ದಕ್ಷಿಣ ಕಾಶಿ ನಂಜನಗೂಡಿನ ( Nanjangud ) ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಹುಂಡಿಗಳ ಪರ್ಕಾವಣೆ ( ಹುಂಡಿ ಎಣಿಕೆ ಕಾರ್ಯ) ನಡೆಯಿತು. ದೇವಾಲಯದ 34 ಹುಂಡಿಗಳಲ್ಲಿ ಸಂಗ್ರಹವಾಗಿದ್ದ ಭಕ್ತರ ಕಾಣಿಕೆಯನ್ನು ಹೊರ ತೆಗೆದು ಎಣಿಕೆ ಮಾಡಲಾಯಿತು. ಎಲ್ಲಾ ಹುಂಡಿಗಳಿಂದ ದಾಖಲೆ ಮೊತ್ತವಾಗಿ ಒಂದು ಕೋಟಿ ಎಪ್ಪತ್ತೇಳು ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿದೆ.
ಅಲ್ಲದೆ 65 ಗ್ರಾಂ ಚಿನ್ನ ( gold ) , ಮೂರುವರೆ ಕೆಜಿ ಬೆಳ್ಳಿ ( silver ), 64 ವಿದೇಶಿ ನೋಟುಗಳು ( currency ) ಸಹ ಲಭ್ಯವಾಗಿದೆ. ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ( free bus traveling ) ಕಲ್ಪಿಸಿರುವ ಹಿನ್ನೆಲೆಯಲ್ಲಿ ಹೆಚ್ಚು ಹೆಚ್ಚು ಮಹಿಳಾ ಭಕ್ತರು ದೇವಾಲಯಕ್ಕೆ ಆಗಮಿಸಿದ್ದ ಹಿನ್ನೆಲೆ ಈ ದಾಖಲೆ ಮೊತ್ತ ಸಂಗ್ರಹವಾಗಿದೆ.

ಭಕ್ತರು ಕಾಣಿಕೆ ರೂಪದಲ್ಲಿ ಒಂದು ರೂಪಾಯಿ ನಾಣ್ಯದಿಂದ ಹಿಡಿದು ಐದುನೂರು, ಹಾಗೂ ಎರಡು ಸಾವಿರ ರೂಪಾಯಿಗಳವರೆಗೆ ಹಾಕಿದ್ದ ನೋಟುಗಳನ್ನು ವಿಂಗಡಣೆ ಮಾಡಲಾಯಿತು. ದೇವಾಲಯದ ದಾಸೋಹ ಭವನದಲ್ಲಿ ನಡೆದ ಎಣಿಕೆ ಕಾರ್ಯದಲ್ಲಿ ಧ್ಯಾನ್ ಫೌಂಡೇಶನ್, ಸ್ತ್ರೀ ಶಕ್ತಿ ಸಂಘದ ನೂರಾರು ಮಹಿಳೆಯರು, ಕೆನರಾ ಬ್ಯಾಂಕ್ ಸಿಬ್ಬಂದಿಗಳು, ಹಾಗೂ ದೇವಾಲಯದ ನೌಕರರು ಕೈಜೋಡಿಸಿದ್ದರು

ಈ ಬಾರಿಯ ಹುಂಡಿ ಹಣವನ್ನು ಕೆನರಾ ಬ್ಯಾಂಕ್‌ಗೆ ವಹಿಸಲಾಗಿತ್ತು, ಸಂಗ್ರಹವಾದ ಕಂತೆ ಕಂತೆ ನೋಟುಗಳಿಗೆ ದೇವಾಲಯದ ವತಿಯಿಂದ ಪೂಜೆ ಸಲ್ಲಿಸಲಾಯಿತು. ದೇವಾಲಯದ ಕಾರ್ಯನಿರ್ವಾಹಕ, ಅಧಿಕಾರಿ ಜಗದೀಶ್ ಕುಮಾರ್ ಉಪ ವಿಭಾಗಾಧಿಕಾರಿ ಕಚೇರಿಯ ತಹಸಿಲ್ದಾರ್ ರಾಜು, ಮುಜರಾಯಿ ತಹಸೀಲ್ದಾರ್ ವಿದ್ಯುಲತಾ, ದೇವಾಲಯದ ಲೆಕ್ಕಾಧಿಕಾರಿ ಗುರುಮಲ್ಲಯ್ಯ, ಕೆನರಾ ಬ್ಯಾಂಕ್ ಮ್ಯಾನೇಜರ್ ಲಕ್ಷ್ಮಿ ನೇತೃತ್ವದಲ್ಲಿ ಎಣಿಕೆ ಕಾರ್ಯ ನಡೆಯಿತು.