ಮಣಿಪುರದ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್, ರಾಜ್ಯದಲ್ಲಿ ಸುಮಾರು ಎರಡು ತಿಂಗಳ ಕಾಲ ಜನಾಂಗೀಯ ಹಿಂಸಾಚಾರವನ್ನು ನಿಭಾಯಿಸಿದ ಬಗ್ಗೆ ಟೀಕೆಗೆ ಒಳಗಾಗಿದ್ದರು, ಇಂದು ರಾಜೀನಾಮೆಯ ಅಂಚಿನಲ್ಲಿದ್ದರು ಆದರೆ ಸಾರ್ವಜನಿಕ ಒತ್ತಡದಿಂದ ತಮ್ಮ ಮನಸ್ಸನ್ನು ಬದಲಾಯಿಸಿ ರಾಜೀನಾಮೆ ನೀಡುವುದಿಲ್ಲ ಎಂದು ಸಿಎಂ ಯು-ಟರ್ನ್ ಹೊಡೆದಿದ್ದಾರೆ.

ಮಣಿಪುರದಲ್ಲಿ ಹಿಂಸಾಚಾರ ಮುಂದುವರಿಯುತ್ತಿರುವ ಹಿನ್ನಲೆಯಲ್ಲಿ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು.
ಇಂದು ಮಧ್ಯಾಹ್ನ ಮುಖ್ಯಮಂತ್ರಿ ಬಿರೇನ್ ಸಿಂಗ್ ಮತ್ತು ಗವರ್ನರ್ ಅನುಸೂಯಾ ಉಯ್ಕೆ ನಡುವೆ ಸಭೆ ನಡೆಯಬೇಕಿತ್ತು. ಹೀಗಾಗಿ ಸಿಂಗ್ ತಮ್ಮ ಮನೆಯಿಂದ ಹೊರಡುವವರಿದ್ದರು. ಆದರೆ ತಮ್ಮ ನಿವಾಸದ ಹೊರಗೆ ನಡೆದ ಘಟನೆಯ ನಂತರ ಮಣಿಪುರ ಸಿಎಂ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದಿರಲು ನಿರ್ಧರಿಸಿದ್ದಾರೆ ಎಂದು ಹಿರಿಯ ಸಚಿವ ಗೋವಿಂದಸ್ ಕೊಂತೌಜಮ್ ಹೇಳಿದ್ದಾರೆ.
ಸಿಎಂ ಬಿರೇನ್ ಸಿಂಗ್ ಅವರ ನಿವಾಸದ ಹೊರಗೆ ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ರಾಜೀನಾಮೆ ನೀಡಬೇಡಿ ಎಂದು ಒತ್ತಾಯಿಸಿದ್ದರು. ನೂರಾರು ಮಹಿಳೆಯರ ಗುಂಪು ರಾಜ್ಯಪಾಲರ ನಿವಾಸಕ್ಕೆ ಹೋಗುವ ರಸ್ತೆಯನ್ನು ತಡೆದು ರಾಜೀನಾಮೆ ನೀಡದಂತೆ ಒತ್ತಡ ಹೇರಿದರು. ಇದರಿಂದಾಗಿ ಅವರು ರಾಜ್ಯಪಾಲರ ಭವನವನ್ನು ತಲುಪುವ ಮೊದಲು ಜನರ ಮುಂದೆ ತಮ್ಮ ರಾಜೀನಾಮೆ ಪತ್ರವನ್ನು ಮಹಿಳಾ ಬೆಂಬಲಿಗರು ಹರಿದು ಹಾಕಿದ್ದಾರೆ.

ಇನ್ನು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ರಾಜೀನಾಮೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ”ಈ ನಿರ್ಣಾಯಕ ಘಟ್ಟದಲ್ಲಿ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ” ಎಂದು ತಿಳಿಸಿದ್ದಾರೆ.
ಸಿಎಂ ರಾಜೀನಾಮಗೆ ಪ್ರತಿಪಕ್ಷಗಳ ಆಗ್ರಹ
ಮಣಿಪುರದ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ಆಡಳಿತದಲ್ಲಿ ಒಂದು ತಿಂಗಳಿನಿಂದ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಕಾಂಗ್ರೆಸ್ ಶನಿವಾರದಂದು ಅವರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಿದೆ.
ಮಣಿಪುರದ ಮಾಜಿ ಮುಖ್ಯಮಂತ್ರಿ ಒಕ್ರಾಮ್ ಇಬೋಬಿ ಸಿಂಗ್ ಅವರು ಸರ್ವಪಕ್ಷಗಳ ಸರಾಸರಿಯಲ್ಲಿ ಎಂಟು ಅಂಶಗಳ ಬೇಡಿಕೆಗಳ ಚಾರ್ಟರ್ ಅನ್ನು ಪ್ರಸ್ತುತಪಡಿಸಿದರು, ಇದು ಪ್ರಸ್ತುತ ಸಿಎಂ ಬಿರೇನ್ ಸಿಂಗ್ ಅವರನ್ನು ತಕ್ಷಣವೇ ಪದಚ್ಯುತಗೊಳಿಸುವುದನ್ನು ಉಲ್ಲೇಖಿಸಿದೆ. ಈ ಸಭೆಯನ್ನು ಗೃಹ ಸಚಿವ ಅಮಿತ್ ಶಾ ಕರೆದಿದ್ದರು.
”ಮಣಿಪುರದ ಸಿಎಂ ಅವರನ್ನು ತಕ್ಷಣವೇ ಪದಚ್ಯುತಗೊಳಿಸುವುದು ನಮ್ಮ ಬೇಡಿಕೆಯಾಗಿದೆ. ರಾಜೀನಾಮೆ ನೀಡದೇ ಮಣಿಪುರದಲ್ಲಿ ಶಾಂತಿ ಮತ್ತು ಸಹಜತೆ ಸ್ಥಿತಿಗೆ ಮರಳಲು ಸಾಧ್ಯವಿಲ್ಲ” ಎಂದು ಹೇಳಿದ್ದರು.

ಸಭೆಯ ನಂತರ, ಒಕ್ರಾಮ್ ಇಬೋಬಿ ಸಿಂಗ್ ಅವರು ”ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಹೆಚ್ಚಿನ ಸಮಯವನ್ನು ನೀಡಿರುವುದು “ದುರದೃಷ್ಟಕರ” ಎಂದು ಅಸಮಧಾನ ಹೊರಹಾಕಿದ್ದರು. ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ಮೋದಿ ವಹಿಸಬೇಕಿತ್ತು. ಕಳೆದ 50 ದಿನಗಳಲ್ಲಿ ಮಣಿಪುರದ ಬಗ್ಗೆ ಒಂದೇ ಒಂದು ಮಾತನ್ನೂ ಆಡಿಲ್ಲ” ಎಂದು ಪ್ರಧಾನಿ ಮೋದಿಯವರ ಮೇಲೆ ದಾಳಿ ಮಾಡಿದರು.
”ರಾಜ್ಯ ಸರ್ಕಾರವು ಅತ್ಯಂತ ಅಗತ್ಯವಿರುವಾಗ ಪರಿಣಾಮಕಾರಿ ಆಡಳಿತವನ್ನು ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಮತ್ತು ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಮುಖ್ಯಮಂತ್ರಿಗಳು ತಮ್ಮ ವೈಫಲ್ಯವನ್ನು ಎರಡು ಬಾರಿ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ. ಜನರ ಕ್ಷಮೆಯನ್ನೂ ಕೇಳಿದ್ದಾರೆ. ಕೂಡಲೇ ಮುಖ್ಯಮಂತ್ರಿಯನ್ನು ಬದಲಾಯಿಸಬೇಕು” ಎಂದು ಒಕ್ರಾಮ್ ಇಬೋಬಿ ಸಿಂಗ್ ಆಗ್ರಹಿಸಿದ್ದರು.
ಪರಿಶಿಷ್ಟ ಪಂಗಡ ಮೀಸಲಾತಿ ವಿಚಾರವಾಗಿ ಮೈತೆಯಿ ಮತ್ತು ಕುಕಿ ಸಮುದಾಯದ ನಡುವೆ ಹಿಂಸಾಚಾರ ನಡೆಯುತ್ತಿದೆ. ಇದುವರೆಗೆ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ರಾಜ್ಯದಾದ್ಯಂತ ತೆರೆಯಲಾಗಿರುವ 300 ಪರಿಹಾರ ಕೇಂದ್ರಗಳಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಸಂತ್ರಸ್ತರು ಆಶ್ರಯ ಪಡೆದಿದ್ದಾರೆ.












