ನವದೆಹಲಿ: ಉದ್ಯಮಿ ವಿಜಯ್ ಮಲ್ಯ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾನು ಭಾರತದಿಂದ ಪರಾರಿಯಾಗಿಲ್ಲ, 1992ರಿಂದಲೇ ಯುನೈಟೆಡ್ ಕಿಂಗ್‌ಡಂನ ಖಾಯಂ ನಿವಾಸಿಯಾಗಿದ್ದೇನೆ ಎಂದು ಹೇಳಿರುವ ಅವರು, ತನ್ನಿಂದ ಈಗಾಗಲೇ ಸಾಲದ ಮೊತ್ತಕ್ಕಿಂತ ದುಪ್ಪಟ್ಟು ಹಣವನ್ನು ವಸೂಲಿ ಮಾಡಲಾಗಿದೆ. ಹೀಗಿದ್ದರೂ ತನ್ನನ್ನು ಇನ್ನೂ ‘ಪರಾರಿಯಾದ ಆರ್ಥಿಕ ಅಪರಾಧಿ’ ಎಂದು ಏಕೆ ಕರೆಯಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮಲ್ಯ, ಜಾರಿ ನಿರ್ದೇಶನಾಲಯ (ED) ಸಲ್ಲಿಸಿರುವ ಅಫಿಡವಿಟ್‌ನಲ್ಲಿನ ಅಂಶಗಳನ್ನು ಉಲ್ಲೇಖಿಸಿ ತಮ್ಮ ವಾದವನ್ನು ಮುಂದಿಟ್ಟಿದ್ದಾರೆ. 2021ರ ವೇಳೆಗೆ ತಮ್ಮ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಒಟ್ಟು ₹14,131.60 ಕೋಟಿ ವಸೂಲಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.ಬ್ಯಾಂಕ್‌ಗಳಿಗೆ ಬರಬೇಕಿದ್ದ ಅಸಲು ಸಾಲದ ಮೊತ್ತ ಸುಮಾರು ₹6,203 ಕೋಟಿ ಮಾತ್ರವಾಗಿತ್ತು. ಹೀಗಿರುವಾಗ ಸಾಲಕ್ಕಿಂತ ಹೆಚ್ಚಿನ ಮೊತ್ತವನ್ನು ವಸೂಲಿ ಮಾಡಿರುವುದರಿಂದ, ಹೆಚ್ಚುವರಿ ಹಣದ ಕುರಿತು ಸರ್ಕಾರವೇ ಉತ್ತರ ನೀಡಬೇಕು ಎಂಬುದು ಮಲ್ಯ ಅವರ ವಾದವಾಗಿದೆ.
ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಮಾಜಿ ನೌಕರರಿಗೆ ಬಾಕಿ ಇರುವ ವೇತನ ಪಾವತಿಸಲು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದ್ದ ನಿಧಿಯಿಂದಲೇ ₹350 ಕೋಟಿಗೂ ಅಧಿಕ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ ಎಂದು ಮಲ್ಯ ಹೇಳಿದ್ದಾರೆ.ತಮ್ಮ ಆಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದ್ದರಿಂದ ನೌಕರರಿಗೆ ತಾವೇ ನೇರವಾಗಿ ಹಣ ಪಾವತಿಸಲು ಸಾಧ್ಯವಾಗಲಿಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
1992ರಿಂದಲೂ ತಾನು ಬ್ರಿಟನ್‌ನ ಖಾಯಂ ನಿವಾಸಿಯಾಗಿದ್ದು, ಅಲ್ಲಿನ ಕಾನೂನು ನಿಯಮಗಳ ಹಿನ್ನೆಲೆಯಲ್ಲಿ ದೇಶದಿಂದ ಹೊರಗೆ ತೆರಳಲು ನಿರ್ಬಂಧಗಳಿವೆ ಎಂದು ಮಲ್ಯ ಹೇಳಿದ್ದಾರೆ.
ಹೀಗಾಗಿ ಭಾರತಕ್ಕೆ ಮರಳದೇ ಇರುವುದನ್ನು ‘ಪಲಾಯನ’ ಎಂದು ಕರೆಯುವುದು ಸರಿಯಲ್ಲ ಎಂಬುದು ಅವರ ವಾದವಾಗಿದೆ.ಇದೇ ವೇಳೆ, ಪರಾರಿಯಾದ ಆರ್ಥಿಕ ಅಪರಾಧಿಗಳ ಕಾಯ್ದೆ (FEOA) ಅಡಿಯಲ್ಲಿ ಕೈಗೊಂಡಿರುವ ಕ್ರಮಗಳನ್ನು ಪ್ರಶ್ನಿಸಿ ವಿಜಯ್ ಮಲ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಅವರು ನ್ಯಾಯಾಂಗ ಪ್ರಕ್ರಿಯೆಯಿಂದ ಉದ್ದೇಶಪೂರ್ವಕವಾಗಿ ದೂರ ಉಳಿದಿರುವುದಾಗಿ ಕಟುವಾಗಿ ಹೇಳಿದೆ.ಭಾರತಕ್ಕೆ ಮರಳಿ ನ್ಯಾಯಾಂಗ ಪ್ರಕ್ರಿಯೆ ಎದುರಿಸದೆ ಯಾವುದೇ ಪರಿಹಾರವನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ನ್ಯಾಯಾಲಯ ನೀಡಿದೆ.

2018ರ ಪರಾರಿಯಾದ ಆರ್ಥಿಕ ಅಪರಾಧಿಗಳ ಕಾಯ್ದೆಯಡಿ ವಿಜಯ್ ಮಲ್ಯ ಸೇರಿದಂತೆ ಹಲವು ಮಂದಿಯನ್ನು ಪರಾರಿಯಾದ ಆರ್ಥಿಕ ಅಪರಾಧಿಗಳೆಂದು ಘೋಷಿಸಲಾಗಿದೆ. ಮಲ್ಯ ಅವರನ್ನು ಭಾರತಕ್ಕೆ ಕರೆತಂದು ದೇಶದ ಕಾನೂನು ಪ್ರಕ್ರಿಯೆ ಎದುರಿಸುವಂತೆ ಮಾಡಲು ಕೇಂದ್ರ ಸರ್ಕಾರ ವಿದೇಶಿ ಅಧಿಕಾರಿಗಳೊಂದಿಗೆ ಕಾನೂನು ಪ್ರಕ್ರಿಯೆ ಮುಂದುವರಿಸಿದೆ. ತನ್ನಿಂದ ಸಾಲದ ಮೊತ್ತಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಲಾಗಿದೆ ಎಂಬ ಮಲ್ಯ ಅವರ ಹೇಳಿಕೆ ಹಾಗೂ ಭಾರತಕ್ಕೆ ಮರಳಿ ನ್ಯಾಯಾಂಗ ಪ್ರಕ್ರಿಯೆ ಎದುರಿಸಬೇಕೆಂಬ ನ್ಯಾಯಾಲಯದ ನಿಲುವು ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ.







