ಹೊಸದಿಲ್ಲಿ: ದೇಶದ ದೊಡ್ಡ ಶ್ರೀಮಂತರನ್ನು ಗುರುತಿಸುವ ‘ಹುರುನ್ ಇಂಡಿಯಾ’ದ ರ್‍ಯಾಂಕಿಂಗ್ ಪಟ್ಟಿ ಮಂಗಳವಾರ ಬಿಡುಗಡೆಯಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಅದಾನಿ ಗ್ರೂಪ್‌ನ ಗೌತಮ್ ಅದಾನಿ ಅವರನ್ನು ಹಿಂದಿಕ್ಕಿ ಭಾರತದ ನಂ.1 ಶ್ರೀಮಂತ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹುರುನ್ ಇಂಡಿಯಾ ಮತ್ತು 360 ಒನ್ ವೆಲ್ತ್ ಸಂಸ್ಥೆಗಳು ಜಂಟಿಯಾಗಿ ಬಿಡುಗಡೆ ಮಾಡಿದ ವರದಿ ಪ್ರಕಾರ, ದೇಶದ ಶ್ರೀಮಂತರ ಪಟ್ಟಿಯಲ್ಲಿ ನಂ. 2 ಸ್ಥಾನಕ್ಕೆ ಅದಾನಿ ಕುಸಿದಿದಿದ್ದಾರೆ. ಮುಕೇಶ್ ಅಂಬಾನಿ ಸಂಪತ್ತು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 2ರಷ್ಟು ಏರಿಕೆಯಾಗಿ 8,08,700 ಕೋಟಿ ರೂ.ಗೆ ಮುಟ್ಟಿದೆ. ಇದೇ ಅವಧಿಯಲ್ಲಿ ಅದಾನಿ ಸಂಪತ್ತು ಶೇ. 57ರಷ್ಟು ಕುಸಿದು 4,74,800 ಕೋಟಿ ರೂ.ಗೆ ಇಳಿದಿದೆ.

ಕಳೆದ ಜನವರಿಯಲ್ಲಿ ಅದಾನಿ ಗ್ರೂಪ್‌ನ ಕಂಪನಿಗಳ ವಿರುದ್ಧ ಹಿಂಡನ್‌ಬರ್ಗ್ ರೀಸರ್ಚ್ ಸಂಸ್ಥೆ ಪ್ರಕಟಿಸಿದ್ದ ಆರೋಪದ ವರದಿಗಳು ದೊಡ್ಡ ಪರಿಣಾಮ ಬೀರಿವೆ. ಇದರಿಂದ ಗೌತಮ್ ಅದಾನಿ ಷೇರು ಸಂಪತ್ತು ಕರಗಿದೆ.
3ನೇ ಸ್ಥಾನದಲ್ಲಿ ಪುಣೆ ಮೂಲದ 82 ವರ್ಷದ ಸೈರಸ್ ಎಸ್ ಪೂನಾವಾಲಾ ಮತ್ತು ಅವರ ಕುಟುಂಬವಿದೆ. ಸೀರಮ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾದ ಈ ಕುಟುಂಬದ ಸಂಪತ್ತು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 36ರಷ್ಟು ವೃದ್ಧಿಯಾಗಿದ್ದು 2,78,500 ಕೋಟಿ ರೂ.ಗೆ ಮುಟ್ಟಿದೆ.







