ಕೊರೋನಾ ಮೊದಲನೇ ಹಾಗೂ ಎರಡನೇ ಅಲೆಯಲ್ಲಿ ಜನರ ಪರದಾಟ ಇನ್ನೂ ಕಣ್ಣಿಗೆ ಕಟ್ಟಿದಂತೆಯೇ ಇದೆ. ಈ ವೇಳೆಯಲ್ಲಿ ಖಾಸಗಿ ಆಸ್ಪತ್ರೆಗಳು ಜನರಿಂದ ದುಬಾರಿ ದರ ಪಡೆದಿರುವುದು ಗೊತ್ತಿದೆ. ಲಕ್ಷ ಲಕ್ಷ ಬಿಲ್ ಮಾಡಿ ಜನರು ಹೈರಾಣಾಗುವಂತೆ ಮಾಡಿದ್ದರು. ಆದರೆ ಇದೀಗ ಒಮಿಕ್ರಾನ್ನಿಂದ ಮೂರನೇ ಅಲೆ ಭೀತಿ ಎದುರಾಗಿರುವ ಹೊತ್ತಲ್ಲೇ ನಗರದ ಖಾಸಗಿ ಆಸ್ಪತ್ರೆಗಳಿಗೆ ನೋಟೀಸ್ ಜಾರಿ ಮಾಡಿ ದರಗಳ ಬಗ್ಗೆ ಖಡಕ್ ಎಚ್ಚರಿಕೆ ಕೊಟ್ಟಿದೆ.
ಎರಡನೇ ಅಲೆಯಲ್ಲಿ ಆದ ತಪ್ಪನ್ನ ತಿದ್ದಿಕೊಳ್ಳೋಕೆ ಮುಂದಾದ ಪಾಲಿಕೆ
ಮೊದಲ ಮತ್ತು ಎಡನೇ ಅಲೆ ಸಮಯದಲ್ಲಿ ಜನರು ಕಂಡು ಕೇಳರಿಯದ ರೀತಿಯಲ್ಲಿನ ಆಸ್ಪತ್ರೆ ಬಿಲ್ ಕಂಡು ದಂಗಾಗಿ ಹೋಗಿದ್ದರು. ಬೆಡ್ ಬೇಕು ಅಂದ್ರೆ ಲಕ್ಷ.. ಐಸಿಯೂ ಬೇಕು ಅಂದ್ರೆ ಲಕ್ಷ ಲಕ್ಷ.. ಹೀಗೆ ಲಕ್ಷ ಲಕ್ಷದ ಬಿಲ್ಗಳನ್ನು ಆಸ್ಪತ್ರೆಗಳು ನೀಡುತ್ತಿದ್ದವು. ಒಂದು ಕಡೆ ಕೊರೋನಾ ಹೊಡೆತ ಮತ್ತೊಂದು ಕಡೆ ಖಾಸಗಿ ಆಸ್ಪತ್ರೆಗಳು ನಡೆಸಿದ ಸುಲಿಗೆ ಜನರು ಅಕ್ಷರಶಃ ನಲುಗಿ ಹೋಗಿದ್ದರು. ಶ್ರೀಮಂತರು ಲಕ್ಷವಲ್ಲ ಕೋಟಿಯಾದೂ ಸರಿ ಎಂದರೆ ಇತ್ತ ಬಡವರು ಒಂದೊಂದು ರೂಪಾಯಿಗೂ ಹೈರಾಣಾಗಿ ಹೋದರು. ಆದರೆ ಈ ಬಾರಿ ಓಮಿಕ್ರಾನ್ ಮೂರನೇ ಅಲೆ ಭೀತಿ ಹುಟ್ಟಿಸಿದ ಬೆನ್ನಲ್ಲೇ ಪಾಲಿಕೆ ಎಚ್ಚೆತ್ತುಕೊಂಡು ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಲಗಾಮು ಹಾಕೋಕೆ ಮುಂದಾಗಿದೆ. ಆಸ್ಪತ್ರೆ ಬೆಡ್ಗಳಿಗೆ ಪಾಲಿಕೆಯೇ ದರ ನಿಗದಿ ಮಾಡಿ ಆದೇಶ ಹೊರಡಿಸಿದೆ.
ಸೋಂಕಿತರಿಂದ ಹೆಚ್ಚಿನ ಹಣ ವಸೂಲಿ ಮಾಡದಂತೆ ಸೂಚನೆ
ಎರಡನೇ ಅಲೆಯಲ್ಲಿ ಸೋಂಕಿತರಿಂದ ಮನಸೋ ಇಚ್ಚೆ ಆಸ್ಪತ್ರೆಗಳು ಹಣ ವಸೂಲಿ ಮಾಡಿತ್ತು. ಸರ್ಕಾರ ನಿಗದಿ ಮಾಡಿದ್ದ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿತ್ತು. ಸರ್ಕಾರಕ್ಕೆ, ಬಿಬಿಎಂಪಿಗೆ ಹೆಚ್ಚಿನ ದರ ಬಗ್ಗೆ ಸಾಕಷ್ಟು ದೂರುಗಳೂ ಬಂದಿತ್ತು. ಬೆಡ್ ಬ್ಲಾಕಿಂಗ್ ದಂಧೆ ಬಗ್ಗೆಯೂ ಚರ್ಚೆಯಾಗಿತ್ತು. ಹೀಗೆ ಎರಡನೇ ಅಲೆಯಲ್ಲಿ ಬೆಡ್ಗಳಿಗೆ ಲಕ್ಷ ಲಕ್ಷ ಬಿಲ್ ಮಾಡಿತ್ತು ಖಾಸಗಿ ಆಸ್ಪತ್ರೆಗಳು. ಎರಡನೇ ಅಲೆಯಲ್ಲಿ ಆದ ಈ ತಪ್ಪು ಮರುಕಳಿಸಬಾರದು ಅಂತ ಈಗಲೇ ಎಚ್ಚೆತ್ತುಕೊಂಡು ಬಿಬಿಎಂಪಿ ದರ ನಿಗದಿ ಮಾಡಿದೆ.

ಖಾಸಗಿ ಆಸ್ಪತ್ರೆಗಳಿಗೆ ನೊಟೀಸ್ ನೀಡೋಕೆ ಮುಂದಾದ ಬಿಬಿಎಂಪಿ
ಈಗಾಗಲೇ ಈ ಬಗ್ಗೆ ನಗರದ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ಸೂಚನೆ ಕೊಟ್ಟಿದ್ದು, ಒಮಿಕ್ರಾನ್ನಿಂದ ಮೂರನೇ ಅಲೆ ಭೀತಿ ಹೆಚ್ಚಿದ ನಡುವೆಯೇ ಬೆಡ್ ರೇಟ್ ನಿಗದಿ ಮಾಡಿದೆ. ಇದನ್ನು ಉಲ್ಲಂಘಿಸಿದರೆ Karnataka Infectious Diseases Act ಹಾಗೂ Registration of Karnataka Private Medical Establishment Act 2017 ಆಕ್ಟ್ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಿದೆ ಬಿಬಿಎಂಪಿ. ಇನ್ನು ಹೆಚ್ಚಿನ ದರ ವಸೂಲಿ ಮಾಡಿದ್ದು ಕಂಡು ಬಂದರೆ ಖುದ್ದು ಸಾರ್ವಜನಿಕರೇ ಪಾಲಿಕೆಗೆ ತಿಳಿಸಬಹುದು. ಇದಕ್ಕಂತಲೇ ಬಿಬಿಎಂಪಿಯಿಂದ ಹೆಲ್ಪ್ ಲೈನ್ ನಂಬರ್ ತೆರೆದಿದ್ದು, 080-22660000 ನಂಬರ್ ಕರೆ ಮಾಡಿ ದೂರು ದಾಖಲಿಸಿದರೆ ಅಂಥಾ ಆಸ್ಪತ್ರೆ ವಿರುದ್ದ ಪಾಲಿಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ.






