ಧಾರವಾಡ, ಸೆ.05:ಕಳೆದ 30–35 ವರ್ಷಗಳಲ್ಲಿ ದೇಶದಲ್ಲಿ ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಸಾಕ್ಷರತೆ ಪ್ರಮಾಣ ಶೇ.20ಕ್ಕಿಂತಲೂ ಕಡಿಮೆ ಇದ್ದು, ಇಂದು ಶೇ.75ರಷ್ಟಾಗಿದೆ. ಆದರೆ ದೇಶದ ವಿವಿಧ ವ್ಯವಸ್ಥೆಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ಕಾರ್ಮಿಕ, ಉದ್ಯೋಗ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಹೇಳಿದರು.
ನಗರದ ವಿದ್ಯಾವರ್ದಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ ಉಪನಿರ್ದೇಶಕರ ಕಾರ್ಯಾಲಯ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರ ವೃತ್ತಿಯ ಮಹತ್ವವನ್ನು ಒತ್ತಿ ಹೇಳಿದ ಅವರು, “ಶಿಕ್ಷಕರ ವೃತ್ತಿಯೇ ಜಗತ್ತಿನ ಇತರೆ ಎಲ್ಲ ವೃತ್ತಿಗಳನ್ನು ಸೃಷ್ಟಿಸುವ ವೃತ್ತಿಯಾಗಿದೆ”. ಸ್ವಾತಂತ್ರ್ಯ ಹೋರಾಟಗಾರರು, ಪ್ರಾಧ್ಯಾಪಕರು ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಹಿಂದೆ ಶಿಕ್ಷಕರ ಹಾಗೂ ಗುರುಗಳ ಕೊಡುಗೆ ಮಹತ್ವದ್ದಾಗಿದೆ. ಬಸವಣ್ಣ, ಗೌತಮ ಬುದ್ಧ, ಸಾಕ್ರಟೀಸ್, ಪ್ಲೇಟೋ, ಕಾರ್ಲ್ ಮಾರ್ಕ್ಸ್, ಲೂಯಿಸ್ ಪಾಸ್ಚರ್ ಹಾಗೂ ಐನ್‌ಸ್ಟೀನ್ ಅವರಂತಹ ಮಹನೀಯರು ತಮ್ಮ ವಿಚಾರಗಳಿಂದ ಜಗತ್ತಿಗೆ ದಾರಿದೀಪವಾಗಿದ್ದಾರೆ. ಅವರ ಕೊಡುಗೆಗಳು ಅವರ ನಿಧನದ ನಂತರವೂ ನಿರಂತರವಾಗಿ ಸ್ಮರಣೀಯವಾಗಿವೆ ಎಂದು ಅವರು ತಿಳಿಸಿದರು.
ಶಿಕ್ಷಕರು ವಿದ್ಯಾರ್ಥಿಗಳ ಬದುಕಿನ ಮೇಲೆ ಆರಂಭಿಕ ಹಂತದಲ್ಲೇ ಆಳವಾದ ಪ್ರಭಾವ ಬೀರುವ ಶಕ್ತಿ ಹೊಂದಿದ್ದಾರೆ. ದೇಶದ ಭವಿಷ್ಯದೊಂದಿಗೆ ಪ್ರತಿದಿನ ನೇರವಾಗಿ ಸಂವಹನ ನಡೆಸುವ ಅವಕಾಶ ಶಿಕ್ಷಕರಿಗಿದೆ . ಶಿಕ್ಷಣವೆಂದರೆ ಕೇವಲ ಪಾಠ ಬೋಧಿಸುವುದಲ್ಲ. ಮಕ್ಕಳಲ್ಲಿ ನೈತಿಕತೆ, ಕೃತಜ್ಞತೆ, ಮಾನವೀಯ ಮೌಲ್ಯಗಳು, ಸಹಾನುಭೂತಿ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವುದು ಶಿಕ್ಷಕರ ಪ್ರಮುಖ ಕರ್ತವ್ಯವಾಗಿದೆ.ತಮ್ಮ ಹೈಸ್ಕೂಲ್ ಶಿಕ್ಷಕಿ ಲೂರ್ದು ಮೇರಿ ಅವರು ಬಸ್‌ನಲ್ಲಿ ಗರ್ಭಿಣಿಯರಿಗೆ ಜಾಗ ನೀಡುವುದು, ಅಗತ್ಯವಿರುವವರಿಗೆ ಸಹಾಯ ಮಾಡುವುದು, ರಸ್ತೆಯಲ್ಲಿ ಅಪಾಯ ಕಂಡುಬಂದರೆ ಸಾಧ್ಯವಾದಷ್ಟು ನೆರವಾಗುವುದು ಸೇರಿದಂತೆ ಕಲಿಸಿದ ಮಾನವೀಯ ಮೌಲ್ಯಗಳು ಇಂದಿಗೂ ತಮ್ಮ ಮನಸ್ಸಿನಲ್ಲಿ ಉಳಿದಿವೆ ಎಂದು ಸ್ಮರಿಸಿದರು.ಇಂದಿನ ಸಮಾಜದಲ್ಲಿ ನೈತಿಕ ಶಿಕ್ಷಣ, ಕೃತಜ್ಞತೆ, ಮಾನವೀಯತೆ ಮತ್ತು ಸಹಾನುಭೂತಿಯ ಕೊರತೆ ಕಂಡುಬರುತ್ತಿದೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಕಲಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.ರಾಜಕಾರಣಿಗಳು, ಉದ್ಯಮಿಗಳು ಸೇರಿದಂತೆ ಪ್ರಭಾವಿ ವ್ಯಕ್ತಿಗಳಿಗಿಂತಲೂ ದೇಶದ ಭವಿಷ್ಯದ ಮೇಲೆ ಹೆಚ್ಚಿನ ಪ್ರಭಾವ ಬೀರುವ ಶಕ್ತಿ ಶಿಕ್ಷಕರಿಗಿದೆ. ಆದ್ದರಿಂದ ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಕರೆ ನೀಡಿದರು.

ದೇಶದ ಸಂವಿಧಾನವನ್ನು ಗೌರವಿಸಿ, ಯಾವುದೇ ರಾಜಕೀಯ ಪಕ್ಷದ ಪರವಾಗಿ ನಿಲ್ಲದೆ ಆತ್ಮಸಾಕ್ಷಿಯಿಂದ ಮಕ್ಕಳಿಗೆ ದೇಶದ ಗೌರವ ಮತ್ತು ಇತಿಹಾಸವನ್ನು ಸರಿಯಾಗಿ ತಿಳಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು.ಶಿಕ್ಷಕರಿಗೆ ಯುವ ಪೀಳಿಗೆಯನ್ನು ಪ್ರಭಾವಿಸುವ, ಪ್ರೇರೇಪಿಸುವ ಹಾಗೂ ಸಮಾಜದಲ್ಲಿ ಉತ್ತಮ ಆಲೋಚನೆಗಳನ್ನು ರೂಪಿಸುವ ಶಕ್ತಿ ಇದೆ. ಬಸವಣ್ಣ, ಬುದ್ಧ, ಮಾರ್ಕ್ಸ್ ಹಾಗೂ ಐನ್‌ಸ್ಟೀನ್ ಅವರ ಆಲೋಚನೆಗಳು ಇಂದಿಗೂ ಸಮಾಜದ ಮೇಲೆ ಪ್ರಭಾವ ಬೀರುತ್ತಿರುವಂತೆ ಶಿಕ್ಷಕರಿಗೂ ಮಕ್ಕಳ ಭವಿಷ್ಯ ರೂಪಿಸುವ ದೊಡ್ಡ ಜವಾಬ್ದಾರಿ ಇದೆ.
ಮಹಿಳೆಯರ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯೇ ಸಮಾಜದ ಪ್ರಗತಿಯ ಮಾನದಂಡವಾಗಬೇಕು ಎಂಬ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರವನ್ನು ಸ್ಮರಿಸಲಾಯಿತು. ಹೆಣ್ಣುಮಕ್ಕಳ ಹಕ್ಕುಗಳು ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಕಾನೂನುಗಳ ಮಹತ್ವವನ್ನು ವಿವರಿಸಲಾಯಿತು. ಮಕ್ಕಳು ಕೇವಲ ಉತ್ತಮ ಅಂಕಗಳನ್ನು ಗಳಿಸುವುದಷ್ಟೇ ಅಲ್ಲದೆ, ಉತ್ತಮ ಮನೋಭಾವ, ಕೃತಜ್ಞತೆ, ಪ್ರಾಮಾಣಿಕತೆ, ದೇಶಪ್ರೇಮ ಹಾಗೂ ಉತ್ತಮ ನಂಬಿಕೆಗಳನ್ನು ಹೊಂದುವಂತೆ ಶಿಕ್ಷಕರು ರೂಪಿಸಬೇಕು.

ಶಿಕ್ಷಕರು ತಮ್ಮಲ್ಲಿ ಬದಲಾವಣೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ಶಿಕ್ಷಕರಿಂದ ದೇಶದ ಭವಿಷ್ಯದ ಕೋಟ್ಯಂತರ ಮಕ್ಕಳ ಜೀವನವನ್ನು ಉತ್ತಮ ದಿಕ್ಕಿನಲ್ಲಿ ರೂಪಿಸುವ ಶಕ್ತಿ ಇದೆ.ಶಿಕ್ಷಕರು ಮಕ್ಕಳಲ್ಲಿ ನೈತಿಕ ಮೌಲ್ಯ, ವಿಚಾರ ವಿಮರ್ಶೆ, ಹೊಸ ಆಲೋಚನೆ ಮತ್ತು ಕೌಶಲ್ಯಗಳನ್ನು ಬೆಳೆಸಬೇಕು. ಚೀನಾದಲ್ಲಿ ರೊಬೋಟಿಕ್ಸ್ ಕ್ಷೇತ್ರದ ಬೆಳವಣಿಗೆ ಕೂಡ ಒಂದು ಶಾಲೆಯಲ್ಲಿ ಶಿಕ್ಷಕರು ಆರಂಭಿಸಿದ ಪ್ರಯತ್ನದಿಂದ ಪ್ರೇರಣೆ ಪಡೆದಿದೆ ಎಂದು ಉದಾಹರಿಸಿದರು.ಯುವಕರಿಗೆ ಚಿಕ್ಕ ವಯಸ್ಸಿನಲ್ಲೇ ಸೂಕ್ತ ಪ್ರೇರಣೆ ನೀಡಿದರೆ ಅವರ ಭವಿಷ್ಯದಲ್ಲಿ ದೊಡ್ಡ ಬದಲಾವಣೆ ತರಬಹುದು. ಆದ್ದರಿಂದ ಶಿಕ್ಷಕರು ಜಾಗೃತರಾಗಿ, ವಿದ್ಯಾರ್ಥಿಗಳನ್ನು ಉತ್ತಮ ಮಾರ್ಗದಲ್ಲಿ ತರಬೇತಿಗೊಳಿಸುವ ಮೂಲಕ ದೇಶದ ಭವಿಷ್ಯವನ್ನು ರೂಪಿಸಬೇಕು ಎಂದು ಅವರು ಹೇಳಿದರು.
ನವಲಗುಂದ ಶಾಸಕರಾದ ಎನ್.ಎಚ್.ಕೋನರೆಡ್ಡಿ, ಜಿಲ್ಲಾಧಿಕಾರಿ ಸ್ನೇಹಲ್. ಆರ್ ಅವರು ಮಾತನಾಡಿದರು.ಶಾಲಾಶಿಕ್ಷಣ ಇಲಾಖೆಯ ಉಪನಿರ್ದೇಶಕ ಉಮೇಶ ಬಮ್ಮಕ್ಕನವರ, ಮಾಜಿ ಸಂಸದರು ಐ ಜಿ. ಸನದಿ, ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ ಹಳಿಯಾಳ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ್, ಜಿಲ್ಲಾ ಯೋಜನಾ ಸಮನ್ವಯ ಅಧಿಕಾರಿ ಎಮ್.ಎಸ್. ಹುಡೆದಮನಿ, ಶಾಲಾ ಶಿಕ್ಷಣ ಅಧಿಕಾರಿಗಳು ಉಪಸ್ಥಿತರಿದ್ದರು.






