ರಾಜಿನಾಮೆ ತಿರಸ್ಕರಿಸಲ್ಪಟ್ಟರೂ ಕರ್ತವ್ಯಕ್ಕೆ ಮತ್ತೆ ಹಾಜರಾಗದ ಹಿನ್ನಲೆಯಲ್ಲಿ IAS ಅಧಿಕಾರಿ ಕಣ್ಣನ್ ಗೋಪಿನಾಥನ್ ವಿರುದ್ದ ಕೇಂದ್ರಾಡಳಿತ ಪ್ರದೇಶವಾದ ದಿಯು ದಮನ್ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ ಹಾಗು ಕೆಲಸಕ್ಕೆ ಮರು ಹಾಜರಾಗುವಂತೆ ಸಮನ್ಸ್ ನೋಟೀಸ್ ಕಳುಹಿಸಲಾಗಿದೆ.
ಕೇರಳದ ಕೋಟ್ಟಾಯಂ ಮೂಲದ ಕಣ್ಣನ್ ಗೋಪಿನಾಥನ್ (IAS) ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಬಲವಂತವಾಗಿ ಜಮ್ಮು ಕಾಶ್ಮೀರದ ಮೇಲಿದ್ದ 370 ನೇ ವಿಧಿಯನ್ನು ರದ್ದುಗೊಳಿಸಿ, ಕಾಶ್ಮೀರದ ಮೇಲೆ ನಿರ್ಭಂದ ಹೇರಿದ್ದನ್ನು ವಿರೋಧಿಸಿ ತನ್ನ ಹುದ್ದೆಯನ್ನು ತ್ಯಜಿಸಿ ಸಾಮಾಜಿಕ ಹೋರಾಟ ರಂಗದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. 370ನೇ ವಿಧಿ ರದ್ದು, CAA, NRC, NPR ಮೊದಲಾದ ಕೇಂದ್ರ ಸರಕಾರದ ವಿರುದ್ದದ ಪ್ರತಿಭಟನಾ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಗೋಪಿನಾಥನ್ ತನ್ನ ಅಧಿಕಾರಾವಧಿಯಲ್ಲಿ ಜನರ ನಡುವೆ ದಕ್ಷ ಅಧಿಕಾರಿಯೆಂದು ಹೆಸರುಗಳಿಸಿದ್ದರು.
ಕೇಂದ್ರ ಸರಕಾರ ಜಮ್ಮು ಮತ್ತು ಕಾಶ್ಮೀರದ ಜನತೆಯ ಅಭಿವ್ಯಕ್ತಿ ಸ್ವಾತಂತ್ರ್ವನ್ನು ನಿರಾಕರಿಸಿದೆಯೆಂದು ರಾಜಿನಾಮೆ ಸಲ್ಲಿಸಿದ್ದ ಗೋಪಿನಾಥನ್ ಮೇಲೆ ಗೃಹ ಸಚಿವಾಲಯವು ಶಿಸ್ತುಕ್ರಮ ಕೈಗೊಳ್ಳುವುದಾಗಿ ಹೇಳಿತ್ತು. ಅಧಿಕಾರ ತ್ಯಜಿಸಿ ಸಾಮಾಜಿಕ ರಂಗಕ್ಕೆ ಧುಮುಕಿದ ಕಣ್ಣನ್ ,ಸರಕಾರ ನನ್ನನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲು ಬೇಕಾಗಿ ನನ್ನನ್ನು ಮತ್ತೆ ಅಧಿಕಾರಕ್ಕೆ ಸೇರಿಕೊಳ್ಳುವಂತೆ ಒತ್ತಾಯಿಸುತ್ತಿದೆ ಎಂದು ಕೇಂದ್ರದ ವಿರುದ್ದ ತೀವ್ರ ವಾಗ್ಧಾಳಿ ನಡೆಸಿದ್ದರು.
ಎಪ್ರಿಲ್ 9 ರಂದು ತನ್ನ ಟ್ವಿಟರ್ ಖಾತೆಯಲ್ಲಿ ಕರ್ತವ್ಯಕ್ಕೆ ಮರು ಹಾಜರಾಗುವಂತೆ ಆದೇಶಿಸಿ ಸರಕಾರ ಕಳಿಸಿದ ಪತ್ರದ ಪ್ರತಿಯನ್ನು ಹಾಕಿ ಸರಕಾರ ಮಾಡುತ್ತಿರುವ ಕರೋನಾ ಸೋಂಕಿನ ವಿರುದ್ದದ ಹೋರಾಟಕ್ಕೆ ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ನಾನು ಸೇವೆ ಸಲ್ಲಿಸಲು ಇಚ್ಚಿಸುತ್ತೇನೆ ಆದರೆ IAS ಅಧಿಕಾರಿಯಾಗಿ ಸೇವೆ ಸಲ್ಲಿಸುವುದಿಲ್ಲವೆಂದು ಹೇಳಿದ್ದರು.ಮತ್ತೊಂದು ಟ್ವೇಟಿನಲ್ಲಿ ನಾನು ರಾಜಿನಾಮೆ ಸಲ್ಲಿಸಿ ಎಂಟು ತಿಂಗಳು ಕಳೆಯಿತು. ಅಧಿಕಾರಿಗಳಿಗೆ ಮತ್ತು ಜನರಿಗೆ ಕಿರುಕುಳ ನೀಡುವುದು ಮಾತ್ರ ಸರಕಾರಕ್ಕೆ ಗೊತ್ತು. ದೇಶದ ಸಂಕಷ್ಟದ ಸಮಯದಲ್ಲಿ ನಾನು ಸರಕಾರಕ್ಕೆ ಸ್ವಯಂ ಸೇವಕನಾಗಿ ಕೆಲಸ ಮಾಡುತ್ತೇನೆ ಆದರೆ ಮತ್ತೆ ಅಧಿಕಾರಿಯಾಗಿ ಕೆಲಸ ನಿರ್ವಹಿಸುದಿಲ್ಲ ಎಂದು ತನ್ನ ರಾಜೀನಾಮೆಯನ್ನು ಇನ್ನೂ ಒಪ್ಪಿಕೊಳ್ಳದ ಸರಕಾರದ ನಡೆಯ ಕುರಿತು ಟೀಕಿಸಿ ಬರೆದಿದ್ದರು.
ಪೋಲಿಸ್ ಅಧೀಕ್ಷಕ ವಿಕ್ರಮ್‌ಜೀತ್ ಸಿಂಗ್ ಕಣ್ಣನ್ ವಿರುದ್ದ FIR ದಾಖಲಾದ ಕುರಿತು ಧೃಢೀಕರಿಸಿದ್ದು, IPC ಸೆಕ್ಷನ್ 188 ಅಡಿಯಲ್ಲಿ ಪ್ರಕರಣ ದಾಖಲಾಗಿದೆಯೆಂದು ಹೇಳಿದ್ದಾರೆ.