ಬೆಂಗಳೂರು: ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ಜೀವರಕ್ಷಕ ಔಷಧಿಗಳ ಖರೀದಿಗೆ ಟೆಂಡರ್ ಕರೆಯುವಾಗ ಗೋಲ್‍ಮಾಲ್ ನಡೆಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಲವು ದಿನಗಳ ಹಿಂದೆ ಚಿಕ್ಕಮಗಳೂರು ಮೆಡಿಕಲ್ ಕಾಲೇಜಿಗೆ ಭೇಟಿ ಕೊಟ್ಟಿದ್ದೆ. ಕೆಲವು ಪೋಷಕರು ಈ ಮೆಡಿಕಲ್ ಕಾಲೇಜಿನ ಅವ್ಯವಸ್ಥೆ ಕುರಿತು ಖಾಸಗಿ ಕಾರ್ಯಕ್ರಮದಲ್ಲಿ ನನ್ನ ಗಮನಕ್ಕೆ ತಂದಿದ್ದರು. ಅಲ್ಲಿನ ಅವ್ಯವಸ್ಥೆ ಕುರಿತು ವೈದ್ಯಕೀಯ ಶಿಕ್ಷಣ ಸಚಿವರು, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಖಾತೆಯ ಮುಖ್ಯ ಕಾರ್ಯದರ್ಶಿ, ಚಿಕ್ಕಮಗಳೂರು, ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರಿಗೆ ನನ್ನ ಅನುಭವಕ್ಕೆ ಬಂದ ಸಂಗತಿಗಳನ್ನು ವಿವರವಾಗಿ ಪತ್ರದಲ್ಲಿ ಬರೆದು ಕಳಿಸಿದ್ದೇನೆ ಎಂದರು.

ವಿದ್ಯಾರ್ಥಿಗಳಿಗೆ ಆಗುವ ತೊಂದರೆ, ಆಸ್ಪತ್ರೆಯಲ್ಲಿ ಮತ್ತು ಪ್ರಯೋಗಾಲಯದಲ್ಲಿ ಇರುವ ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದೇನೆ. ಅದೆಲ್ಲವನ್ನೂ ಬಗೆಹರಿಸುವ ನಿಟ್ಟಿನಲ್ಲಿ ಸಮಸ್ಯೆಗಳ ಕುರಿತು ಒಬ್ಬ ಜನಪ್ರತಿನಿಧಿಯಾಗಿ ಗಮನ ಸೆಳೆದಿದ್ದೇನೆ. ಅಲ್ಲಿನ ಭೇಟಿಯ ಬಳಿಕ ಕೆಲವು ಭಯಾನಕ ಸತ್ಯಗಳನ್ನು ನನ್ನ ಗಮನಕ್ಕೆ ತಂದರು. ವೈದ್ಯಕೀಯ ಕಾಲೇಜಿನಲ್ಲಿ ಜೀವರಕ್ಷಕ ಔಷಧಿಗಳ ಖರೀದಿಗೆ ಟೆಂಡರ್ ಕರೆಯುವಾಗ ಗೋಲ್‍ಮಾಲ್ ನಡೆಸಿದ್ದಾರೆ.

ಬಿಡ್ ನಿಗದಿಪಡಿಸಬೇಕಾದರೆ, ಒಂದು ಔಷಧಿಗೆ ಕಡಿಮೆ ದರ ಇದ್ದವರ ಬದಲಾಗಿ ಎಲ್ಲ ಔಷಧಿಗಳ ಬಿಡ್ ಕಡಿಮೆ ದರ ನಮೂದಿಸಿರಬೇಕು ಎಂದು ಸೂಚಿಸಿದ್ದಾರೆ. ಆಗ ಆವಿಷ್ಕಾರ್ ಸರ್ಜಿಕಲ್, ಕೆಇಎಂಪಿಎಸ್, ನೂತನ್ ಫಾರ್ಮ, ರಾಜಲಕ್ಷ್ಮಿ ಏಜೆನ್ಸಿ, ಸಿವಾ ಫಾರ್ಮ, ಎಸ್ಸೆಲ್ ಆರ್ ಏಜೆನ್ಸಿಸ್ ಸೇರಿ ಆರು ಕಂಪೆನಿಗಳು ಮಾತ್ರ ಅರ್ಹತೆ ಪಡೆದವು. ಅರ್ಹತಾ ಮಾನದಂಡದಿಂದ ಉಳಿದೆಲ್ಲ ಕಂಪೆನಿಗಳನ್ನು ಹೊರಗಿಟ್ಟರು. ಕೇವಲ ಆರನ್ನು ಅರ್ಹವಾಗಿ ಮಾಡಿದ್ದಾರೆ ಎಂದು ದೂರಿದರು.

ಆವಿಷ್ಕಾರ್‌ಗೆ 126, ಕೆಇಎಂಪಿಎಸ್ ಗೆ 130, ನೂತನ್- 26, ರಾಜಲಕ್ಷ್ಮಿ ಏಜೆನ್ಸಿಗೆ 53, ಸಿವಾ- 26, ಎಸ್ಸೆಲ್ಲಾರ್‍ಗೆ 54- ಹೀಗೆ ಮಂಜೂರಾಗಿದೆ. ಈ ಆಸ್ಪತ್ರೆ ಆರೋಗ್ಯ ಇಲಾಖೆ ಅಡಿಯಲ್ಲಿತ್ತು. ಈಗ ವೈದ್ಯಕೀಯ ಶಿಕ್ಷಣದಡಿ ಬರುತ್ತದೆ. ಈಗ ಸರಬರಾಜು ಆಗುತ್ತಿರುವ ದರ ಮತ್ತು ಹೊಸ ದರದಲ್ಲಿ ಅಗಾಧವಾದ ವ್ಯತ್ಯಾಸವಿದೆ ಎಂದು ಟೀಕಿಸಿದರು. ಹಣ ಲೂಟಿ ಹೊಡೆಯಲಾಗಿದೆ. ಹಣ ಲೂಟಿಗೆ ಆಳುವವರ ಸಹಕಾರ ಇರುವುದು ಸ್ಪಷ್ಟ ಎಂದು ಆರೋಪಿಸಿದರು.

ಜಿಲ್ಲಾಸ್ಪತ್ರೆಗೆ ಈಗ 10.75 ರೂ.ಗೆ ಸರಬರಾಜಾಗುವ ಕಣ್ಣಿನ ದ್ರಾವಣವನ್ನು (ಮೋಕ್ಷಿ ಪ್ಲಾಕ್ಸಾಕ್ಸಿನ್) 116 ರೂ.ಗೆ ಸರಬರಾಜಿಗೆ ಟೆಂಡರ್ ಮಾಡಿದ್ದಾರೆ. ದರದಲ್ಲಿ 981 ಪ್ರತಿಶತ ಹೆಚ್ಚಳ ಕಂಡುಬಂದಿದೆ. ಕ್ಯಾಲ್ಸಿಯಂ ಕಾರ್ಬೊನೇಟ್ ಹಾಗೂ ವಿಟಮಿನ್ ಡಿ 3, ಐಒ ಟ್ಯಾಬ್ಲೆಟ್ ರೂ. 4.03ಕ್ಕೆ ಹಾಲಿ ಸರಬರಾಜಾಗುತ್ತಿದೆ. 35.64 ರೂ.ಗೆ ಈಗ ಟೆಂಡರ್ ಒಪ್ಪಂದವಾಗಿದೆ ಎಂದು ಹೇಳಿದರು.







