ಲೋಕಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಸಿಎಂ
2024 ರ ಲೋಕಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸಿಎಂ ಸಿದ್ಧರಾಮಯ್ಯ ತೆಗೆದುಕೊಂಡಿದ್ದಾರೆ. ಈ ಬಾರಿ ಶತಾಯಗತಾಯ ರಾಜ್ಯದಲ್ಲಿ 20 ಕ್ಕೂ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್‌ಗೆ ತರಲೇಬೇಕೆಂದು ಪಣತೊಟ್ಟಿರುವ ಅವರು, ಮೊದಲ ಹಂತದ ಚುನಾವಣೆ ನಡೆಯುವ ಹಳೆಯ ಮೈಸೂರು ಭಾಗದಲ್ಲಿ ನಿರಂತರ ಪ್ರವಾಸ ಮಾಡುತ್ತಿದ್ದಾರೆ. ಚಾಮರಾಜನಗರ, ಮೈಸೂರು- ಕೊಡಗು, ಮಂಡ್ಯ, ಬೆಂಗಳೂರು ನಗರದ 3 ಕ್ಷೇತ್ರಗಳು, ಬೆಂಗಳೂರು ಗ್ರಾಮಾಂತರ, ಹಾಸನ ಹೀಗೆ ಹಳೆಯ ಮೈಸೂರು ಭಾಗದಲ್ಲಿ ಹೆಚ್ಚಿನ ಪ್ರವಾಸ ಮಾಡುವುದರ ಮೂಲಕ ಕಾಂಗ್ರೆಸ್ ಗೆಲುವಿಗೆ ತಂತ್ರ ಹೆಣೆಯುತ್ತಿದ್ದಾರೆ.
ಸಿಎಂಗೆ ಮೈಸೂರು-ಕೊಡಗು, ಚಾಮರಾಜನಗರ ಪ್ರತಿಷ್ಠೆ
ಇನ್ನು ಸಿಎಂ ಸಿದ್ಧರಾಮಯ್ಯರಿಗೆ ಮೈಸೂರು-ಕೊಡಗು ಹಾಗೂ ಚಾಮರಾಜನಗರ ಎರಡು ಕ್ಷೇತ್ರಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಬಾರಿಯ ಚುನಾವಣೆಯಲ್ಲಿ ತಾವು ನೀಡಿದ ಗ್ಯಾರೆಂಟಿಗಳ ಮೇಲೆ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿ ಗಾದಿಯಲ್ಲಿ ಕುಳಿತಿದ್ದು, ತವರು ಜಿಲ್ಲೆಯಲ್ಲಿಯೇ ಹಿನ್ನಡೆಯಾದ್ರೆ, ಅದು ಅವರಿಗೆ ಮುಖಭಂಗ. ಹೀಗಾಗಿ, ಶತಾಯಗತಾಯ ಮೈಸೂರು-ಕೊಡಗು ಹಾಗೂ ಚಾಮರಾಜನಗರ ಕ್ಷೇತ್ರಗಳಲ್ಲಿ ಗೆಲ್ಲಲೇಬೇಕು ಎಂದು ಪಣತೊಟ್ಟಿದ್ದಾರೆ.
ಮೋದಿ ಆಗಮನಕ್ಕೂ ಮುನ್ನಾ ಸಿಎಂ ಮೈಸೂರು ಪ್ರವಾಸ
ಇನ್ನು ನಾಳೆ ಪ್ರಧಾನಿ ನರೇಂದ್ರ ಮೋದಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಲರಾಜ್ ಸಾಥ್ ನೀಡಲಿದ್ದಾರೆ. ಈ ಕಾರಣದಿಂದಲೇ ಸಿಎಂ ಈಗಾಗಲೇ ಎರಡು ಕ್ಷೇತ್ರಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಅಲ್ಲಿಯೇ ಠಿಕಾಣಿ ಹೂಡಿ ತಂತ್ರ ಹೆಣೆಯುತ್ತಿದ್ದಾರೆ.
ಪ್ರಚಾರದ ಆಖಾಡದಲ್ಲಿಯೇ ಬಲವರ್ಧನೆಯ ಹೇಳಿಕೆ ಕೊಟ್ಟಿರುವ ಸಿಎಂ
ಇನ್ನು ಪ್ರಚಾರ ಆಖಾಡದಲ್ಲಿಯೇ ಬಲವರ್ಧನೆಯ ಮಾತನ್ನು ಸಿಎಂ ಸಿದ್ಧರಾಮಯ್ಯ ಈಗಾಗಲೇ ಆಡಿದ್ದಾರೆ. ನೀವು ನನಗೆ ಹೆಚ್ಚಿನ ಲೀಡ್ ಕೊಟ್ಟು, ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿದ್ರೆ, ಸಿದ್ಧರಾಮಯ್ಯರನ್ನು ಯಾರೂ ಕೂಡ ಮುಟ್ಟಲು ಆಗುವುದಿಲ್ಲ ಎಂದಿದ್ದಾರೆ.
ಒಂದು ಕಡೆ ಮೊದಲ ಹಂತದಲ್ಲಿ ಚುನಾವಣೆ ನಡೆಯುವ 14 ಕ್ಷೇತ್ರಗಳ ಪೈಕಿ ಸಿಎಂ ಹಳೆಯ ಮೈಸೂರು ಭಾಗವನ್ನು ಬಹಳ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಇದಕ್ಕೆ ಮತದಾರ ಪ್ರಭು ಯಾವ ಉತ್ತರ ನೀಡುತ್ತಾನೆ ಕಾದು ನೋಡಬೇಕಿದೆ.