ಕೇಂದ್ರ ಅನುದಾನ ನೀಡಿದರೆ ನಗರಗಳ ಅಭಿವೃದ್ಧಿ ಸಾಧ್ಯವಾಗಲಿದೆ
ಹುಬ್ಬಳ್ಳಿ, ಜ.12: ಬೆಂಗಳೂರು ನಗರಗಳಂತೆ ಮಂಗಳೂರು, ಬೆಳಗಾವಿ, ಹುಬ್ಬಳ್ಳಿ ಧಾರವಾಡ ನಗರಗಳು ಬೆಳೆಯುತ್ತಿವೆ. ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಕೇಂದ್ರ ಸರ್ಕಾರ 10 ವರ್ಷಕ್ಕೆ ನೀಡುವ ರೂ.2 ಸಾವಿರ ಕೋಟಿ ಅನುದಾನವನ್ನು ಈಗ ನೀಡಿದರೆ ಅಭಿವೃದ್ಧಿ ಸಾಧನೆಗೆ ಪೂರಕವಾಗಲಿದೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್. ಲಾಡ್ ಹೇಳಿದರು.
ಹಳೇ ಬಸ್ ನಿಲ್ದಾಣದ ಆವರಣದಲ್ಲಿ ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ವತಿಯಿಂದ ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಅನುದಾದಡಿಯಲ್ಲಿ ಹಳೇ ಬಸ್ ನಿಲ್ದಾಣ ಅಭಿವೃದ್ಧಿ ಕಾಮಗಾರಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹುಬ್ಬಳ್ಳಿ ಧಾರವಾಡ ನಗರಗಳು ಸಹ ಅಭಿವೃದ್ಧಿ ಹೊಂದಲಿವೆ. ಅಲ್ಲದೇ ಯೋಜನೆಗಳನ್ನು ಉದ್ಘಾಟನೆಯಾದ ಬಳಿಕ ಏಜೆನ್ಸಿಗಳು ಅವುಗಳನ್ನು ಸಂಪೂರ್ಣವಾಗಿ ನಿರ್ವಹಣೆ ಮಾಡಲು ಅವಕಾಶ ಒದಗಿಸಬೇಕು. ಗುರಿ ಉದ್ದೇಶಗಳನ್ನು ಇಟ್ಟುಕೊಂಡು ಯೋಜನೆಗಳನ್ನು ರೂಪಿಸಬೇಕಾಗುತ್ತದೆ ಎಂದರು.,
ಅಭಿವೃದ್ಧಿಯಲ್ಲಿ ಸಾರಿಗೆ ವ್ಯವಸ್ಥೆ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕೆಲವು ದಿನಗಳ ಹಿಂದೆ ಬಸ್ ದರವನ್ನು ಶೇ.15 ರಷ್ಟು ಏರಿಕೆ ಮಾಡಲಾಯಿತು. ಆದರೆ ಕರ್ನಾಟಕ ರಾಜ್ಯವು ಅತೀ ಹೆಚ್ಚು ಸರ್ಕಾರಿ ಬಸ್ ಗಳನ್ನು ಹೊಂದಿದ ರಾಜ್ಯವಾಗಿದೆ. 25 ಸಾವಿರಕ್ಕೂ ಹೆಚ್ಚು ಸರ್ಕಾರಿ ಬಸ್ ಗಳನ್ನು ಕರ್ನಾಟಕ ರಾಜ್ಯ ಹೊಂದಿದೆ. ಇದು ಎಲ್ಲ ಕನ್ನಡಿಗರೂ ಹೆಮ್ಮೆ ಪಡಬೇಕಾದ ವಿಷಯ. 1 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಒಂದು ದಿನಕ್ಕೆ 1 ಲಕ್ಷಕ್ಕೂ ಹೆಚ್ಚು ಟ್ರಿಪ್ ಮಾಡಲಾಗುತ್ತಿದೆ. ದಿನನಿತ್ಯ ಸುಮಾರು 1.16 ಕೋಟಿ ಜನರು ಬಸ್ ಗಳಲ್ಲಿ ಪ್ರಯಾಣಿಸುತ್ತಾರೆ. ಶೇ.65 ರಷ್ಟು ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. 23 ಸಾವಿರ ಸೆಕ್ಟರ್ ಗಳಲ್ಲಿ ಬಸ್ ಗಳು ಪ್ರಯಾಣ ಮಾಡುತ್ತಿವೆ. 5300 ಹೊಸ ಬಸ್ ಗಳನ್ನು ಖರೀದಿ ಮಾಡಲಾಗಿದೆ. 4 ಸಾವಿರ ಜನರನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಡಿಸೇಲ್ ದರ ಹೆಚ್ಚಳವಿರುವುದರಿಂದ ಬಸ್ ದರವನ್ನು ಹೆಚ್ಚಿಸಲಾಗಿದೆ. ಮಹಾರಾಷ್ಟ್ರ, ತೆಲಂಗಾಣ ಹೋಲಿಸಿದರೆ ಬಸ್ ದರ ಕಡಿಮೆಯಿದೆ. ಗುಜರಾತ ರಾಜ್ಯಕ್ಕೆ ಸಮವಾಗಿದೆ. ಸಾರ್ವಜನಿಕರ ಸಹಭಾಗಿತ್ವ ತೆಗೆದುಕೊಂಡು ಯೋಜನೆಗಳನ್ನು ರೂಪಿಸಬೇಕಾಗುತ್ತದೆ. ಸರ್ಕಾರ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಹುಬ್ಬಳ್ಳಿ ಧಾರವಾಡ ನಗರಗಳನ್ನು ಮುಂದಿನ ದಿನಗಳಲ್ಲಿ ಅಭಿವೃದ್ಧಿಯೆಡೆಗೆ ಕೊಂಡ್ಯೊಯಲಾಗುವುದು. ಪ್ರಜಾಪ್ರಭುತ್ವವನ್ನು ಉಳಿಸುವ ಹೊಣೆ ಎಲ್ಲರ ಮೇಲಿದೆ ಎಂದರು.
ಸಮಾರಂಭದಲ್ಲಿ ಇಂಧನ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಮಹೇಶ ಟೆಂಗಿನಕಾಯಿ, ಮಾಜಿ ಸಂಸದರಾದ ಐ.ಜಿ.ಸನದಿ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಅಧ್ಯಕ್ಷರಾದ ಸೈಯದ್ ಅಜೀಂಪೀರ್ ಎಸ್. ಖಾದ್ರಿ, ಶಾಸಕರಾದ ಅರವಿಂದ ಚಂದ್ರಕಾಂತ ಬೆಲ್ಲದ, ಪ್ರದೀಪ ಶೆಟ್ಟರ, ಮಹಾಪೌರರಾದ ರಾಮಣ್ಣ ಬಡಿಗೇರ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಅಧ್ಯಕ್ಷರಾದ ಶಾಕೀರ ಸನದಿ, ಪಾಲಿಕೆ ಸದಸ್ಯರಾದ ಮಂಗಳಮ್ಮ ಮೋಹನ ಹಿರೇಮನಿ, ರಾಜಣ್ಣ ಕೊರವಿ, ಸಂತೋಷ ಚವ್ಹಾಣ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ, ಹೆಚ್.ಡಿ.ಬಿ.ಆರ್.ಟಿ.ಎಸ್. ವ್ಯವಸ್ಥಾಪಕ ನಿರ್ದೇಶಕರಾದ ಸಾವಿತ್ರಿ ಬಿ.ಕಡಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ.ಈಶ್ವರ ಉಳ್ಳಾಗಡ್ಡಿ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಡಾ.ಸಂತೋಷಕುಮಾರ ಬಿರಾದಾರ, ಡಿಸಿಪಿ ಮಹಾನಿಂಗ ನಂದಗಾವಿ ಸೇರಿದಂತೆ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.