ಆರ್ಯನ್ ಖಾನ್ ಪ್ರಕರಣದ ತನಿಖೆ ನಡೆಸುತ್ತಿದ್ದ ಸಮೀರ್ ವಾಂಖೆಡೆ ವಿರುದ್ಧ ಸರಣಿ ಆರೋಪಗಳನ್ನು ಮಾಡಿರುವ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಈಗ ಮಾಜಿ ಸಿಎಂ ದೇವೆಂದ್ರ ಫಡ್ನವಿಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಮುಂಬೈನಲ್ಲಿ ಅಂಡರ್ ವರ್ಲ್ಡ್ ಬೆಳೆಯಲು ಫಡ್ನವಿಸ್ ಕಾರಣ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಸಮೀರ್ ವಾಂಖೆಡೆ ಹಾಗೂ ಫಡ್ನವಿಸ್ ನಡುವೆ ‘ಹಳೆಯ’ ಸಂಬಂಧವಿದೆ, ಈ ಕಾರಣಕ್ಕಾಗಿ ಫಡ್ನವಿಸ್ ವಾಂಖೆಡೆಯ ಬೆಂಬಲಕ್ಕೆ ನಿಂತಿದ್ದಾರೆ ಎಂದು ಹೇಳಿದ್ದಾರೆ.
“ಬಿಕೆಸಿಯಲ್ಲಿ ಅಕ್ಟೋಬರ್ 8,2017ರಂದು ಸುಮಾರು 14 ಕೋಟಿ ಮೊತ್ತದ ನಕಲಿ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೆ, ಈ ಕುರಿತಾಗಿ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಇದರ ತನಿಖಾ ತಂಡದಲ್ಲಿಯೂ ಸಮೀರ್ ವಾಂಖೆಡೆ ಭಾಗವಹಿಸಿದ್ದರು. ದೇವೆಂದ್ರ ಫಡ್ನವಿಸ್ ಸಿಎಂ ಆಗಿದ್ದಾಗ ರಾಜಕಾರಣದ ಅಪರಾಧೀಕರಣ ನಡೆದಿದೆ. ನಕಲಿ ಕರೆನ್ಸಿಗಳ ಜಾಲವನ್ನು ಸಿಎಂ ಆಗಿದ್ದಾಗ ಖುದ್ದು ಫಡ್ನವಿಸ್ ಅವರೇ ನಡೆಸುತ್ತಿದ್ದರು,” ಎಂದು ಮಲಿಕ್ ಹೇಳಿದ್ದಾರೆ.
ಬಿಜೆಪಿ ಸಭೆಗಳಲ್ಲಿ ಕಾಣಿಸುತ್ತಿದ್ದ, ಪಿಎಂ ನರೇಂದ್ರ ಮೋದಿ ಅವರ ಸಭೆಗಳಲ್ಲಿ ಕಾಣಿಸಿದ್ದ ರಿಯಾಝ್ ಭಾತಿ ಯಾರು ಎಂಬುದನ್ನು ಫಡ್ನವಿಸ್ ಹೇಳಬೇಕು. ನಕಲಿ ಪಾಸ್ ಪೋರ್ಟ್’ಗಳೊಂದಿಗೆ ಸಿಕ್ಕಿಬಿದ್ದಿದ್ದ ರಿಯಾಝ್ ಭಾತಿಯನ್ನು ಕೇವಲ ಎರಡೇ ದಿನಗಳಲ್ಲಿ ಯಾಕೆ ಬಿಡುಗಡೆಗೊಳಿಸಲಾಯಿತು? ಅವನಿಗೆ ದಾವೂದ್ ಇಬ್ರಾಹಿಂ ಜತೆಗಿದ್ದ ಸಂಬಂಧವನ್ನು ಯಾಕೆ ಮುಚ್ಚಿಡಲಾಯಿತು? ಇಂತಹ ವ್ಯಕ್ತಿ ಪ್ರಧಾನ ಮಂತ್ರಿ ಭಾಗವಹಿಸಿದ ಸಮಾರಂಭಕ್ಕೆ ತಲುಪಲು ಹೇಗೆ ಸಾಧ್ಯ?, ಎಂದು ಮಲಿಕ್ ಪ್ರಶ್ನಿಸಿದ್ದಾರೆ.
ರಿಯಾಝ್ ಭಾತಿ, ಮುನ್ನಾ ಯಾದವ್’ರಂತಹ ಹಲವು ಗೂಂಡಾಗಳನ್ನು ದೇವೇಂದ್ರ ಫಡ್ನವಿಸ್ ತಮ್ಮ ಅಧಿಕರಾವಧಿಯಲ್ಲಿ ರಕ್ಷಿಸಿದ್ದರು. ಮುನ್ನಾ ಯಾದವನ್ನು ಕಟ್ಟಡ ಕಾರ್ಮಿಕರ ಮಂಡಳಿಯ ಅಧ್ಯಕ್ಷನಾಗಿ ಆಯ್ಕೆ ಮಾಡಲಾಗಿತ್ತು. ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಕರೆತರುವ ಪ್ರಕರಣದಲ್ಲಿ ಭಾಗಿಯಾಗಿದ್ದ ಹೈದರ್ ಅಝಂ ಅನ್ನು ಮೌಲಾನಾ ಆಝಾದ್ ನಿಧಿ ಮಂಡಳಿಗೆ ಅಧ್ಯಕ್ಷನಾಗಿ ಆಯ್ಕೆ ಮಾಡಲಾಗಿತ್ತು, ಎಂದು ನವಾಬ್ ಮಲಿಕ್ ವಾಗ್ದಾಳಿ ನಡೆಸಿದ್ದಾರೆ.
“ಸಮೀರ್ ವಾಂಖೆಡೆ ಹಾಗೂ ಫಡ್ನವಿಸ್ ನಡುವಿನ ‘ಗೆಳೆತನ’ ಮುಂಬೈ ಹಾಗೂ ಮಹಾರಾಷ್ಟ್ರದಲ್ಲಿ ಅಪರಾಧಿ ಕೃತ್ಯಗಳ ಹೆಚ್ಚಳಕ್ಕೆ ಕಾರಣವಾಯಿತು. ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಇವೆಲ್ಲ ನಡೆದಿದೆ. ಅಮಾಯಕರನ್ನು ನಕಲಿ ಪ್ರಕರಣಗಳಲ್ಲಿ ಸಿಲುಕಿಸುವ ಜಾಲದ ವಿರುದ್ದ ನನ್ನ ಹೋರಾಟ ನಡೆಯುತ್ತಿದೆ. ಕೆಲವರು ನನ್ನನ್ನು ತಡೆಯಲು ಯತ್ನಿಸುತ್ತಿದ್ದಾರೆ. ಸತ್ಯವನ್ನು ಹೊರತರಲು ನನ್ನ ಹೋರಾಟ ಮುಂದುವರೆಸುತ್ತೇನೆ. ನನ್ನ ಹೊರಾಟ ಕೆಲವು ವ್ಯಕ್ತಿಗಳ ಮೇಲಿನ ವೈಯಕ್ತಿಕ ದ್ವೇಷಕ್ಕಾಗಿ ಅಲ್ಲ. ಬದಲಾಗಿ ಕೆಲವು ಶಕ್ತಿಗಳಿಂದ ನಡೆಯುತ್ತಿರುವ ಅನ್ಯಾಯದ ವಿರುದ್ಧ ನನ್ನ ಹೊರಾಟ,” ಎಂದು ಮಲಿಕ್ ಹೇಳಿದ್ದಾರೆ.