಾಷೆಯಲ್ಲಿ) ಗುರುತಿಸಬಹುದು. ಸಿದ್ಧಮಾದರಿಗಳನ್ನು ಯುವ ಸಮೂಹದ ಮುಂದಿಟ್ಟು, ಹೋರಾಟದ ಅಂತಿಮ ಗುರಿ ತಲುಪಲು ಅನ್ಯ ಮಾರ್ಗಗಳಾಗಲೀ, ಭಿನ್ನ ಚಿಂತನಾ ಲಹರಿಯಾಗಲೀ ಇಲ್ಲದ ಹಾಗೆ ನಿಯಂತ್ರಿಸುವ ವಿಧಾನವನ್ನು ಇಲ್ಲಿ ಅನುಸರಿಸಲಾಗುತ್ತದೆ.

ಇಲ್ಲಿ ಪ್ರಶ್ನೆ ಇರುವುದು Brain Wash ಪ್ರಕ್ರಿಯೆ ಅಲ್ಲ. ಬದಲಾಗಿ, ಈ ಪ್ರಕ್ರಿಯೆಗೆ ಒಳಗಾಗಿರುವ ಯುವ ಸಮೂಹ ಏಕೆ ಸುಲಭವಾಗಿ ಅತ್ತ ಕಡೆ ಸಾಗುತ್ತಿದೆ ? ಅಂಬೇಡ್ಕರ್ ಅವರನ್ನು ಆರಾಧಿಸುವ ದಲಿತ ಸಮುದಾಯದಲ್ಲೂ ಸಹ ಇದು ಏಕೆ ಸಾಧ್ಯವಾಗುತ್ತಿದೆ ? ಇಂದಿಗೂ ಅವಕಾಶವಂಚಿತರಾಗಿಯೇ, ವ್ಯವಸ್ಥೆಯ ದಬ್ಬಾಳಿಕೆಯಲ್ಲೇ ಬದುಕು ಸವೆಸುತ್ತಿರುವ ಬುಡಕಟ್ಟು ಸಮುದಾಯಗಳೇಕೆ ಅತ್ತ ಕಡೆ ವಾಲುತ್ತಿವೆ? ಮಹಿಳಾ ದೌರ್ಜನ್ಯಗಳ-ಅಸ್ಪೃಶ್ಯತೆಯ-ಅತ್ಯಾಚಾರಗಳ ಬಗ್ಗೆ ಚಕಾರವೆತ್ತದಿದ್ದರೂ, ಈ ಜನಸಮೂಹಗಳು ಏಕೆ ಸಂಘಪರಿವಾರದ ಸಂಘಪರಿವಾರಕ್ಕೆ ಪದಾತಿ ದಳಗಳನ್ನು ಒದಗಿಸುತ್ತಿವೆ ? ಎಲ್ಲರನ್ನೂ Brain Wash ಮಾಡಲಾಗಿದೆ ಎನ್ನಲಾಗುವುದಿಲ್ಲ. ಈ ಶೋಷಿತ ಸಮುದಾಯಗಳಿಗೆ, ಸಮಾಜಗಳಿಗೆ ಪರ್ಯಾಯಗಳು ಕಾಣುತ್ತಿಲ್ಲ. ಅಥವಾ ಪರ್ಯಾಯಗಳಿವೆ ಎಂದು ಪ್ರಚಾರ ಮಾಡುವ ಪ್ರಯತ್ನಗಳು ಪುರೋಗಾಮಿ ಚಿಂತನಾವಾಹಿನಿಗಳಿಂದ ನಡೆಯುತ್ತಿಲ್ಲ. ಅಲ್ಲವೇ ?
ಭಾರತದ ಸಮನ್ವಯತೆ, ಬಹುಸಾಂಸ್ಕೃತಿಕ ನೆಲೆಗಳು, ಜನಪದೀಯ ಸೌಹಾರ್ದ ನೆಲೆಗಳು , ಇವುಗಳನ್ನು ಕಾಪಾಡುವುದನ್ನೇ ಪ್ರಧಾನ ಕಾರ್ಯಸೂಚಿಯಾಗಿ ಅಳವಡಿಸಿಕೊಂಡಿರುವ ಪುರೋಗಾಮಿ ಚಳುವಳಿಯಲ್ಲಿ, ತಾವು ಪ್ರತಿನಿಧಿಸುವ ಸಮಾಜಗಳಲ್ಲಿ ಇರುವ, Brain Wash ಗೆ ಒಳಗಾಗಿರುವ ಯುವ ಸಮೂಹವನ್ನು, ಶೋಷಿತ-ದಮನಿತರನ್ನು ಸಂಪರ್ಕಿಸಿ, ಸಮಾಲೋಚನೆ ನಡೆಸುವ ಸಣ್ಣ ಅಭಿಯಾನದ ಆಲೋಚನೆ ಸಾಧ್ಯವಾಗಿದೆಯೇ ? ಇದು Reverse Wash ಆಗಬೇಕಿಲ್ಲ, ಆದರೆ ಆ ಸಮಾಜಗಳಲ್ಲಿ ಭಿನ್ನ ದಿಕ್ಕಿನಲ್ಲಿ ಸಾಗುತ್ತಿರುವ ಅಥವಾ ದಿಕ್ಕು ತಪ್ಪುತ್ತಿರುವ ಯುವ ಜನಾಂಗದ ಮನಸ್ಸಿನಲ್ಲಿ ಏನಿದೆ ? ಏಕೆ ಪುರೋಗಾಮಿ ಚಿಂತನೆಗಳಿಗೆ ಅವರುಗಳು ವಿಮುಖರಾಗಿದ್ದಾರೆ ? ಆಧುನಿಕತೆಯನ್ನು ಒಪ್ಪಿಕೊಂಡೇ ಏಕೆ ಪುರಾತನ ಜೀವನ ಮೌಲ್ಯಗಳಿಗೆ, ಸಾಂಪ್ರದಾಯಿಕ ನಂಬಿಕೆ, ಆಚರಣೆಗಳಿಗೆ ಶರಣಾಗುತ್ತಿದ್ದಾರೆ ? ಈ ಪ್ರಶ್ನೆಗಳಿಗೆ ಉತ್ತರ ಅವರಿಂದಲೇ ಪಡೆಯಬೇಕಲ್ಲವೇ ?
ತಾತ್ವಿಕ ಚಿಂತನೆಗಳ ಪ್ರಸರಣ-ಹರಿವು
ಇದಕ್ಕೆ ಮುಖ್ಯವಾಗಿ ಅವರನ್ನು ಸಂಪರ್ಕಿಸಿ, ಅವರ ಜಿಜ್ಞಾಸೆಗಳಿಗೆ ಸ್ಪಂದಿಸಿ, ಅವರು ಅನುಸರಿಸುವ ನೆಲ ಸಂಸ್ಕೃತಿಯ ಆಚರಣೆಗಳನ್ನು ಸಮ್ಮಾನಿಸಿ, ಅದರೊಳಗಿರುವ ಪುರಾತನ ಜೀವ ವಿರೋಧಿ ಮೌಲ್ಯಗಳನ್ನು ಹೊರಗೆಡಹುವುದು ಅವಶ್ಯವಾಗಿ ಆಗಬೇಕಿರುವ ಕೆಲಸ. ಇದು ಅಲ್ಲಲ್ಲಿ ನಡೆಯುತ್ತಿರಬಹುದು, ಆದರೆ ಸಂಘಟನಾತ್ಮಕವಾಗಿ, ಒಂದು ಬೌದ್ಧಿಕ ಚೌಕಟ್ಟಿನೊಳಗೆ, ತಾತ್ವಿಕ ತಳಹದಿಯ ಮೇಲೆ ಆಗುತ್ತಿಲ್ಲ ಎನ್ನುವುದು ವಾಸ್ತವ. ಈ ಹಾದಿಯಲ್ಲಿ ಸಾಗುವ ಇಚ್ಛಾಶಕ್ತಿ ಕಾಂಗ್ರೆಸ್ ಅಥವಾ ಜೆಡಿಎಸ್ ಮತ್ತಿತರ ಪ್ರಾದೇಶಿಕ ಪಕ್ಷಗಳಿಗೆ ಇರಲು ಸಾಧ್ಯವೇ ಇಲ್ಲ. ಆದರೆ ಭಾರತದ ಬಹುತ್ವವನ್ನು ಕಾಪಾಡುವ ನೈತಿಕ ಜವಾಬ್ದಾರಿ ಹೊತ್ತಿರುವ ದಲಿತ ಸಂಘಟನೆಗಳಿಗೆ, ಎಡಪಕ್ಷಗಳಿಗೆ, ಎಡಪಂಥೀಯ ಸಮೂಹ ಸಂಘಟನೆಗಳಿಗೆ, ಮಹಿಳಾ ಸಂಘಟನೆಗಳಿಗೆ ಸಾಧ್ಯವಿದೆ ಅಲ್ಲವೇ ? ಇದು ಸಾಧ್ಯವಾಗುತ್ತಿಲ್ಲ. ಆದರೆ ಆಗಲೇಬೇಕಲ್ಲವೇ ? ನಮ್ಮ ಸಂವಿಧಾನದಲ್ಲಿ ರಿಫಾರ್ಮ್ = ಸಮಾಜ ಸುಧಾರಣೆ ಒಂದು ಕರ್ತವ್ಯವಾಗಿ ವಿಧಿಸಲ್ಪಟ್ಟಿದೆ
ನಮಗೆ, ಅಂದರೆ ಪುರೋಗಾಮಿ ಚಿಂತನಾ ವಲಯದ ಸಂಘಟನೆಗಳಿಗೆ ಹಾದಿಯಲ್ಲಿ ಸಾಗಲು ನೆರವಾಗುವ ಬೌದ್ಧಿಕ ಕಣಜ ಕಡಲಾಳದಷ್ಟು ವಿಶಾಲವಾಗಿದೆ. ಬುದ್ಧನಿಂದ ಅಂಬೇಡ್ಕರ್‌ವರೆಗೆ, ಚಾರ್ವಾಕನಿಂದ ಪೆರಿಯಾರ್‌ವರೆಗೆ ವಿಪುಲವಾದ ಸಾಹಿತ್ಯಕ ಪರಿಕರಗಳು ನಮ್ಮ ನಡುವೆ ಇದೆ. ಈ ಸಾಹಿತ್ಯವನ್ನು ಒಳಹೊಕ್ಕು ನೋಡಿದಾಗ, ನಾವು ಪರಿಭಾವಿಸುವ ಸಮನ್ವಯ ಭಾರತವನ್ನು ಕಟ್ಟುವುದಕ್ಕೆ ಅಗತ್ಯವಾದ ಎಲ್ಲ ಸಾಮಗ್ರಿಗಳೂ ದೊರೆಯುತ್ತವೆ. ಬಹುಶಃ ಆರೆಸ್ಸೆಸ್ ಅಥವಾ ಸಂಘಪರಿವಾರಕ್ಕೆ ಈ ಸಾಹಿತ್ಯಿಕ ಮಾರ್ಗದರ್ಶಿ ಗ್ರಂಥಗಳು ಈ ಪ್ರಮಾಣದಲ್ಲಿ ಲಭ್ಯವಾಗುವುದಿಲ್ಲ. ಸ್ವತಂತ್ರ ಭಾರತದ ರಾಜಕೀಯ-ಸಾಹಿತ್ಯಿಕ-ಬೌದ್ಧಿಕ-ಚಾರಿತ್ರಿಕ ಅಧ್ಯಯನ ಮತ್ತು ಗ್ರಾಂಥಿಕ ಆಕರಗಳನ್ನು ಗಮನಿಸಿದಾಗ ಇದು ಸುಸ್ಪಷ್ಟವಾಗುತ್ತದೆ. ನಮ್ಮ ಮುಂದೆ ದಾರ್ಶನಿಕರ ತಂಡವೇ ಇದೆ. ವಿಚಾರಧಾರೆಗಳು ಭಿನ್ನವಾಗಿದ್ದರೂ, ಅಂತಿಮ ಗುರಿ (Goal Post) ಒಂದೇ ಎನಿಸುವಂತಹ ಚಿಂತನೆಯ ವಿಧಾನಗಳು ಲಭ್ಯವಿದೆ.

ಪರ್ಯಾಯದ ಪ್ರಸ್ತುತತೆ-ಅಗತ್ಯತೆ
ಇದನ್ನು ಪರಿಣಾಮಕಾರಿಯಾಗಿ, ಪ್ರಭಾವಶಾಲಿಯಾಗಿ ಬಳಸುವುದರಲ್ಲಿ ನಾವು ಎಡವಿದ್ದೇವೆ ಅಥವಾ ಎಡವುತ್ತಿದ್ದೇವೆ. ನಮ್ಮಲ್ಲಿ ಮಾನವ ಸಂಪನ್ಮೂಲಗಳು ಹೇರಳವಾಗಿವೆ, ಶೈಕ್ಷಣಿಕ-ಬೌದ್ಧಿಕ ಸಂಪನ್ಮೂಲಗಳು ಹಿಮಾಲಯದಷ್ಟಿವೆ. ಹೋರಾಟಗಳ ಚೌಕಟ್ಟಿನಲ್ಲಿ ನೋಡಿದಾಗ, ಆರ್ಥಿಕ ಸಂಪನ್ಮೂಲಗಳಿಗೂ ಕೊರತೆ ಇಲ್ಲ. ಆದರೆ ಈ ಆಕರಗಳನ್ನು ಬಳಸುವಲ್ಲಿ ನಾವು ಎದುರಿಸುತ್ತಿರುವ ಸೈದ್ಧಾಂತಿಕ ಅಡ್ಡಗೋಡೆಗಳನ್ನು, ಅಸ್ತಿತ್ವ- ಅಸ್ಮಿತೆಗಳ ಬೇಲಿಗಳನ್ನು ನಿವಾರಿಸಿಕೊಂಡಾಗ ನಮ್ಮ ಐಕ್ಯತೆ ಸಾಧ್ಯವಾಗುತ್ತದೆ. ವೈಫಲ್ಯ ಯಾರದು ಎನ್ನುವುದಕ್ಕಿಂತಲೂ, ನಮ್ಮ ಕೊರತೆಗಳೇನು ಎಂದು ಯೋಚಿಸುವುದು, ವೈಫಲ್ಯಕ್ಕೆ ಕಾರಣ ಏನು ಎಂಬ ಆತ್ಮವಿಮರ್ಶೆ ಮಾಡಿಕೊಳ್ಳುವುದು ವರ್ತಮಾನದ ತುರ್ತು. ಬ್ರಾಹ್ಮಣ್ಯ, ಮನುವಾದಿ, ಬ್ರಾಹ್ಮಣೀಯ ಮೊದಲಾದ ಪದಗಳನ್ನು ಕ್ಲೀಷೆಗಳಂತೆ ಬಳಸುವುದರ ಬದಲು, ಈ ಸೈದ್ಧಾಂತಿಕ ನೆಲೆಗಳನ್ನು ಆಳಕ್ಕಿಳಿದು ಶೋಧಿಸಿ , ಪರ್ಯಾಯವೊಂದನ್ನು ಸಮಾಜದ, ವಿಶೇಷವಾಗಿ ಮಿಲೆನಿಯಂ ಯುವ ಸಮೂಹದ ಮುಂದಿರಿಸುವುದು ನಮ್ಮ ಆದ್ಯತೆಯಾಗಬೇಕಿದೆ.
ನಾವು ಪರ್ಯಾಯಗಳನ್ನು ರೂಪಿಸುವುದರಲ್ಲಿ ಹಿಂದಿದ್ದೇವೆ. ಪ್ರತಿರೋಧ, ಪ್ರತಿಭಟನೆ, ಟೀಕೆ, ವಿಮರ್ಶೆ ಇವೆಲ್ಲವುಗಳ ನಡುವೆ, ನಾವು ವಿರೋಧಿಸುತ್ತಿರುವ ಒಂದು ಸೈದ್ದಾಂತಿಕ ಭದ್ರಕೋಟೆಯನ್ನು ಭೇದಿಸಲು ಸಾಧ್ಯವಾದಾಗ, ಅದರಿಂದ ಹೊರಬರುವ ಅಪಾರ ಜನಸ್ತೋಮವು ಅನುಸರಿಸಬೇಕಾದ ಮಾರ್ಗ ಯಾವುದು ಎಂದು ನಿರ್ಧರಿಸುವುದು ಈ ಹೊತ್ತಿನ ತುರ್ತು. ಇದಕ್ಕೆ ಬೇಕಾಗಿರುವುದು ಐಕ್ಯತೆ ಮತ್ತು ಏಕದನಿ. ಈ ನಿಟ್ಟಿನಲ್ಲಿ ಯೋಚಿಸುವಂತಾದರೆ, ಸರ್ಕಾರಗಳ ನಿಷೇಧ, ನಿಯಂತ್ರಣ, ನಿರ್ಬಂಧ ಮೊದಲಾದ ಆಡಳಿತಾತ್ಮಕ ಕ್ರಮಗಳಿಂದಾಚೆಗೂ ನಮ್ಮ ಆಲೋಚನೆಗಳು ವಿಸ್ತರಿಸಲು ಸಾಧ್ಯ.

-೦-೦-೦-