ಮೈಸೂರು: ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸಲು ಸಿದ್ದನಿದ್ದೇನೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.
ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ 53ರ ಯೋಗಕ್ಷೇಮ ಯಾತ್ರೆ ಪ್ರಯುಕ್ತ ಲಲಿತ ಮಹಲ್ ನಗರದ ಆಲನಹಳ್ಳಿ ಬಡಾವಣೆಯ ಶ್ರೀ ವಿನಾಯಕ ದೇವಸ್ಥಾನದಲ್ಲಿ ಗೋಮಾತೆಯ ಪೂಜೆಯನ್ನು ಸಲ್ಲಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಾತಿ, ಧರ್ಮ ಮೀರಿ ಈ ಕ್ಷೇತ್ರದ ಜನ ನನನ್ನು ಮನೆ ಮಗನಂತೆ ಕಂಡಿದ್ದಾರೆ, ಆಶೀರ್ವದಿಸಿದ್ದಾರೆ. ಅದರಂತೆಯೇ ನಾನು ಶಾಸಕನಾಗಿದ್ದ ಅಷ್ಟೂ ವರ್ಷಗಳ ಕಾಲ ಪ್ರಾಮಾಣಿಕವಾಗಿ ಕೆಲಸ ಮಾಡಿದ ತೃಪ್ತಿ ಇದೆ. ಆದ್ದರಿಂದ ಮುಂದೆಯೂ ಕೂಡ ಪಕ್ಷ ವಹಿಸಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತೇನೆ ಎಂದರು.

೧೯೯೪ರಿಂದ ಇಲ್ಲಿಯವರೆಗೆ ನನಗೆ ಟಿಕೆಟ್ ಕೊಡಿ ಎಂದು ಕೇಳಿಲ್ಲ, ಒತ್ತಡವನ್ನೂ ಹಾಕಿಲ್ಲ. ಆದರೂ ಪಕ್ಷ ನನಗೆ ಟಿಕೆಟ್ ನೀಡಿ ಗೌರವಿಸಿದೆ. ಅದನ್ನು ಮನಃಪೂರ್ವಕವಾಗಿ ನಿರ್ವಹಣೆ ಮಾಡಿದ್ದೇನೆ ಎಂದ ಅವರು, ಮುಂಬರುವ ಚುನಾವಣೆಯಲ್ಲೂ ನಾನು ಟಿಕೆಟ್ ಕೊಡಿ ಎಂದು ಕೇಳುವುದಿಲ್ಲ. ಪಕ್ಷದ ನಿಯಮಕ್ಕೆ ಬದ್ದನಾಗಿರುತ್ತೇನೆ ಎಂದು ಹೇಳಿದರು.
ಕಳೆದ ಐದು ವರ್ಷಗಳಲ್ಲಿ ನಡೆಯುತ್ತಿರುವ ಐದನೇ ಯೋಗಕ್ಷೇಮ ಯಾತ್ರೆ ಇದಾಗಿದೆ. ಜನರ ಕಷ್ಟಗಳಿಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲು ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದ ಅವರು, ಎಲ್ಲರ ಸಹಕಾರದ ಫಲವಾಗಿ ೫೩ನೇ ವಾರ್ಡಿನಲ್ಲಿ ಒಂದೇ ಒಂದು ಬೋರ್ವೆಲ್ ಇಲ್ಲವಾಗಿದ್ದು, ಸಂಪೂರ್ಣವಾಗಿ ಕಾವೇರಿ ಹಾಗೂ ಕಬಿನಿ ನದಿ ನೀರನ್ನು ಕೊಡಲಾಗುತ್ತಿದೆ ಎಂದರು.
ಮಳೆಗಾಲದಲ್ಲಿ ವಾರ್ಡಿನ ಹಲವೆಡೆ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಇದೀಗ ಆ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಹತ್ತು ಹಲವು ಯೋಜನೆಗಳನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಲಾಗಿದೆ. ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಲಾಗುತ್ತಿದೆ ಎಂದು ತಿಳಿಸಿದರು.
ಈ ವೇಳೆ ಉಪಮೇಯರ್ ಡಾ.ರೂಪ ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು.