ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಮಧ್ಯಾಹ್ನದ ಬಳಿಕ ಉತ್ತರ ಕನ್ನಡದ ಶಿರಸಿಯ ವಿಶ್ವೇಶ್ವರ ಹೆಗಡೆ ಕಾಗೇರಿ ನಿವಾಸಕ್ಕೆ ಭೇಟಿ ನೀಡಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ಪ್ರಕಟ ಮಾಡಿದ್ದಾರೆ. ಬಿಜೆಪಿ ನಾಯಕರಿಗೆ ಗಡುವಿನ ಮೇಲೆ ಗಡುವು ನೀಡಿದರೂ ಟಿಕೆಟ್ ನೀಡುವ ಸುಳಿವು ಸಿಗದೆ ಇದ್ದಾಗ ಅಂತಿಮವಾಗಿ ಪಕ್ಷದಿಂದ ಹೊರ ಬರುವ ನಿರ್ಧಾರ ಪ್ರಕಟ ಮಾಡಿದ್ದಾರೆ. ಶನಿವಾರ ಬೆಳಗ್ಗೆ ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮನವೊಲಿಕೆಗೆ ಯತ್ನ ಮಾಡಿದ್ದರು. ಆ ಬಳಿಕ ಕೇಂದ್ರ ನಾಯಕರ ಜೊತೆಗೆ ಮಾತನಾಡಿ, ಸಂಜೆ ಧರ್ಮೇಂದ್ರ ಪ್ರದಾನ್ ಜೊತೆಗೆ ಮತ್ತೊಮ್ಮೆ ಬರುವುದಾಗಿ ತಿಳಿಸಿ ಹೋಗಿದ್ದರು. ಇದೇ ಕಾರಣಕ್ಕೆ ಬೆಳಗ್ಗೆ 11 ಗಂಟೆಗೆ ನಿರ್ಧಾರ ತಿಳಿಸುವ ಮಾತುಕೊಟ್ಟಿದ್ದ ಶೆಟ್ಟರ್ ಸಂಜೆ ಮೇಲೆ ಮತ್ತೊಮ್ಮೆ ಸಭೆ ನಡೆಸ್ತೇನೆ ಎಂದು ಹೇಳಿ, ಕಾಲಾವಕಾಶ ನೀಡಿದ್ದರು. ಅಂತಿಮವಾಗಿ ಧರ್ಮೇಂದ್ರ ಪ್ರದಾನ್ ಬಂದ ಬಳಿಕವೂ ಹೈಕಮಾಂಡ್ ಜಗದೀಶ್ ಶೆಟ್ಟರ್ಗೆ ಟಿಕೆಟ್ ಕೊಡುವ ಭರವಸೆ ನೀಡಲಿಲ್ಲ. ಇದರಿಂದ ಸಿಟ್ಟಿಗೆದ್ದ ಶೆಟ್ಟರ್ ಶಾಸಕ ಸ್ಥಾನ ಹಾಗು ಭಾರತೀಯ ಜನತಾ ಪಾರ್ಟಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಘೋಷಣೆ ಮಾಡಿದ್ದಾರೆ.
ತ್ರಿಮೂರ್ತಿಗಳ ಸಂಧಾನ ಸಂಚು.. ಮೂವರದ್ದು ಒಂದೇ ಮಾತು..!
ಬೆಳಗಾವಿಯಲ್ಲಿ ಟಿಕೆಟ್ ವಂಚಿತರ ಸಭೆ ನಡೆಸಲು ತೆರಳಿದ್ದ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರದಾನ್, ಹುಬ್ಬಳ್ಳಿಯ ಜಗದೀಶ್ ಶೆಟ್ಟರ್ ನಿವಾಸಕ್ಕೆ ಆಗಮಿಸಿದ್ದರು. ಈ ಭೇಟಿಗೂ ಮೊದಲು ಹೋಟೆಲ್ನಲ್ಲಿ ಸಭೆ ಸೇರಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಧರ್ಮೇಂದ್ರ ಪ್ರದಾನ್ ಶೆಟ್ಟರ್ ಮನವೊಲಿಕೆ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಿದ್ರು. ಹೈಕಮಾಂಡ್ ನಾಯಕರನ್ನೂ ಸಂಪರ್ಕ ಮಾಡುವ ಪ್ರಯತ್ನ ಮಾಡಿದ ಅವರಿಗೆ ದೆಹಲಿಯಿಂದ ಟಿಕೆಟ್ ನೀಡಲು ಸಾಧ್ಯವೇ ಇಲ್ಲ ಎನ್ನುವ ಸಂದೇಶ ಸಿಕ್ಕಿತ್ತು. ಇದೇ ಕಾರಣಕ್ಕೆ ಶೆಟ್ಟರ್ ನಿವಾಸಕ್ಕೆ ಬರುವುದನ್ನು ತಡ ಮಾಡಿದ ತ್ರಿಮೂರ್ತಿಗಳು ರಾತ್ರಿ 9.30ರ ಸುಮಾರಿಗೆ ಶೆಟ್ಟರ್ ನಿವಾಸಕ್ಕೆ ಬಂದು ಪಕ್ಷ ತೊರೆಯದಂತೆ ಮನವಿ ಮಾಡಿದರು. ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಟಿಕೆಟ್ ಕೊಡಿಸುವ ಬಗ್ಗೆ ಹೈಕಮಾಂಡ್ ನಾಯಕರ ಜೊತೆಗೆ ಚರ್ಚೆ ನಡೆಸ್ತೇವೆ ಎಂದು ತಿಳಿಸಿದ್ರು. ಯಾವುದಕ್ಕೂ ಶೆಟ್ಟರ್ ಸೊಪ್ಪು ಹಾಕದಿದ್ದಾಗ ಪೆಚ್ಚು ಮೋರೆ ಹಾಕಿಕೊಂಡು ಹೊರಕ್ಕೆ ನಡೆದಿದ್ದರು. ಅಂತಿಮವಾಗಿ ಶೆಟ್ಟರ್ ಕೇಸರಿ ಪಕ್ಷದ ಹೊಸ್ತಿಲು ದಾಟುವ ನಿರ್ಧಾರ ಘೋಷಣೆ ಮಾಡಿದರು.
ನಾನು ಭ್ರಷ್ಟಾಚಾರಿಯೂ ಅಲ್ಲ, ನನ್ನ ಸಿ.ಡಿ ಯಾರ ಬಳಿಯೂ ಇಲ್ಲ..!
ಬಿಜೆಪಿ ಪಕ್ಷದಿಂದ ಹೊರಕ್ಕೆ ಬರುವುದಾಗಿ ಘೋಷಣೆ ಮಾಡುವ ಮೊದಲು ಮಾತಿನ ಸುರಿಮಳೆಗರೆದ ಶೆಟ್ಟರ್, ನನ್ನ ವಿರುದ್ಧ ಕಳೆದ ಮೂರ್ನಾಲ್ಕು ತಿಂಗಳಿಂದ ಕೆಟ್ಟ ವ್ಯವಸ್ಥೆ ಕೆಲಸ ಮಾಡಿದೆ. ನಾನು ಯಾವುದೇ ಹಗರಣ ಮಾಡಿಲ್ಲ, ನನ್ನ ಸಿ.ಡಿಗಳು ಯಾರ ಬಳಿಯೂ ಇಲ್ಲ. ನನ್ನ ಮೇಲೆ ಯಾವುದೇ ಆರೋಪಗಳೂ ಇಲ್ಲ. ಕಪ್ಪು ಚುಕ್ಕೆ ಇಲ್ಲದಂತೆ ರಾಜಕಾರಣ ಮಾಡಿದ್ದೇನೆ. ಪಕ್ಷ ಕಷ್ಟದಲ್ಲಿದ್ದಾಗ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಪಕ್ಷ ಕೊಟ್ಟ ಯಾವುದೇ ಗೌರವವನ್ನು ಎಂಜಾಯ್ ಮಾಡಿಲ್ಲ, ಕೆಲಸ ಮಾಡಿದ್ದೀನಿ. ಸೆಕ್ಸ್ ಹಗರಣ, ಸಿ.ಡಿ ಹಗರಣ, ಭ್ರಷ್ಟಾಚಾರ, ರೌಡಿಸಂನಲ್ಲಿ ಇದ್ದವರಿಗೆ ಟಿಕೆಟ್ ಕೊಡಲಾಗ್ತಿದೆ. 75 ವರ್ಷ ತುಂಬಿದವರಿಗೆ, ಕ್ರಿಮಿನಲ್ಗಳಿಗೆ ಟಿಕೆಟ್ ಕೊಟ್ಟಿದ್ದಾರೆ. ಜೈಲಿಗೆ ಹೋಗಿ ಬಂದವ್ರಿಗೆ ಟಿಕೆಟ್ ಕೊಟ್ಟಿದ್ದು ನನಗೆ ಕೊಟ್ಟಿಲ್ಲ. ನನಗೆ ಟಿಕೆಟ್ ಯಾಕೆ ಕೊಡ್ತಿಲ್ಲ ಅಂದ್ರೆ ಪ್ರಹ್ಲಾದ್ ಜೋಶಿ, ಧರ್ಮೇಂದ್ರ ಪ್ರದಾನ್, ಬಸವರಾಜ ಬೊಮ್ಮಾಯಿ ಯಾರ ಬಳಿಯೂ ಉತ್ತರವಿಲ್ಲ. ಹೈಕಮಾಂಡ್ ತೀರ್ಮಾನ ಅಂತಷ್ಟೇ ಹೇಳ್ತಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ನನಗೆ ಹಠ ಬಂದಿದೆ. ಚುನಾವಣೆಗೆ ಸ್ಪರ್ಧೆ ಮಾಡಬೇಕು ಅನ್ನೋ ನಿರ್ಧಾರಕ್ಕೆ ಬಂದಿದ್ದೇನೆ ಎಂದಿದ್ದಾರೆ.
ಕಾಂಗ್ರೆಸ್-ಜೆಡಿಎಸ್-ಪಕ್ಷೇತರ ಇನ್ನು ನಿರ್ಧಾರ ಆಗಿಲ್ಲ..!
ನನ್ನನ್ನ ಬಿಜೆಪಿಯವ್ರು ಯೂಸ್ ಅಂಡ್ ಥ್ರೋ ರೀತಿ ಬಳಸಿ ಬಿಸಾಡಿದ್ದಾರೆ. ನನ್ನನ್ನ ಪಕ್ಷ ಕಡೆಗಣಿಸಿದ್ಮೇಲೆ ಹಠ ಹೆಚ್ಚಾಗಿದ್ದು, ನನ್ನ ಮೇಲೆ ಕುತಂತ್ರ, ಷಡ್ಯಂತ್ರ ಮಾಡಿದ ಪಕ್ಷದಲ್ಲಿ ನಾನು ಇರಲ್ಲ. ಈ ಸಲ ಎಲೆಕ್ಷನ್ಗೆ ನಿಲ್ತೀನಿ, ಯಾರಿಂದ್ಲೂ ತಪ್ಪಿಸಲು ಆಗಲ್ಲ. ಆದರೆ ಪಕ್ಷೇತರನಾಗಿ ಸ್ಪರ್ಧೆ ಮಾಡಬೇಕಾ..? ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡುವುದು ಸೂಕ್ತವೇ..? ಅನ್ನೋ ಬಗ್ಗೆ ಪಕ್ಷ ಹಾಗು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬೆಂಬಲಿಗರ ಸಭೆ ನಡೆಸಿ ಅಂತಿಮ ನಿರ್ಧಾರ ಮಾಡ್ತೇನೆ ಎಂದಿದ್ದಾರೆ. ಈ ನಡುವೆ ಕಾಂಗ್ರೆಸ್ನಿಂದ ಈಗಾಗಲೇ ಜಗದೀಶ್ ಶೆಟ್ಟರ್ಗೆ ಆಹ್ವಾನ ಹೋಗಿದ್ದು, ಅದೇ ಕಾರಣಕ್ಕಾಗಿ ಶೆಟ್ಟರ್ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇನ್ನು ಹುಬ್ಬಳ್ಳಿ ಭಾಗದಲ್ಲಿ ಕಾಂಗ್ರೆಸ್ ಈಗಾಗಲೇ ಬಲಾಡ್ಯವಾಗಿದ್ದು, ಬಂಡಾಯ ಸೃಷ್ಟಿಯಾಗುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ. ಒಂದು ವೇಳೆ ಶೆಟ್ಟರ್ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದರೆ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಜೆಡಿಎಸ್ ಬಾಗಿಲು ತಟ್ಟಬಹುದು. ಆಗ ಹುಬ್ಬಳ್ಳಿ ಧಾರವಾಡ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳು ಹೆಚ್ಚಾಗಿದೆ.
ಕೃಷ್ಣಮಣಿ