ದೇಶದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆಯಾಗಿದ್ದು ಮಾಧ್ಯಮಗಳು ಮೋದಿಯವರ ಫೋಟೋದೊಂದಿಗೆ ದೀಪಾವಳಿ ಗಿಫ್ಟ್ ಎನ್ನುತ್ತಿದೆ. ಒಮ್ಮೆಲೆ ಈ ಪ್ರಮಾಣದ ಬೆಲೆ ಇಳಿಕೆ ದಾಖಲೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದ್ದಾರೆ. ಇಂತಹ ಆರ್ಥಿಕ ಸಂಕಷ್ಟದ ಸಮಯದಲ್ಲೂ ಹೀಗೆ ಮಾಡಿದ್ದು ದೊಡ್ಡ ಮನಸ್ಸು ಎಂದೂ ಹೇಳುವ ಬಿಜೆಪಿಗರಿದ್ದಾರೆ. ಇದು ದೀಪಾವಳಿ ಗಿಫ್ಟಲ್ಲ, ದೇಶದ ಉಪಚುನಾವಣೆಗಳಲ್ಲಿ ಆದ ಸೋಲಿನ ಗಿಫ್ಟು ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಹೀಗೆ ನಿರಂತರ ಬಿಜೆಪಿಯನ್ನು ಸೋಲಿಸುತ್ತಾ ಇದ್ದರೆ ಪೆಟ್ರೋಲ್ ಅರ್ಹವಾದ ಬೆಲೆಗೆ ಬಂದು ನಿಲ್ಲುತ್ತದೆ ಎಂದೂ ಹೇಳುವವರಿದ್ದಾರೆ.
ಇಷ್ಟು ದೊಡ್ಡ ಬೆಲೆ ಇಳಿಸಿರೋದಕ್ಕೆ ಹೊಗಳೋಕ್ಕಾಗಲ್ವಾ ಎಂದು ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಮಾಧ್ಯಮಗಳಲ್ಲಿ ಸಂಕಟ ಪಡುತ್ತಿದ್ದಾರೆ. ಹಿಂದಿನ ಯುಪಿಎ ಸರಕಾರದಲ್ಲಿ ಇದ್ದ ತೆರಿಗೆಯನ್ನೇ ಬೂರೇ ದಿನ್ ಎಂದು ಹೇಳುತ್ತಾ ಪ್ರತಿಭಟಿಸುತ್ತಾ ಇದ್ದ ಬಿಜೆಪಿ ಆಗ ಇದ್ದ ತೆರಿಗೆಗಳನ್ನು ಉಳಿಸಿ ಬಿಜೆಪಿ ಸರಕಾರ ಹೆಚ್ಚಿಸಿದ ತೆರಿಗೆಗಳನ್ನು ಇಳಿಸಿದರೆ 65 ರೂ.ಗೆ ಪೆಟ್ರೋಲ್ ಮತ್ತು 48 ರೂಪಾಯಿಗೆ ಡೀಸೆಲ್ ದೊರೆಯಬೇಕು. ಆದರೆ ‘ದೊಡ್ಡ ಪ್ರಮಾಣ’ ಬೆಲೆ ಇಳಿಕೆ ಮಾಡಿಯೂ ಈಗಲೂ ಪೆಡ್ರೋಲ್ ಬೆಲೆ ಶತಕ ದಾಟಿಯೇ ಇದೆ. ಡೀಸೆಲ್ 85 ರೂಪಾಯಿಯಲ್ಲಿ ಇದೆ. ಎಂದರೆ ಈ ಏಳು ವರ್ಷಗಳಲ್ಲಿ ಸರಕಾರ ಏರಿಸಿದ ತೆರಿಗೆ ಅದೆಷ್ಟು ಹೆಚ್ಚು ಎಂಬುದು ಗೊತ್ತಾಗುತ್ತದೆ. ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆ ಇತರ ಎಲ್ಲಾ ವಸ್ತುಗಳ ಬೆಲೆಯೇರಿಕೆಗೆ ಕಾರಣವಾಗುತ್ತದೆ. ಅಡುಗೆ ಅನಿಲದ ಬೆಲೆಯೂ ಏರಿಕೆಯಾದರೆ ಬಡವರು, ಮಧ್ಯಮವರ್ಗದವರಿಗೆ ಬದಕಲಾಗದ ಕೆಟ್ಟದಿನಗಳೆಂದೇ ಅರ್ಥ. ಹಾಗಾಗಿಯೇ ಇಂಧನ ಬೆಲೆ ಏರಿಕೆಯು ವ್ಯಾಪಕ ಚರ್ಚೆಯ, ಹೋರಾಟದ, ಪ್ರತಿಭಟನೆಯ ವಿಷಯವಾಗುತ್ತದೆ.
ಆದರೆ ಕರುಣಾಹೀನವಾಗಿ ತೆರಿಗೆಯೇರಿಸುತ್ತಾ ಹೋಗುವುದು ಮತ್ತು ಅದಕ್ಕೆ ಮಹಾ ಸುಳ್ಳುಗಳ ಮೂಲಕ ಸಮರ್ಥಿಸುತ್ತಾ ಹೋಗುವ ಕೆಲಸವಾಗಿದೆ. ಬಿಜೆಪಿ ಮಾಡಿದ್ದು ಜನವಿರೋಧಿ ನೀತಿಯ ತೆರಿಗೆ ಹೆಚ್ಚಳದ ಕಾರಣವಾಗಿ ಬೆಲೆ ಏರುತ್ತಿದ್ದರೆ ಜನರಿಗೆ ತಪ್ಪು ತಪ್ಪಾದ ಮಾಹಿತಿಯೊಂದಿಗೆ ವಂಚನೆ ಮಾಡಲಾಗುತ್ತಿದೆ.
ಒಂದು ಸಿಲಿಂಡರ್ ಬೆಲೆ ಈಗ ಸರಿಸುಮಾರು 900 ರೂ.ಗೆ ತಲುಪಿದೆ. ಈಗ ಪೆಟ್ರೋಲ್ ಬೆಲೆ ಲೀಟರಿಗೆ 100 ಆಗಿದ್ದರೆ, ಡೀಸೆಲ್ ಬೆಲೆ ಕೂಡ ನೂರರ 85 ರೂಪಾಯಿ. ಈ ಬೆಲೆಗಳು ಮಹಾ ಔದಾರ್ಯದ ದೀಪಾವಳಿ ಗಿಫ್ಟ್ ದೊರೆತ ಬಳಿಕ. ಅದಕ್ಕಿಂತ ಹಿಂದಿನ ಬೆಲೆ ನಿಮಗೆ ಗೊತ್ತೇ ಇದೆ.
ಹಾಗೆಯೇ ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆ ಇತರ ಎಲ್ಲಾ ವಸ್ತುಗಳ ಬೆಲೆಯೇರಿಕೆಗೆ ಕಾರಣವಾಗುವುದೂ ನಿಮಗೆ ಗೊತ್ತಿದೆ. ಏಳು ವರ್ಷಗಳ ಹಿಂದೆ ಇದ್ದ ಬೆಲೆ ಜನರ ಪಾಲಿಗೆ ಕೆಟ್ಟ ದಿನಗಳೆಂದು ಹೇಳಿ ಒಳ್ಳೆಯ ದಿನಗಳ ಭರವಸೆ ಕೊಟ್ಟು ಬಿಜೆಪಿ ದೇಶದ ಅಧಿಕಾರದ ಚುಕ್ಕಾಣಿ ಹಿಡಿದದ್ದು. 2014ರಲ್ಲಿ ಬಿಜೆಪಿ ಅಚ್ಚೇ ದಿನಗಳ ಭರವಸೆ ನೀಡುವ ಮುನ್ನ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಬ್ಯಾರಲ್ ಗೆ ಬರೋಬ್ಬರಿ 105 ಡಾಲರ್ ಇತ್ತು, ಆಗ ಪೆಟ್ರೋಲ್ ಲೀಟರಿಗೆ 71.51 ರೂ. ಮತ್ತು ಡೀಸೆಲ್ 57.28 ಇತ್ತು. ಮೊನ್ನೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರಲ್‌ನ ದರ ಕೇವಲ 69 ಡಾಲರ್ ಇರುವಾಗ ಪೆಟ್ರೋಲ್ ಮತ್ತು ಡೀಸೆಲ್ ದರ 105 ಮತ್ತು 91 ರೂಪಾಯಿ ಆಗಿತ್ತು. ಮೋದಿ ಅಧಿಕಾರಕ್ಕೆ ಏರುವ ಮುನ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಡುಗೆ ಅನಿಲ ದರ ಪ್ರತಿ ಮೆಟ್ರಿಕ್ ಟನ್ ಗೆ 880 ಡಾಲರ್ ಇದ್ದಾಗ ಭಾರತದಲ್ಲಿ ಸಿಲಿಂಡರಿಗೆ 410 ರೂ ಇತ್ತು. ಈಗ ಅಂತಾರಾಷ್ಟ್ರೀಯ ಬೆಲೆ ಕೇವಲ 653 ಡಾಲರ್ ಇರುವಾಗ 900 ರೂ.ಗೆ ಏರಿಕೆಯಾಗಿದೆ. ಆದ್ದರಿಂದ ಮೋದಿ ಅಧಿಕ್ಕಾರಕ್ಕೇರುವಾಗ ಇದ್ದ ತೆರಿಗೆಯನ್ನು ಏರಿಸದೇ ಇದ್ದಿದ್ದರೆ ಜನರಿಗೆ ಎಷ್ಟು ಒಳ್ಳೆಯ ದಿನಗಳು ಉಳಿಯುತ್ತಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ.
ಅಚ್ಛೇದಿನ್, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಂತಹ ಪೊಳ್ಳು ಭರವಸೆಗಳ ಭ್ರಮೆಗಳು ಕಳಚಿ ಬೆಲೆ ಏರಿಕೆಯ ಬಿಸಿ ಜನರನ್ನು ಸುಡುತ್ತಿರುವಾಗ ಅಚ್ಚೇ ದಿನಗಳು ನಮಗಲ್ಲ, ಆಳುವ ಪಕ್ಷ ಮತ್ತು ಅವರ ಆಪ್ತ ಉದ್ಯಮಿಗಳ ಪಾಲಿಗೆ ಮಾತ್ರ ಎಂಬ ಸಂಗತಿ ನಿಧಾನವಾಗಿ ಜನಸಾಮಾನ್ಯರಿಗೆ ಅರ್ಥವಾಗುತ್ತಿದೆ. ಆದರೆ ಯಾವುದೋ ಭ್ರಮೆ ಅವರನ್ನು ಕಟ್ಟಿಹಾಕಿದೆ. ಭಾವನಾತ್ಮಕತೆ, ಹಿಂದುತ್ವ ಎಂಬ ಹಗ್ಗದಿಂದ ಕಟಲ್ ಪಟ್ಟಿದು ಅದು. ಭ್ರಮೆ ಮತ್ತು ಸುಳ್ಳುಗಳ ಮೇಲೆಯೇ ರಾಜಕಾರಣ ಮಾಡಿದ ಬಿಜೆಪಿಯ ಸುಳ್ಳುಗಳಿಗೆ ಜನರು ಆತ್ಮವಂಚನೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರದ ಹಲವಾರು ಆರ್ಥಿಕ ಮತ್ತು ಸಾಮಾಜಿಕ ನೀತಿಗಳ ಬಗ್ಗೆ ಬಿಜೆಪಿ ಸರ್ಕಾರವು ಕಿಂಚಿತ್ತೂ ಆತ್ಮಸಾಕ್ಷಿಯಿಲ್ಲದೆ ಒಂದು ಹವ್ಯಾಸದ ರೀತಿ ಸುಳ್ಳುಗಳನ್ನು ಹೇಳಿಕೊಂಡು ಬರುತ್ತಿವೆ. ‘ಹಿಂದಿನ ಸರಕಾರ ಮಾಡಿದ ಸಾಲ ತೀರಿಸಲು ಈ ತೆರಿಗೆ ಏರಿಕೆ ಅನಿವಾರ್ಯ’ ಎಂಬುದು ಅತ್ಯಂತ ದೊಡ್ಡ ಸುಳ್ಳಾಗಿದೆ.
ಜನರಿಗೆ ನಿಜವಾಗಲೂ ತೀರಾ ಕೆಟ್ಟದಿನಗಳನ್ನು ಕೊಟ್ಟು ಈ ಬಗ್ಗೆ ಸಣ್ಣ ಪಶ್ಚಾತಾಪವೂ ಇಲ್ಲದೆ ಆತ್ಮಸಾಕ್ಷಿಯೇ ಇಲ್ಲದಂತೆ ಸುಳ್ಳುಗಳನ್ನು ಪೋಣಿಸುವ ಬಿಜೆಪಿಯು ಧರ್ಮ ರಕ್ಷಕ, ಬೆಲೆಯೇರಿಕೆಗೆ ಬೇರೆ ಯಾವುದೂ ಕಾರಣವಲ್ಲ, ಅಫ್ಗಾನ್ ದೇಶದ ಬಿಕ್ಕಟ್ಟು ತೈಲ ಬೆಲೆ ಏರಿಕೆಗೆ ಕಾರಣ ಎಂದು ಕರ್ನಾಟದ ಬಿಜೆಪಿಯ ನಾಯಕರೊಬ್ಬರು ಹೇಳಿದ್ದೂ ಇದೆ. ತೈಲ ರಫ್ತು ಮಾಡುವ ರಾಷ್ಟ್ರವೂ ಅಲ್ಲದ, ಒಪೆಕ್ ನ ಸದಸ್ಯ ರಾಷ್ಟ್ರವೂ ಅಲ್ಲದ , ತೈಲ ಬಳಕೆಯ ಅತಿ ದೊಡ್ಡ ಗ್ರಾಹಕನೂ ಅಲ್ಲದ ಆಪ್ಘಾನಿಸ್ತಾನದ ಆಂತರಿಕ ಬಿಕ್ಕಟ್ಟಿಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯ ಕಚ್ಛಾ ತೈಲ ಬೆಲೆಗೂ ಯಾವುದೇ ಸಂಬಂಧವಿಲ್ಲ.
ದೇಶದ ಮೇಲಿರುವ ಸಾಲ ತೀರಿಸಲಾಗುತ್ತಿದೆ, ಅದಕ್ಕಾಗಿ ಬೆಲೆ ಏರಿಕೆ, ತೈಲ ಬಾಂಡ್ ತೀರಿಸಲು ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆಯೆಂದು ಇತ್ತೀಚೆಗೆ ಕೇಂದ್ರ ಮಂತ್ರಿಯೊಬ್ಬರು ಹೇಳಿದ್ದರು. ಒಂದು ಲಕ್ಷದ ಮೂವತ್ತನಾಲ್ಕು ಸಾವಿರ ಕೋಟಿ ರೂ. ತೈಲಬಾಂಡನ್ನ ಮೋದಿ ಸರಕಾರ ಮರುಪಾವತಿ ಮಾಡಿದೆ ಎಂಬ ದೊಡ್ಡ ಸುಳ್ಳು ಬಿಜೆಪಿಯ ಅಧಿಕೃತ ಟ್ವಿಟರ್ ನಲ್ಲಿಯೇ ಹೇಳಲಾಗಿದೆ. ತೈಲಬೆಲೆಯೇರಿಕೆಗೆ ಬಿಜೆಪಿ ಮಂತ್ರಿಗಳಾದಿಯಾಗಿ ಬೂತ್ ಮಟ್ಟದ ನಾಯಕರೂ ಹೇಳಿಕೊಂಡು ಬರುತ್ತಿರುವ ಸುಳ್ಳುಗಳ ಹಿಂದಿನ ವಾಸ್ತವನೇ ಬೇರೆ.
ವಾಸ್ತವವನ್ನುಬಜೆಟ್ ದಾಖಲೆಯಲ್ಲಿರುವ ಅಂಕಿಅಂಶಗಳನ್ನು ಪರಿಶೀಲಿಸಿದಾಗ ಮೋದಿ ಸರಕಾರ ಮರುಪಾವತಿ ಮಾಡಿರುವುದು ಕೇವಲ ಸಾವಿರ ಕೋಟಿ ರೂ. ಮೌಲ್ಯದ ಬಾಂಡ್ಗಳನ್ನು ಮಾತ್ರ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದಡಿ ಇರುವ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣ ಕೋಶ ಪಿಪಿಎ ಕೂಡ ಇದನ್ನು ದೃಢಪಡಿಸಿದೆ. ಯುಪಿಎ ಸರಕಾರ ಕೂಡ ಹೀಗೆ ಬಾಂಡ್ ಗಳನ್ನು ಮರುಮಾವತಿ ಮಾಡುತ್ತಿತ್ತು. ಮೋದಿ ಸರಕಾರ ಪಾವತಿಸಿದ ಬಡ್ಡಿಯ ಮೊತ್ತವೂ ಯುಪಿಎ ಸರಕಾರಗಳಿಗಿಂತ ಹೆಚ್ಚಲ್ಲ. ಈಗಿನ ಸರಕಾರ ಸಂಗ್ರಹಿಸುವ ಲಕ್ಷಾಂತರ ಕೋಟಿ ಇಂಧನ ತೆರಿಗೆಯಿಂದ “ಮೋದಿ ಸ್ಪೆಷಲ್” ಆಗಿ ಯಾವುದೇ ಸಾಲ ಸಂದಾಯವಾಗುತ್ತಿಲ್ಲ ಎನ್ನುವುದು ವಾಸ್ತವ. ಇನ್ನು ವಿಶ್ವಬ್ಯಾಂಕಿನ ಸಾಲಕ್ಕೆ ಸಂಬಂಧಿಸಿದ ವಾಸ್ತವ ನೋಡೋಣ. ಮೋದಿ ಆಡಳಿತದಲ್ಲಿಯೂ ವರ್ಷವರ್ಷ ಸಾಲವನ್ನು ಮಾಡಲಾಗುತ್ತದೆ. 2014ರ ಜೂನ್‌ನಲ್ಲಿ ಕೇಂದ್ರ ಸರ್ಕಾರದ ಮೇಲೆ ಒಟ್ಟಾರೆ 54,90,763 ಕೋಟಿ ರು.ನಷ್ಟು ಸಾಲವಿತ್ತು. ಆದರೆ ಅದು 2018ರ ಸೆಪ್ಟೆಂಬರ್‌ನಲ್ಲಿ 82,03,253 ಕೋಟಿ ರೂ.ಗೆ ಏರಿಕೆ ಕಂಡಿದೆ ಎಂದು ಸರ್ಕಾರದ ಸಾಲಕ್ಕೆ ಸಂಬಂಧಿಸಿದ ಹಣಕಾಸು ಸಚಿವಾಲಯದ 8ನೇ ಆವೃತ್ತಿಯ ಸ್ಥಿತಿಗತಿ ವರದಿ ತಿಳಿಸಿದೆ. 2021ರಲ್ಲಿ ಅದು ಮತ್ತಷ್ಟು ಹೆಚ್ಚಾಗಿದೆ.
2014ರ ಕೊನೆಯವರೆಗೆ ಚಿನ್ನದ ಬಾಂಡ್ ಮೂಲಕ ದೇಶಕ್ಕೆಗ ಪಡೆಯಲಾದ ಸಾಲ ಶೂನ್ಯವಾಗಿದ್ದರೆ 2018ರವರೆಗೆ ಚಿನ್ನದ ಹಣಗಳಿಕೆ ಯೋಜನೆ ಸೇರಿದಂತೆ ಸಾಲದ ಮೊತ್ತ ರೂ. 9,089 ಕೋಟಿ ಆಗಿತ್ತು. 2020ರ ವೇಳೆಯಲ್ಲಿ ಆ ನಾಲ್ಕುವರೆ ವರ್ಷಗಳ ಈ ಸಾಲಗಳು ಮತ್ತೂ ಏರಿಕೆಯಾಗಿದೆ. ತೈಲಬಾಂಡ್ ವಿತರಣೆಯು ಒಟ್ಟು ಇರುವುದು ಎಷ್ಟಿದೆಯೋ ಅದನ್ನು ಸಂದಾಯಿಸಲು ಇಂಧನಗಳ ಮೇಲಿನ ಅತಿಯಾದ ತೆರಿಗೆ ಸಂಗ್ರಹದ ಒಂದು ವರ್ಷದ ಹಣ ಬೇಕಿಲ್ಲ. ಆದರೂ, ತೈಲಬಾಂಡ್ ಹಾಗೆಯೇ ಬಾಕಿ ಇದೆ. ಅವಧಿ ಮೀರಿದ ಕಂತುಗಳನ್ನು ಹಿಂದಿನ ಯುಪಿಎ ಸರಕಾರದಷ್ಟೇ ತೀರಿಸಲಾಗಿದೆ. ಅದು ಕೆಲವು ಸಾವಿರ ಕೋಟಿ ರೂಪಾಯಿ ಮಾತ್ರ.
ಇನ್ನು ಕೋವಿಡ್ ಲಸಿಕಾ ಅಭಿಯಾನಕ್ಕೆಂದು ದೇಶದ ಮೇಲೆ ಹೊಸತಾದ ಸಾಲದ ಹೊರೆ ಬೀಳುತ್ತಿದೆ. ಅಭಿಯಾನದ ಖರ್ಚನ್ನು ನಿಭಾಯಿಸಲು ಎಂದು ಹೇಳಿ ದೇಶದ ಮೇಲಿನ ಸಾಲವನ್ನು ಮತ್ತಷ್ಟು ಹೆಚ್ಚಿಸಲಗುತ್ತಿದೆ. 500 ಮಿಲಿಯನ್ ಡಾಲರ್ ಮೊತ್ತದ ಸಾಲವನ್ನು ಏಷಿಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕಿನಿಂದ ‘ಸುರಕ್ಷಿತ ಹಾಗೂ ಪರಿಣಾಮಕಾರಿ ಕೋವಿಡ್ ಲಸಿಕೆ’ ಪಡೆಯಲು ಸರಕಾರ ತಯಾರಿ ನಡೆಸಿದೆ. ನಾಲ್ಕು ಮಿಲಿಯನ್ ಡಾಲರ್ ಸಾಲವನ್ನು ಏಷಿಯಾ ಪೆಸಿಫಿಕ್ ವ್ಯಾಕ್ಸಿನ್ ಆ್ಯಕ್ಸೆಸ್ ಫೆಸಿಲಿಟಿ ಪ್ರೋಗ್ರಾಂ ಅಡಿಯಲ್ಲಿ ಪಡೆಯಲಿದೆ.
ಆದ್ದರಿಂದ ಈಗಿನ ತೈಲಬೆಲೆಗಳೂ ಜನರಿಂದ ಮಾಡುವ ದೊಡ್ಡ ಲೂಟಿಯೇ ಆಗಿದೆ. ಜೊತೆಗೆ ದೇಶದ ಸಾಲವೂ ತುಂಬಾನೇ ಹೆಚ್ಚಾಗುತ್ತಿದೆ. ಸುಳ್ಳು ಮತ್ತು ಭ್ರಮೆಗಳಾಚೆ ಬಂದು ನೋಡಿದರೆ ಇವೆಲ್ಲ ಅರ್ಥವಾಗುತ್ತದೆ.
– -ಅಬೂ ಮನ್ಹಾ ಕೈರಂಗಳ