ಆಗಸ್ಟ್ 13ರಂದು ಸಂಪೂರ್ಣ ಭರ್ತಿಯಾಗಿದ್ದ ತುಂಗಾ ಭದ್ರಾ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ (Cm siddaramiah) ಬಾಗಿನ ಅರ್ಪಣೆ ಮಾಡುವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.ಆದರೆ ಇದೀಗ ಜಲಾಶಯದ ಗೇಟ್ ನಂಬರ್ 19 ಮುರಿದು ಅವಘಡ ಸಂಭವಿಸಿರುವ ಪರಿಣಾಮ ಸಿಎಂ ರ ಈ ಕಾರ್ಯಕ್ರಮವನ್ನು ಮುಂದೂಡಿಕೆ ಮಾಡಲಾಗಿದೆ.
ತುಂಗಾಭದ್ರಾ ಜಲಾಶಯದ (Tunga bandhra dam)ಗೇಟ್ ನಂಬರ್ 19 ಚೈನ್ ಲಿಂಕ್ (Chain link) ಕಟ್ ಆದ ಪರಿಣಾಮ ಶನಿವಾರ ತಡರಾತ್ರಿ ಗೆಟ್ ಮುರಿದು ಬಿದ್ದಿದೆ. ಹೀಗಾಗಿ ನದಿಗೆ ಜಲಾಶಯದಿಂದ ಭಾರೀ ಪ್ರಮಾಣದ ನೀರು ಹರಿಯುತ್ತಿದೆ. ರಾಜ್ಯದಲ್ಲಿ ಸತತವಾಗಿ ಮಳೆಯಾಗಿದ್ದು ತುಂಗಾಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾದ ಕಾರಣ ನೀರಿನ ಒತ್ತಡಕ್ಕೆ ಜಲಾಶಯ ಗೇಟ್ ಗೆ ಭಾರೀ ಹಾನಿಯಾಗಿದೆ.
ಕಳೆದ 70 ವರ್ಷದಲ್ಲಿ ತುಂಗಭದ್ರಾ ಜಲಾಶಯ ಇತಿಹಾಸದಲ್ಲೇ ಮೊದಲ ಬಾರಿ ಚೈನ್ ಲಿಂಕ್ ಕಟ್ ಆಗಿದೆ. ಜಲಾಶಯ ಭರ್ತಿಯಾದ್ರಿಂದ ಗೇಟ್ ದುರಸ್ತಿ ಸಾಧ್ಯವಾಗ್ತಿಲ್ಲ. ಹೀಗಾಗಿ ಸದ್ಯ ಡ್ಯಾಂ ನ ಎಲ್ಲಾ ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಲಾಗಿದೆ.
ತುಂಗಾಭದ್ರಾ ಜಲಾಶಯದಿಂದ ನೀರು ಹರಿಬಿಟ್ಟಿದ್ದು, ನದಿ ಪಾತ್ರದ ಜನರಲ್ಲಿ ಆತಂಕ ಹೆಚ್ಚಾಗಿದೆ. ಸದ್ಯ 1 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದ್ದು, ಒಂದುವೇಳೆ 2 ಲಕ್ಷ ಕ್ಯೂಸೆಕ್ ಗಿಂತ ಅಧಿಕ ಪ್ರಮಾಣದಲ್ಲಿ ನದಿಗೆ ನೀರು ಹರಿಸಿದ್ರೆ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಲಿದ್ದು, ನದಿ ಪಾತ್ರದ ಗ್ರಾಮದ ಜನರಿಗೆ ಎಚ್ಚರಿಕೆಯ ಸಂದೇಶ ರವಾನೆಯಾಗಿದೆ.