ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವಣ್ಣ ಭೈರತಿ ರಣಗಲ್ ಸಿನಿಮಾ ಮೂಲಕ ಜನರನ್ನು ರಂಜಿಸಲು ರೆಡಿ ಆಗಿದ್ದಾರೆ. ಇತ್ತೀಚಿಗಷ್ಟೇ ಭೈರತಿ ರಣಗಲ್ ಸಿನಿಮಾ ಟ್ರೈಲರ್ ಬಿಡುಗಡೆ ಆಗಿದ್ದು, ಭಾರೀ ಕುತೂಹಲ ಮೂಡಿಸಿದೆ.ಸೋತು ಸುಣ್ಣ ಆಗಿರುವ ಕನ್ನಡ ಚಿತ್ರರಂಗದಲ್ಲಿ ಗೆಲುವಿನ ನಗೆ ಬೀರುವ ಸಿನಿಮಾ ಬರ್ತಿದೆ ಅಂತಾ ಗಾಂಧಿ ನಗರದ ಜನ ಮಾತನಾಡಿಕೊಳ್ತಿದ್ದಾರೆ.ಆದರೆ ಈ ನಡುವೆ ಶಿವಣ್ಣನಿಗೆ ಆರೋಗ್ಯ ಸರಿಯಿಲ್ಲ ಅನ್ನೋ ವಿಚಾರ ಬಯಲಾಗಿದೆ.
ಈ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವಣ್ಣನೇ ಸ್ವತಃ ವಿಷಯ ಬಹಿರಂಗ ಮಾಡಿದ್ದು, ನನಗೆ ಅನಾರೋಗ್ಯ ಆಗಿದೆ. ಅದರಲ್ಲಿ ಮುಚ್ಚಿಟ್ಟುಕೊಳ್ಳುವುದು ಏನೂ ಇಲ್ಲ. ಆದರೆ ಎಲ್ಲರೂ ನನಗೆ ಧೈರ್ಯ ತುಂಬಿದ್ದಾರೆ. ನಾನೂ ಕೂಡ ಧೈರ್ಯವಾಗಿ ಎಲ್ಲವನ್ನು ಎದುರಿಸಲು ತಯಾರಾಗಿದ್ದೇನೆ. ಯಾವುದೇ ಕೆಲಸ ಕಾರ್ಯಗಳನ್ನು ಮೊಟಲು ಮಾಡಿಲ್ಲ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲೂ ಭಾಗಿಯಾಗ್ತಿದ್ದೇನೆ. ಭೈರತಿ ರಣಗಲ್ ಪ್ರಮೋಷನ್ನಲ್ಲೂ ನಾನು ಭಾಗಿಯಾಗ್ತೀನಿ ಎಂದಿದ್ದಾರೆ.
ಜನವರಿ ವೇಳೆಗೆ ನಾನು ಸಣ್ಣದೊಂದು ಸರ್ಜರಿಗೆ ಒಳಗಾಗಬೇಕಿದ್ದು, ಅಮೆರಿಕದಲ್ಲಿ ಸರ್ಜರಿ ಮಾಡಿಸೋದಾ..? ಅಥವಾ ಇಲ್ಲೇ ಇಂಡಿಯಾದಲ್ಲೇ ಮಾಡಿಸೋದ ಅನ್ನೋ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ. ಅಮೆರಿಕದಲ್ಲಿ ಒಂದು ತಿಂಗಳ ಚಿಕಿತ್ಸೆ ಮುಗಿಸಿ ಜನವರಿ ಅಂತ್ಯದ ವೇಳೆಗೆ ನಾನು ಮೊದಲಿನ ಶಿವಣ್ಣನಾಗಿ ನಿಮ್ಮ ಮುಂದೆ ನಿಲ್ಲುತ್ತೇನೆ ಅಂತಾನೂ ಕನ್ನಡಿಗ ಅಭಿಮಾನಿಗಳಿಗೆ ಶಿವಣ್ಣ ಧೈರ್ಯ ತುಂಬಿದ್ದಾರೆ.
ನಾನು ಸದ್ಯಕ್ಕೆ ಅಭಿಮಾನಿಗಳನ್ನು ಕಂಡಾಗ ಸ್ವಲ್ಪ ದೂರ ಉಳಿಯುತ್ತಿದ್ದೇನೆ. ಸೆಲ್ಫಿಗೆ ಮುಗಿಬೀಳುವುದರಿಂದಲೂ ಅಂತರ ಕಾಯ್ದುಕೊಂಡಿದ್ದೇನೆ. ಕೆಲವೊಮ್ಮೆ ಕೋಪಿಸಿಕೊಳ್ತಿದ್ದೇನೆ. ಇದಕ್ಕೆಲ್ಲಾ ನನ್ನ ಅನಾರೋಗ್ಯವೇ ಕಾರಣ. ನನಗೆ ಅಭಿಮಾನಿಗಳಿಂದ ದೂರ ಇರುವುದಕ್ಕೆ ಸಾಧ್ಯವಿಲ್ಲ. ಯಾಕಂದ್ರೆ ಆ ರೀತಿ ನಾವು ಎಂದೂ ನಡೆದುಕೊಂಡವರಲ್ಲ. ಆದರೆ ಅನಿವಾರ್ಯ ಕಾರಣಗಳಿಂದ, ಇನ್ಫೆಕ್ಷನ್ ಆಗಬಾರದು ಅನ್ನೋ ಕಾರಣಕ್ಕೆ ಆ ರೀತಿ ನಡೆದುಕೊಂಡಿದ್ದೇನೆ. ಕ್ಷಮಿಸಿ ಎಂದಿದ್ದಾರೆ. ಜಾಲತಾಣದಲ್ಲಿ ಅಭಿಮಾನಿಗಳೂ ಕೂಡ ಶಿವಣ್ಣ ಆದಷ್ಟು ಬೇಗ ಆರೋಗ್ಯವಾಗಿ ಬನ್ನಿ ಎಂದು ಹರಸಿದ್ದಾರೆ.