ಬೆಂಗಳೂರು : ಒಕ್ಕಲಿಗ ಸಮುದಾಯದ ಸಹಕಾರದಿಂದ ನಾನು ಇಲ್ಲಿವರೆಗೆ ಬಂದಿದ್ದೇನೆ. ನಿಮ್ಮೆಲ್ಲರ ಬೆಂಬಲ ಇದ್ದರೆ ನಾನು ಇನ್ನೂ ಎತ್ತರಕ್ಕೆ ಹೋಗುತ್ತೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (Dkshivakumar) ಮಾರ್ಮಿಕವಾಗಿ (ಸಿಎಂ ಆಗುವ ಕುರಿತು) ಹೇಳಿದ್ದಾರೆ.

ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಒಕ್ಕಲಿಗ ಉದ್ಯಮಿಗಳ ಎಕ್ಸ್‌ಪೋದಲ್ಲಿ ( Vokkaliga Udyami Business Expo) ಮಾತನಾಡಿದ ಡಿಕೆಶಿ, ನನಗೆ ಬೇಕಾದಷ್ಟು ಏಟು ಬಿದ್ದಿದೆ. ನಾನು ಕನಕಪುರದ ಕಲ್ಲು ಮಣ್ಣಿನಿಂದ ಬಂದಿದ್ದೇನೆ. ಕಲ್ಲು ಪ್ರಕೃತಿ, ಕೆತ್ತಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ, ಏಟು ಬಿದ್ದು ಬಿದ್ದು ಈ ಹಂತಕ್ಕೆ ಬಂದಿದ್ದೇನೆ. ನೀವು ತಿರುಪತಿ ತಿಮ್ಮಪ್ಪನ ಹಾಗೇ ಒಂದೇ ಕಡೆ ಇರಬಾರದು. ಎರಡೂ ಕಡೆ ಇರಬೇಕು, ನೀವು ಬೆಳೆದು ಬೇರೆಯವರನ್ನು ಬೆಳೆಸಬೇಕು ಎಂದಿದ್ದಾರೆ.

ಮೂರು `ಕೆ’ಗಳನ್ನು ನಮ್ಮ ಸಮಾಜ ಸದಾ ನೆನಪಿಸಿಕೊಳ್ಳಬೇಕು. ಬೆಂಗಳೂರು ನಿರ್ಮಾತೃ ಕೆಂಪೇಗೌಡ, ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ, ಬೆಂಗಳೂರಿಗೆ ಹೊಸ ರೂಪ ನೀಡಿದ ಎಸ್.ಎಂ ಕೃಷ್ಣ ಅವರನ್ನು ಮರೆಯಬಾರದು ಎಂದರು.ಸಮುದಾಯದ ಜನ ಗಟ್ಟಿ ಧ್ವನಿಯಲ್ಲಿ ಮಾತನಾಡಬೇಕು. ನನ್ನನ್ನು ಸೇರಿದಂತೆ ಯಾರೇ ತಪ್ಪು ಮಾಡಿದರೂ ತಿದ್ದಿ ಹೇಳಬೇಕು. ಯಾರು ಏನು ಮಾಡೋಕ್ಕಾಗಲ್ಲ ಗಟ್ಟಿಯಾಗಿ ಮಾತನಾಡಬೇಕು. ಈ ಬಗ್ಗೆ ನಿರ್ಮಲಾನಂದ ಶ್ರೀಗಳಿಗೆ ನಾನು ಹೇಳ್ತಾ ಇರುತ್ತೇನೆ ಎಂದಿದ್ದಾರೆ. ಒಕ್ಕಲಿಗರ ಬರೀ ಜೇನು ತಿನ್ನೋದಲ್ಲ. ಅದನ್ನೆಲ್ಲಾ ಕಡಿಮೆ ಮಾಡಿಸಿದ್ದೇವೆ. ಇನ್ನೂ 3-4 ಮೆಡಿಕಲ್ ಕಾಲೇಜ್ ಮಾಡಿ ಎಂದು ಹೇಳಿದ್ದೇನೆ. ಮತ್ತೆ ಗಲಾಟೆ ಮಾಡಿಕೊಂಡರೆ ನನ್ನ ಅವಧಿಯಲ್ಲೇ ಒಕ್ಕಲಿಗರ ಸಂಘಕ್ಕೆ ಅಡ್ಮಿನಿಸ್ಟ್ರೇಟರ್ ಹಾಕ್ತಿನಿ. ಜೊತೆಗೂಡುವುದು ಆರಂಭ, ಜೊತೆಗೂಡಿ ಚರ್ಚಿಸುವುದು ಪ್ರಗತಿ, ಜೊತೆಗೂಡಿ ಕೆಲಸ ಮಾಡುವುದು ಯಶಸ್ಸಿಗೆ ದಾರಿಯಾಗಿದೆ. ಈ ಕಾರ್ಯಕ್ರಮಕ್ಕೆ ಬೇಗನೇ ಚಾಲನೆ ಕೊಡಬೇಕಿತ್ತು. ತಡ ಆಗಿದೆ, ಪರವಾಗಿಲ್ಲ ಆದರೂ ಚಾಲನೆ ಸಿಕ್ಕಿದೆ. ನಾವೆಲ್ಲಾ ಒಕ್ಕಲು ತನ ಮಾಡುವವರು ಒಂದಾಗಬೇಕಿದೆ ಎಂದು ಕರೆ ಕೊಟ್ಟರು.
ನಿಮ್ಮೆಲ್ಲರ ಬೆಂಬಲದಿಂದ ನಾನು ಇಷ್ಟು ಎತ್ತರಕ್ಕೆ ಬೆಳೆದಿದ್ದೀನಿ. ಈ ದಾರಿಯಲ್ಲಿ ಸಾಕಷ್ಟು ಪೆಟ್ಟು ತಿಂದಿದ್ದೇನೆ. ನಾನು ಕನಕಪುರದವನು, ಬಂಡೆ ಥರ, ಎಲ್ಲವನ್ನೂ ಮೆಟ್ಟಿ ನಿಂತಿದ್ದೇನೆ, ಏನೇ ಕಷ್ಟ ಬಂದರೂ ಹಿಂದೆ ಹೋಗಲ್ಲ. ನಿಮ್ಮ ಬೆಂಬಲ ಇದ್ದರೆ ಮತ್ತಷ್ಟು ಎತ್ತರಕ್ಕೆ ಹೋಗಬಹುದು. ನಿಮ್ಮೆಲ್ಲರ ಬೆಂಬಲ ಅಗತ್ಯವಿದೆ. ನನಗೆ ಇನ್ನಷ್ಟು ಬೆಂಬಲ ಬೇಕು, ನಾನು ಡಿಸಿಎಂ ಆಗಿ ಅಲ್ಲ, ಸಮಾಜದ ಆಧಾರಸ್ಥಂಬ ಎಂದು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಸಮಾಜದ ಜೊತೆ ಡಿ.ಕೆ ಶಿವಕುಮಾರ್ ಇದ್ದಾನೆ ಅನ್ನೋ ಸಂದೇಶ ಕೊಡುತ್ತಿದ್ದೇನೆ ಎಂದಿದ್ದಾರೆ.












