“ನನ್ನ ಇತಿಹಾಸ, ನನ್ನ ಬದ್ಧತೆ, ನನ್ನ ಸಿದ್ಧಾಂತದ ಬಗ್ಗೆ ಗೊತ್ತಿಲ್ಲದೆ ರಾಜಕೀಯ ಮಾಡಿದರೆ, ಅದು ಅವರ ಇಚ್ಛೆ. ನನ್ನ ಪಕ್ಷದ ಕೆಲವು ಸಹೋದ್ಯೋಗಿಗಳು ಕೂಡ ನನ್ನ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ನಾನು ಇಂಡಿಯಾ ಮೈತ್ರಿಕೂಟದ ನಾಯಕರಿಗೆ ಕ್ಷಮೆ ಕೋರುತ್ತೇನೆಯೇ ವಿನಃ ರಾಜಕೀಯ ಮಾಡುವವರಿಗೆ ಹೆದರುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

“ನನ್ನನ್ನು ಬೆದರಿಸಿ ಕ್ಷಮೆ ಕೇಳಿಸಲಾಗಿದೆ ಎಂಬ ಭಾವನೆ ಬೇಡ. ಬೆದರಿಕೆಗಳಿಗೆ ಹೆದರುವ ರಕ್ತ ನನ್ನದಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ನಡೆದ ಸಾತನೂರು ಘಟನೆ, ಬೇರೆ ಬೇರೆ ಘಟನೆಗಳು, ಸದನದಲ್ಲಿ ನಡೆದ ಘಟನೆಗಳು, ಆಪರೇಷನ್ ಕಮಲ ಆದಾಗ ಏನಾಯ್ತು? ಯಾರು, ಯಾರು ಯಾವ ಮೂಲದಿಂದ ನಮ್ಮ ಪಕ್ಷಕ್ಕೆ ಬಂದಿದ್ದಾರೆ, ಬೇರೆ ಪಕ್ಷಕ್ಕೆ ಹೇಗಿದ್ದಾರೆ ಎಂಬುದು ಗೊತ್ತಿರಬೇಕು” ಎಂದು ತಿರುಗೇಟು ನೀಡಿದರು.

“ನಮ್ಮ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಹಾಗೂ ಅಧಿಕಾರಕ್ಕೆ ಬಂದ ನಂತರ ಆರ್ ಎಸ್ಎಸ್ ಹೇಗೆ ಬೇರೂರಿದೆ ಎಂದು ಅರಿತಿದ್ದೇನೆ. ರಿಸರ್ವ ಬ್ಯಾಂಕ್ ಕಚೇರಿ ಎದುರು ಆರ್ ಎಸ್ಎಸ್ ನ ದೊಡ್ಡ ಕಟ್ಟಡವಿದೆ. ವರ್ಷಕ್ಕೆ ಕೋಟ್ಯಂತರ ರೂ. ಬಾಡಿಗೆ ಪಡೆಯುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಎಷ್ಟು ಶಾಲೆ ಆರಂಭಿಸಿದ್ದಾರೆ. ಚನ್ನೇನಹಳ್ಳಿಯಲ್ಲಿ ಯಾವ ರೀತಿ ಭವ್ಯ ಕಟ್ಟಡ ನಿರ್ಮಿಸುತ್ತಿದ್ದಾರೆ, ರಾಜ್ಯದಲ್ಲಿ ಹೇಗೆ ಸಂಘಟನೆ ಮಾಡುತ್ತಿದ್ದಾರೆ ಎಂಬುದನ್ನು ರಾಜಕೀಯ ನಾಯಕನಾಗಿ ಅರಿತಿದ್ದೇನೆ. ಪಕ್ಷದ ಅಧ್ಯಕ್ಷನಾಗಿ ನಮ್ಮ ವಿರೋಧಿಗಳ ಸಂಘಟನೆ ಬಗ್ಗೆ ತಿಳಿಯುವುದು ನಮ್ಮ ಕರ್ತವ್ಯ” ಎಂದು ತಿಳಿಸಿದರು.

“ವಿದ್ಯಾರ್ಥಿ ನಾಯಕನಾಗಿದ್ದಾಗ ನನ್ನ ವಿರುದ್ಧ ಕಮ್ಯೂನಿಷ್ಟರು, ಬಲಪಂಥೀಯ ಸಿದ್ಧಾಂತದ ಎಬಿವಿಪಿಯವರು ನಿಲ್ಲುತ್ತಿದ್ದರು. ಆಗ ಪ್ರಾಧ್ಯಾಪಕರನ್ನೇ ಉಪಾಧ್ಯಕ್ಷರನ್ನಾಗಿ ಮಾಡಿಕೊಂಡು ತರಬೇತಿ ಕೊಡಿಸುತ್ತಿದ್ದರು. ನಾನು, ನಮ್ಮ ಹುಡುಗರು ಸೂಕ್ತ ತರಬೇತಿ ಪಡೆದು ಆ ಗರಡಿಯಲ್ಲಿ ತಯಾರಾದವನು ನಾನು. ಪಕ್ಷದ ಆಂತರಿಕ ರಾಜಕೀಯದ ಕಾರಣಕ್ಕೆ ನನಗೆ ಟಿಕೆಟ್ ಸಿಗದಿದ್ದಾಗಲೂ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಫೋಟೋ ಹಾಕಿಕೊಂಡೇ ಚುನಾವಣೆ ಗೆದ್ದೆ. ಆಗ ನನ್ನ ಮನೆ ಬಾಗಿಲಿಗೆ ಎಷ್ಟೋ ಜನ ಬಂದರೂ ನಾನು ಹುಟ್ಟು ಕಾಂಗ್ರೆಸಿಗ, ಕಾಂಗ್ರೆಸಿಗನಾಗಿಯೇ ಸಾಯುತ್ತೇನೆ ಎಂದು ನಾಲ್ಕೇ ತಿಂಗಳಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದ ಭಾಗವಾದೆ. ಈ ರೀತಿ ರಾಜಕಾರಣ ಮಾಡಿಕೊಂಡು ಬಂದಿರುವನು ನಾನು” ಎಂದು ವಿವರಿಸಿದರು.