ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಲಸಿಕೆಯನ್ನು ಪ್ರಚಾರಕ್ಕೆ ಬಳಸಿಕೊಂಡು, ಚುನಾವಣೆ ಪ್ರಣಾಳಿಕೆಯಲ್ಲಿ ಉಚಿತ ಲಸಿಕೆಯ ಆಶ್ವಾಸನೆ ನೀಡಿ ಲಸಿಕೆಯನ್ನೂ ರಾಜಕೀಯಕ್ಕೆ ಬಳಸಿ ಚರ್ಚೆಗೆ ಗ್ರಾಸವಾಗಿದ್ದು ಹಳೆಯ ಸುದ್ದಿ. ಅದಾದ ಬಳಿಕ ರಾಜ್ಯ ಬಿಜೆಪಿಯ ಹಲವು ಶಾಸಕರು ಲಸಿಕೆಗಳನ್ನು ತಮ್ಮ ಪ್ರಚಾರಕ್ಕೆ ಹಾಗೂ ಅನಧಿಕೃತ ಮಾರಾಟ ಮಾಡಿ ಅಕ್ರಮವೆಸಗಿದ್ದರು.
ಶಾಸಕ ರವಿ ಸುಬ್ರಹ್ಮಣ್ಯ ಸೇರಿದಂತೆ ಹಲವು ಶಾಸಕರು ಕರೋನಾ ಲಸಿಕೆಯ ಅಕ್ರಮದಲ್ಲಿ ಭಾಗಿಯಾದ ಕುರಿತು ಇನ್ನೂ ಆರೋಪಗಳಿವೆ. ಈ ನಡುವೆ ರಾಜರಾಜೇಶ್ವರಿ ಶಾಸಕ ಮುನಿರತ್ನ ಕೂಡಾ ಲಸಿಕೆಯನ್ನು ಅಕ್ರಮವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ರಾಜರಾಜೇಶ್ವರಿನಗರದ ಉಪಚುನಾವಣೆಯಲ್ಲಿ ಬಿಜೆಪಿಯಲ್ಲಿ ನಿಂತಿದ್ದ ಮುನಿರತ್ನ ಅವರನ್ನು ಕಾಂಗ್ರೆಸ್ನಲ್ಲಿ ನಿಂತು ಎದುರಿಸಿದ್ದ ಕುಸುಮಾ ಹನುಮಂತರಾಯಪ್ಪ ಈ ಕುರಿತು ಪ್ರಶ್ನೆಗಳನ್ನೆತ್ತಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗದ ಲಸಿಕೆ ಶಾಸಕರ ಕಛೇರಿಯಲ್ಲಿ ಸಿಗುತ್ತಿರುವುದಾದರೂ ಹೇಗೆ ಎಂದು ಕೇಳಿದ್ದಾರೆ.
ಶಾಸಕ ಮುನಿರತ್ನ ಹೆಸರಿನಲ್ಲಿ ಉಚಿತ ಲಸಿಕಾ ಅಭಿಯಾನದ ಸ್ಲಿಪ್ಗಳನ್ನು ಟ್ವಿಟರಿನಲ್ಲಿ ಹಂಚಿಕೊಂಡಿರುವ ಕುಸುಮಾ, ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗಬೇಕಿದ್ದ ಉಚಿತ ಲಸಿಕೆಗಳನ್ನು ಶಾಸಕರ ಕಛೇರಿಯಲ್ಲಿ ಟೋಕನ್ ಪಡೆದು ಲಸಿಕೆ ಹಾಕಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ ಆರ್.ಆರ್ ನಗರ ಕ್ಷೇತ್ರದ ಜನತೆಗೆ ಎಂದಿದ್ದಾರೆ.
ಉಚಿತವಾಗಿ ಸಿಗಬೇಕಿರುವ ಲಸಿಕೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಟಾಕ್ ಇಲ್ಲ. ಹಾಗಾದರೆ ಶಾಸಕರ ಕಛೇರಿಯಲ್ಲಿ ಸಿಗುತ್ತಿರುವುದಾದರೂ ಹೇಗೆ? ಎಂದು ಕುಸುಮಾ ಪ್ರಶ್ನಿಸಿದ್ದಾರೆ.