ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ಬಳಿಕ BJPಯಲ್ಲಿ ಸೋಲಿನ ಆತ್ಮಾವಲೋಕನ ನಡೆಯುತ್ತಿದೆ. ಆದರೆ ಆತ್ಮಾವಲೋಕನ ಸಭೆಯಲ್ಲಿ ಸೋಲಿಗೆ ಕಾರಣವಾದ ಅಂಶಗಳು ಏನು ಅನ್ನೋದನ್ನು ಚರ್ಚೆ ಮಾಡುವುದಕ್ಕಿಂತ, ಸೋಲಿನ ಹೊಣೆ ಯಾರು ಹೊರಬೇಕು..? ಅನ್ನೋ ಬಗ್ಗೆ ವಾಕ್ಸಮರಗಳು ನಡೆಯುತ್ತಿವೆ. ಜೊತೆಗೆ ಅಡ್ಜಸ್ಟ್‌ಮೆಂಟ್ ರಾಜಕೀಯದಿಂದ ನಮಗೆ ಸೋಲಾಯ್ತು ಎನ್ನುವ ಮೂಲಕ ಸೋಲಿನ ನೇರ ಹೊಣೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಎನ್ನುವ ರೀತಿಯಲ್ಲಿ ಬೆರಳು ತೋರಿಸಲು ಸಕಲ ತಯಾರಿಗಳು ನಡೆಯುತ್ತಿದ್ದವು. ಆದರೆ ಇದೀಗ ಯಡಿಯೂರಪ್ಪ ಬಣದಿಂದ ಸೋಲಿಗೆ ಕಾರಣ ಯಾರು..? ಸೋಲಿನ ಹೊಣೆ ಹೊರಬೇಕಿರುವುದು ಯಾರು..? ಅನ್ನೋದನ್ನು ಸೂಕ್ಷ್ಮವಾಗಿ ಹೇಳಲಾಗಿದೆ. ಯಡಿಯೂರಪ್ಪ ಬಣದಲ್ಲಿ ಗುರ್ತಿಸಿಕೊಂಡಿದ್ದ ಎಂ.ಪಿ ರೇಣುಕಾಚಾರ್ಯ ಬಾಂಬ್ ಸಿಡಿಸಿದ್ದಾರೆ.
ಸರ್ಕಾರದ ತೆಗೆದುಕೊಂಡ ತಪ್ಪು ನಿರ್ಧಾರಗಳೇ ಕಾರಣ..!
ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿದ್ದ ಸಮಯದಲ್ಲಿ ಒಳಮೀಸಲಾತಿ ಜಾರಿ ಮಾಡಲಾಯ್ತು. ಆದರೆ ಒಳಮೀಸಲಾತಿ ಲಾಭ ಮಾಡಿಕೊಳ್ಳಲು ಮುಂದಾದ ಬಿಜೆಪಿಗೆ ತಿರುಗು ಬಾಣವಾಯ್ತು. ಮೀಸಲಾತಿ ಜೊತೆಗೆ 10 ಕೆಜಿ ಅಕ್ಕಿ ಕಡಿತ ಮಾಡಿದ್ದೂ ಕೂಡ ಬಿಜೆಪಿ ಸೋಲಿಗೆ ಕಾರಣವಾಯ್ತು ಎಂದು ದಾವಣಗೆರೆಯ ಹೊನ್ನಾಳಿಯಲ್ಲಿ ರೇಣುಕಾಚಾರ್ಯ ಹೇಳಿದ್ದಾರೆ. ನಮ್ಮ ಸರ್ಕಾರದ ತಪ್ಪು ನಿರ್ಧಾರಗಳಿಂದ ನಾವು ಸೋತಿದ್ದೇವೆ. ಒಳ ಮೀಸಲಾತಿಗೆ ಕೈ ಹಾಕಬೇಡಿ ಎಂದು ಹೇಳಿದರೂ ಸರ್ಕಾರ ಕೇಳಲಿಲ್ಲ. ಬಡ ಜನರು ತಿನ್ನುವ ಅಕ್ಕಿ ಕಿತ್ತುಕೊಳ್ಳುವ ಮೂಲಕ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡಿದರು. ರಾಜ್ಯ ಬಿಜೆಪಿ ಅಧ್ಯಕ್ಷರೇ ಗೊಂದಲಕಾರಿ ಹೇಳಿಕೆ ನೀಡುತ್ತಾ ಬಂದಿದ್ದರು. ನಮ್ಮ ಸರ್ಕಾರದ ತಪ್ಪು ನಿರ್ಧಾರಗಳಿಂದಲೇ ನಾವು ಸೋತಿದ್ದು. ಮೀಸಲಾತಿಯ ಗೊಂದಲಕಾರಿ ನಿರ್ಣಾಯಗಳೇ ಸೋಲಿಗೆ ಮುಳುವಾದವು.
ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಇಳಿಸಿದ್ದೂ ತಪ್ಪು..!
NPS ರದ್ದು ಮಾಡಿ OPS ಜಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಎನ್‌ಪಿಎಸ್ ನೌಕರರ ಮನವಿಯನ್ನು ಸ್ವೀಕಾರ ಮಾಡಿ ಎಂದು ನಾವೆಲ್ಲರೂ ಹೇಳಿದರು ಮಾಡಲಿಲ್ಲ. ರಾಜ್ಯದ ಅಧ್ಯಕ್ಷರು ಗೊಂದಲದ ಹೇಳಿಕೆ ನೀಡುತ್ತಾ ಬಂದಿದ್ದಾರೆ. ಈಗಲೂ ರಾಜೀನಾಮೆ ನೀಡುತ್ತೇನೆ ಎಂದು ಒಮ್ಮೆ ಹೇಳುತ್ತಾರೆ. ಇನ್ನೊಮ್ಮೆ ರಾಜೀನಾಮೆ ನೀಡೋದಿಲ್ಲ ಅಂತ ಗೊಂದಲದ ಹೇಳಿಕೆ ನೀಡುತ್ತಾರೆ. ಇನ್ನು ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಬಾರದಿತ್ತು. ಜಗದೀಶ್ ಶೆಟ್ಟರ್ ಹಾಗು ಕೆ.ಎಸ್ ಈಶ್ವರಪ್ಪ ಸೇರಿದಂತೆ ಹಲವು ನಾಯಕರಿಗೆ ಟಿಕೆಟ್ ತಪ್ಪಿಸಿದರು. ಪ್ರಣಾಳಿಕೆ ಸಮಿತಿ ಅಧ್ಯಕ್ಷನಾಗಿ ಡಾ. ಸುಧಾಕರ್‌ನ ತಂದು ಕೂರಿಸಿದ್ರು. ಕೆಲಸಕ್ಕೆ ಬಾರದ ಪ್ರಣಾಳಿಕೆ ಮಾಡಿದ್ದಾರೆ ಎಂದು ಪರೋಕ್ಷವಾಗಿ ಸ್ವಪಕ್ಷದ ವಿರುದ್ಧವೇ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿರಿಯ ಶಾಸಕ ಮಾಡಾಳ್ ವಿರೂಪಾಕ್ಷಪ್ಪರನ್ನು ಜೈಲಿಗೆ ಕಳುಹಿಸಿದರು. ಮಾಡಾಳ್ ಪುತ್ರ ಮಾಡಾಳ್ ಮಲ್ಲಿಕಾರ್ಜುನ್‌ಗೆ ಟಿಕೆಟ್ ಕೊಡಬೇಕಿತ್ತು, ಅಲ್ಲೂ ಕೂಡ ತಪ್ಪು ಮಾಡಿದ್ರು. ನಮ್ಮ ಶಾಸಕರನ್ನೇ ಜೈಲಿಗೆ ಕಳುಹಿಸಿದರು. ಇದೂ ಕೂಡ ಬಿಜೆಪಿ ಸೋಲಿಗೆ ಕಾರಣ ಎಂದಿದ್ದಾರೆ. ಇನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ಸಮರ್ಥನಿದ್ದೇನೆ ಎಂದಿರುವ ರೇಣುಕಾಚಾರ್ಯ, ನಾನೂ ಕೂಡ ಶಾಸಕನಾಗಿ, ಸಚಿವನಾಗಿ ಅನುಭವ ಇದೆ. ಆದರೆ ಒತ್ತಡ ಹೇರಿಕೆ ಕೆಲಸ ಮಾಡೋದಿಲ್ಲ ಎಂದಿದ್ದು, ದಾವಣಗೆರೆ ಜಿಲ್ಲೆಯ ಎಲ್ಲಾ ಕಡೆ ನನಗೆ ಎಂಪಿ ಚುನಾವಣೆಗೆ ಸ್ಪರ್ಧೆ ಮಾಡಿ ಎಂದು ಒತ್ತಡ ಹಾಕುತ್ತಿದ್ದಾರೆ. ಒತ್ತಡ ಹೆಚ್ಚಾದ ಕಾರಣ ನಾನು ಕೂಡ ಪ್ರಭಲ ಅಕಾಂಕ್ಷಿ ಎಂದಿದ್ದಾರೆ. ಈ ಮೂಲಕ ಅಡ್ಜಸ್ಟ್‌ಮೆಂಟ್ ರಾಜಕಾರಣ ಎಂದು ಬೊಬ್ಬೆ ಹಾಕುತ್ತಿದ್ದ ಬಿ.ಎಲ್ ಸಂತೋಷ್ ಬಣದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಆದರೆ ಬಿಜೆಪಿ ಸರ್ಕಾರದ ನೀತಿ ನಿರೂಪಣೆಯಲ್ಲಿ ಬಸವರಾಜ ಬೊಮ್ಮಾಯಿ ಮೇಲೆ ಹಿಡಿತ ಸಾಧಿಸಿದ್ದು ಯಾರು..? ಬಿ.ಎಲ್ ಸಂತೋಷ್ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಹಿಡಿತ ಹೊಂದಿದ್ರಾ..? ಅನ್ನೋ ಪ್ರಶ್ನೆಗೂ ಉತ್ತರ ಸಿಗಬೇಕಿದೆ.
ಕೃಷ್ಣಮಣಿ