ಬೆಂಗಳೂರು: ‘ಕೇಂದ್ರದ ಮಾಜಿ ಸಚಿವ, ವಿಜಯಪುರ ಕ್ಷೇತ್ರದ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ದೂರು ನೀಡಲು ನಾನು ರಾಜ್ಯಾಧ್ಯಕ್ಷನಾಗಿಲ್ಲ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಮಂಗಳವಾರ ಹೊಸದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಕ್ಷದ ವರಿಷ್ಠರು ನನ್ನನ್ನು ಯತ್ನಾಳ್ ಅಥವಾ ಇನ್ಯಾರದೋ ವಿರುದ್ಧ ದಿಲ್ಲಿಯಲ್ಲಿ ದೂರು ಕೊಡಲು ರಾಜ್ಯಾಧ್ಯಕ್ಷನನ್ನಾಗಿ ಮಾಡಿಲ್ಲ.
ಸಂಘಟನೆ ಬಲಪಡಿಸಲು, ಬಿಜೆಪಿ ಸ್ಪಷ್ಟ ಬಹುಮತ ಪಡೆಯಲು ನನ್ನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿದ್ದಾರೆ ಎಂದು ನುಡಿದರು. ಬಸನಗೌಡ ಪಾಟೀಲ್ ಯತ್ನಾಳ್ ಅವರ ಕುರಿತು ವರಿಷ್ಠರೊಂದಿಗೆ ನಾನು ಯಾವುದೇ ವಿಚಾರಗಳನ್ನು ಪ್ರಸ್ತಾಪಿಸಿಲ್ಲ. ಅದರ ಅವಶ್ಯಕತೆಯೂ ನನಗಿಲ್ಲ. ಬಿಜೆಪಿ ಪಕ್ಷದ ಬೆಳವಣಿಗೆಗೆ ಪೂರಕ ಇದ್ದರೆ, ರಾಷ್ಟ್ರೀಯ ನಾಯಕರ ಒಪ್ಪಿಗೆ ಇದ್ದರೆ ಯತ್ನಾಳ್ ಸೇರಿದಂತೆ ಇನ್ನಿತರರು ಇನ್ನೊಂದು ಪಾದಯಾತ್ರೆ ಮಾಡಬಹುದು’ ಎಂದು ಅವರು ಸ್ಪಷ್ಟಣೆ ನೀಡಿದರು.