ಮೈಸೂರು: ರಾಜ್ಯದ ಅಭಿವೃದ್ಧಿಯನ್ನು ಜನರಿಗೆ ತಿಳಿಸುವ ಕಾರ್ಯವನ್ನು ದಸರಾ ಮೆರವಣಿಗೆ ಮೂಲಕ ಮಾಡುತ್ತೇವೆ. ಇಡೀ ಜಗತ್ತಿಗೆ ಕನ್ನಡ ನಾಡಿನ ವೈಭೋಗ ತಿಳಿಸುವ ಕಾರ್ಯ ದಸರಾ ಮೂಲಕ ಆಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ನಾಡಿನ ಸಂಪತ್ತು, ಅಧಿಕಾರ ಎಲ್ಲಾ ವರ್ಗದ ಜನರಿಗೂ ಹಂಚಿಕೆ ಆಗಬೇಕು. ಎಲ್ಲಾ ವರ್ಗದ ಜನರಿಗೂ ಎಲ್ಲಾ ಅವಕಾಶ ಸಿಗಬೇಕು. ಅದು ನಿಜವಾದ ಸಾಮಾಜಿಕ ನ್ಯಾಯ. ಸರ್ಕಾರ ಐದು ಗ್ಯಾರಂಟಿಗಳನ್ನು ಬದ್ಧತೆಯಿಂದ ಘೋಷಿಸಿ ಜಾರಿ ಮಾಡುತ್ತಿದೆ. ಐದನೇ ಗ್ಯಾರಂಟಿ ಮುಂದಿನ ಜನವರಿಯಲ್ಲಿ ಮಾಡುತ್ತೇವೆ. ದಸರಾ ಮಹತ್ವಕ್ಕೆ ಕುಂದು ಬಾರದಂತೆ ಸಾಂಪ್ರದಾಯಿಕ ದಸರಾ ಮಾಡುತ್ತಿದ್ದೇವೆ ಎಂದು ನುಡಿದರು.
ಕಲೆ, ಸಂಸ್ಕೃತಿ, ಸಂಪ್ರದಾಯ ನಮ್ಮ ನಾಡಿನಲ್ಲಿ ಶ್ರೀಮಂತವಾಗಿದೆ. ಕರ್ನಾಟಕ ಜನ ಸುಸಂಸ್ಕೃತ ಜನ. ನಮ್ಮಲ್ಲಿ ಪ್ರೀತಿ, ವಿಶ್ವಾಸ ಹೆಚ್ಚಿದೆ. ಪರಸ್ಪರ ಪ್ರೀತಿ, ವಿಶ್ವಾಸ, ಗೌರವದಿಂದ ಬದುಕುವುದು ಮುಖ್ಯ. ದೇಶ ಮತ್ತು ರಾಜ್ಯಕ್ಕೆ ಇದು ತುಂಬಾ ಅಗತ್ಯ ಎಂದು ಹೇಳಿದರು.






