ನವದೆಹಲಿ: ಭಾರೀ ಕುತೂಹಲ ಮೂಡಿಸಿದ್ದ ಬಿಹಾರ ವಿಧಾನಸಭಾ ಚುನಾವಣೆಯ ಎರಡೂ ಹಂತದ ಮತದಾನ ಪೂರ್ಣಗೊಂಡಿದ್ದು, ಚುನಾವಣೋತ್ತರ ಸಮೀಕ್ಷೆಗಳು ಕೂಡ ಪ್ರಕಟಗೊಂಡಿದೆ. ನಿನ್ನೆ ಪ್ರಕಟವಾದ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಎನ್‌ಡಿಎ ಮೈತ್ರಿ ಕೂಟ ಸ್ಪಷ್ಟ ಬಹುಮತ ಸಾಧಿಸಲಿದೆ.

ದೈನಿಕ್ ಭಾಸ್ಕರ್, ಪೀಪಲ್ಸ್ ಇನ್ಸೈಟ್, ಮ್ಯಾಟ್ರಿಝ್, ಪೀಪಲ್ಸ್ ಪಲ್ಸ್, ಜೆವಿಸಿ ಪೋಲ್ಸ್, ಚಾಣಕ್ಯ ಸಮೀಕ್ಷೆಗಳು ಎನ್‌ಡಿಎ ಮೈತ್ರಿ ಕೂಟ ಗೆಲ್ಲಿದ್ದು, ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್‌ಗೆ ತೀವ್ರ ಹಿನ್ನಡೆಯಾಗಲಿದೆ ಎಂದು ವರದಿ ಹಂಚಿಕೊಂಡಿವೆ.

ಈ ಬಗ್ಗೆ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಚುನಾವಣೋತ್ತರ ಸಮೀಕ್ಷೆಗಳ ಮೇಲೆ ನನಗೆ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರ ವಿಧಾನಸಭಾ ಚುನಾವಣೆಯ ಮೇಲೆ ಬಂದಿರುವ ಚುನಾವಣೋತ್ತರ ಸಮೀಕ್ಷೆಯ ಬಗ್ಗೆ ನನಗೆ ನಂಬಿಕೆ ಇಲ್ಲ. ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಯದಲ್ಲೂ ನಾನು ಎಕ್ಸಿಟ್ ಪೋಲ್ ನಂಬಿಲ್ಲ. ಜನರು ಬದಲಾವಣೆ ಬಯಸುತ್ತಿದ್ದಾರೆ. ಹೀಗಾಗಿ ಬಿಹಾರದಲ್ಲಿ ಮಹಾಘಟಬಂಧನ್ ಗೆಲ್ಲುವ ಆತ್ಮವಿಶ್ವಾಸ ನಮಗಿದೆ ಎಂದು ಡಿ.ಕೆ ಶಿವಕುಮಾರ್ ಬಿಹಾರ ಗೆಲುವಿನ ನಿರೀಕ್ಷೆ ವ್ಯಕ್ತಪಡಿಸಿದರು.












