~ಡಾ. ಜೆ ಎಸ್ ಪಾಟೀಲ.
2014ರಲ್ಲಿ ಮೋದಿ ಅಧಿಕಾರದ ಗದ್ದುಗೆ ಏರಲು ಬಳಸಿದ ಎಲ್ಲ ವಾಮಮಾರ್ಗಗಳು ಬಹುಶಃ ಭಾರತದ ರಾಜಕೀಯ ಕ್ಷೇತ್ರದಲ್ಲಿ ಮುಂದೆ ಯಾವೊಬ್ಬ ರಾಜಕಾರಣಿಯೂ ಬಳಸಲು ಸಾಧ್ಯವಿಲ್ಲ. ಅದು ಕೇವಲ ಮೋದಿಯೊಬ್ಬರ ಕಾರ್ಯವಾಗಿರಲಿಲ್ಲ. ಅದರ ಹಿಂದೆ ಒಂದು ವ್ಯವಸ್ಥಿತ ಸಾಂಘಿಕ ಪ್ರಯತ್ನವಿತ್ತು. ಅದರಲ್ಲಿ ಬಿಜೆಪಿˌ ಅದನ್ನು ನಿಯಂತ್ರಿಸುವ ಅಸಂವಿಧಾನಿಕ ಕೋಮುವಾದಿ ಶಕ್ತಿಗಳು ಹಾಗು ಅದನ್ನು ಬೆಂಬಲಿಸುವ ಮಾರವಾಡಿ-ಬನಿಯಾ ಉದ್ಯಮಿಗಳು ಸೇರಿದ್ದರು. ತಾವು ಅಧಿಕಾರಕ್ಕೆ ಹೇಗೆ ಬರಬೇಕು ಎನ್ನುವುದಕ್ಕಿಂತ ಅಂದಿನ ಯುಪಿಎ ಸರಕಾರಕ್ಕೆ ಕೆಟ್ಟ ಹೆಸರು ತರುವುದು ಮತ್ತು ಅದೊಂದು ಭ್ರಷ್ಟ ಸರಕಾರವೆನ್ನುವ ಜನಾಭಿಪ್ರಾಯ ರೂಪಿಸುವುದು ಆ ಗುಂಪಿನ ಮೊದಲ ಕೆಲಸವಾಗಿತ್ತು. ಜನಲೋಕಪಾಲ್ ಹೆಸರಿನ ಹೋರಾಟವೊಂದನ್ನು ಹೈಜಾಕ್ ಮಾಡಿದ ಈ ಗುಂಪು ಅದನ್ನು ವ್ಯವಸ್ಥಿತವಾಗಿ ಪ್ರಾಯೋಜಿಸಿ ಪ್ರಚಾರ ಮಾಡಿತು.
ಮೋದಿ ಅಂದು ಅಧಿಕಾರಕ್ಕೇರಿದ್ದು ಭ್ರಷ್ಟಾಚಾರ ವಿರೋಧಿ ಆಂದೋಲನದ ಫಲದಿಂದ ಮತ್ತು ಅಭಿವೃದ್ಧಿಯ ಮಂತ್ರ ಜಪಿಸುತ್ತ. ತಮ್ಮ ಪಕ್ಷದ ಮೂಲ ಹಿಂದುತ್ವವಾದವನ್ನು ಬದಿಗಿಟ್ಟು ಅಭಿವೃದ್ದಿಯ ಹೆಸರಿನಲ್ಲಿ ಮೋದಿ ನೇತೃತ್ವದ ಬಿಜೆಪಿ ಜನರನ್ನು ಜಾಣತನದಿಂದ ಅಂದು ವಂಚಿಸಿತು. ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ದಿಯ ಕುರಿತು ಚಕಾರವೆತ್ತದೆ ಮತ್ತೆ ಅದೇ ತನ್ನ ಹಳೆಯ ಹಿಂದುತ್ವ ಹಾಗು ಭಾವನಾತ್ಮಕ ಸಂಗತಿಗಳನ್ನು ಮುನ್ನೆಲೆಗೆ ತಂದು ಇಡೀ ದೇಶದ ಪ್ರಗತಿಯನ್ನು ಒಂದು ಶತಮಾನ ಹಿಂದಕ್ಕೆ ತಳ್ಳಲಾಯಿತು. ಮೋದಿ ೨೦೧೪ ರಿಂದ ಘೋಷಿಸಿದ ಒಂದಾದರೂ ಯೋಜನೆಗಳು ಈ ಹತ್ತು ವರ್ಷಗಳ ಸುಧೀರ್ಘ ಅವಧಿಯಲ್ಲಿ ಪೂರ್ಣಗೊಂಡಿವೆಯಾ ಎಂದು ಧರ್ಮದ ನಶೆಗೊಳಗಾಗ ಜನರು ಯೋಚಿಸುತ್ತಿಲ್ಲ. ಏಕೆಂದರೆˌ ಕಳೆದ ಹತ್ತು ವರ್ಷಗಳಲ್ಲಿ ಮೋದಿˌ ಬಿಜೆಪಿ ಮತ್ತು ಹಿಂದುತ್ವವಾದಿಗಳು ಮಾಡಿದ ಮೊದಲ ಕಾರ್ಯವೆಂದರೆ ಜನರ ಚಿಂತನಾ ಶಕ್ತಿಯನ್ನೆ ನಾಶಗೊಳಿಸಿದ್ದು.
೨೦೧೪ ರಲ್ಲಿ ಮೋದಿ ಬಿತ್ತಿದ ಬಣ್ಣಬಣ್ಣದ ಕನಸುಗಳು ಮೋದಿಯ ಹಿಂದುತ್ವದ ನಶೆಯಲ್ಲಿ ಇಂದು ಚದುರಿಹೋಗಿವೆ. ಭಾರತದ ಆರ್ಥಿಕತೆ ಕುಸಿದುಹೋಗಿದೆ. ಬಿಜೆಪಿಯ ಆರ್ಥಿಕ ಶಕ್ತಿಯಾಗಿರುವ ಅದಾನಿಯ ಆರ್ಥಿಕ ಅಭಿವೃದ್ದಿ ಭಾರತದ ಆರ್ಥಿಕ ಅಭಿವೃದ್ಧಿ ಎಂದು ಮಾರಿಕೊಂಡ ಮಾಧ್ಯಮಗಳು ಬಿಂಬಿಸುತ್ತಿದೆ. ಕಾಂಗ್ರೆಸ್ ಆಡಳಿತ ದೇಶದಲ್ಲಿ ಸ್ಥಾಪಿಸಿದ್ದ ಸಾರ್ವಜನಿಕ ಉದ್ಯಮಗಳೆಲ್ಲವೂ ಸಾರಾಸಗಟಾಗಿ ಬಿಜೆಪಿ ಬೆಂಬಲಿಗ ಉದ್ಯಮಿಗಳಿಗೆ ಮಾರಲಾಗಿದೆ. ದೇಶದ ತುಂಬೆಲ್ಲ ಬಿಜೆಪಿಯ ಕಾರ್ಯಾಲಯಗಳು ತಾರಾ ಸೌಲಭ್ಯಗಳಿಂದ ಐಷಾರಾಮಿಯಾಗಿ ತಲೆ ಎತ್ತಿವೆ. ಹಿಂದುತ್ವವಾದಿ ಸಂಘಟನೆಗಳಿಗೆ ಕವಡೆ ಕಾಸಿಗೆ ಸರಕಾರದ ಜಮೀನುಗಳು ಕೊಡಮಾಡಲಾಗಿದೆ. ನ್ಯಾಯಾಲಯವೂ ಒಳಗೊಂಡಂತೆ ಬಹುತೇಕ ಸಾಂವಿಧಾನಿಕ ಸಂಸ್ಥೆಗಳುˌ ತನಿಖಾ ಸಂಸ್ಥೆಗಳು ತಮ್ಮ ಸ್ವಾಯತತ್ತೆಯನ್ನು ಕಳೆದುಕೊಂಡು ಅಶಕ್ತಗೊಂಡಿವೆ. ಅಷ್ಟೇ ಏಕೆ ಸಂವಿಧಾನ ಮತ್ತು ಜನತಂತ್ರಗಳೆ ಸೊರಗಿಹೋಗಿವೆ. ಬಿಜೆಪಿˌ ಹಿಂದುತ್ವವಾದಿಗಳು ಮತ್ತು ಅವರ ಬೆಂಬಲಿಗರ ಅಭಿವೃದ್ದಿಯೆ ದೇಶದ ಅಭಿವೃದ್ಧಿ ಎಂದು ವ್ಯಾಪಕ ಪ್ರಚಾರ ಕೊಡಲಾಗುತ್ತಿದೆ. ಸಾಮಾನ್ಯ ಜನರು ಸಮೂಹ ಸನ್ನಿಗೊಳಗಾಗಿ ಇದ್ಯಾವುದನ್ನು ಯೋಚಿಸದ ಸ್ಥಿತಿ ತಲುಪಿದ್ದಾರೆ. ಇನ್ನು ದೇಶದ ಅಭಿವೃದ್ದಿಯ ಕುರಿತು ಯಾರಿಗೆ ಚಿಂತೆಯಿದೆ?
ಮೋದಿ ಘೋಷಿಸಿದ ಒಂದಷ್ಟು ಯೋಜನೆಗಳ ಸ್ಥಿತಿಗತಿಯನ್ನು ನಾವು ಇಲ್ಲಿ ಅವಲೋಕಿಸಬೇಕಿದೆ. ಮೋದಿ ಬಹಳ ರೋಚಕವಾಗಿ ಭಾರತದ ಹಲವು ಸಿಟಿಗಳನ್ನು ಸ್ಮಾರ್ಟ್ ಸಿಟಿ ಮಾಡುವುದಾಗಿ ಘೋಷಿಸಿದ್ದರು. ಇಲ್ಲಿಯವರೆಗೆ ಎಷ್ಟು ಸ್ಮಾರ್ಟ್ ಸಿಟಿಗಳು ದೇಶದಲ್ಲಿ ಪೂರ್ಣಗೊಂಡಿವೆ ಎಂದು ನಾವು ಯೋಚಿಸಬೇಕಲ್ಲವೆ! ಮೋದಿಯವರು ಪ್ರಧಾನಿಯಾಗ ಹೊಸದರಲ್ಲಿ ಅಂದರೆ ಜೂನ್ ೨೫, ೨೦೧೫ರಂದು ದೇಶದ ೧೦೦ ನಗರಗಳನ್ನು ಸ್ಮಾರ್ಟ್ ಸಿಟಿಗಳನ್ನಾಗಿ ಪರಿವರ್ತಿಸುವ ಯೋಜನೆಯನ್ನು ಘೋಷಿಸಿದ್ದರು. ಇದಕ್ಕಾಗಿ ಬಜೆಟ್ಟಿನಲ್ಲಿ ೧೯೧,೨೯೪ ಕೋಟಿ ರೂಪಾಯಿಗಳನ್ನು ತೆಗೆದಿರಿಸಲಾಗಿದೆ ಎಂದೂ ಹೇಳಿದ್ದರು. ಈ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕರ್ನಾಟಕದ ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಶಿವಮೊಗ್ಗ ಮತ್ತು ತುಮಕೂರು ನಗರಗಳನ್ನು ಸೇರಿಸಲಾಗಿತ್ತು.
ಈ ಸ್ಮಾರ್ಟ್ ಸಿಟಿ ಯೋಜನೆಯ ಮೂಲ ಉದ್ದೇಶ ಜನರಿಗೆ ನೀರು ಮತ್ತು ವಿದ್ಯುತ್ ಸರಬರಾಜಿನಲ್ಲಿ ಯಾವುದೇ ಭಾದೆಯಾಗಬಾರದು, ಕಸ ಮತ್ತು ತ್ಯಾಜ್ಯಗಳ ವಿಲೇವಾರಿ ಸುಗಮವಾಗಬೇಕು, ಸಂಚಾರ ದಟ್ಟಣೆ ನಿವಾರಣೆಯಾಗಿ ಸಾರಿಗೆ-ಸಂಚಾರ ವ್ಯವಸ್ಥೆ ಸುಗಮವಾಗಬೇಕು, ಪ್ರಜೆಗಳಿಗೆ ಅಗ್ಗದ ದರದಲ್ಲಿ ವಸತಿ ವ್ಯವಸ್ಥೆಯಾಗಬೇಕು, ಅಂತರ್ಜಾಲ ಮತ್ತು ವೈ ಫೈ ವ್ಯವಸ್ಥೆ ಸುಧಾರಿಸಬೇಕು, ಸುಧಾರಿತ ಪೌರಾಡಳಿತವಿರಬೇಕು, ಸರಕಾರದ ಆಡಳಿತದಲ್ಲಿ ಜನರ ಪಾಲ್ಗೊಳ್ಳುವಿಕೆ ಇರಬೇಕು, ಶುದ್ಧ ಪರಿಸರ, ಪ್ರಮುಖವಾಗಿ ಪಟ್ಟಣವಾಸಿ ಮಕ್ಕಳು ಹಾಗು ಮಹಿಳೆಯರಿಗೆ ರಕ್ಷಣೆ ಇರಬೇಕು, ಆರೋಗ್ಯ ಮತ್ತು ಶಿಕ್ಷಣ ಎಲ್ಲರಿಗೂ ಸುಲಭವಾಗಿ ದೊರೆಯಬೇಕು ಎಂಬ ಅನೇಕ ಘನ ಉದ್ದೇಶಗಳನ್ನು ಹೊಂದಿತ್ತು. ನನಗೆ ತಿಳಿದಂತೆ ಕರ್ನಾಟಕದಲ್ಲಿ ಅಥವಾ ದೇಶದಲ್ಲಿ ಇದುವರೆಗೆ ಯಾವೊಂದು ಸ್ಮಾರ್ಟ್ ಸಿಟಿಯೂ ಪೂರ್ಣಗೊಂಡಂತಿಲ್ಲ. ಉಳಿದವು ಹೋಗಲಿ ಮೋದಿ ಪ್ರತಿನಿಧಿಸುವ ವಾರಣಾಸಿ ಒಂದು ಹಾಳು ಕೊಂಪೆಯಂತಿದ್ದರೆˌ ಯೋಗಿಯ ರಾಜಧಾನಿ ಲಕ್ನೋ ಒಂದು ಕಸದ ತೊಟ್ಟಿಯಂತೆ ಭಾವಗುತ್ತದೆ. ಸನ್ಮಾನ್ಯ ಮೋದಿಯವರು ಒಂಬತ್ತು ವರ್ಷಗಳಲ್ಲಿ ಕನಿಷ್ಟ ಒಂದು ಸ್ಮಾರ್ಟ್ ಸಿಟಿಯನ್ನಾದರೂ ಚುನಾವಣೆಗೆ ಮುನ್ನ ಉದ್ಘಾಟಿಸಿದ್ದರೆ ಒಳ್ಳೆಯದಿತ್ತು.
ಇನ್ನು ಮೋದಿಯವರ ಆರಂಭ ಶೂರತ್ವ ˌ ಆ ಕ್ಷಣಕ್ಕೆ ಅವರು ಘೋಷಿಯುವ ಬಣ್ಣಬಣ್ಣದ ಶಬ್ಧಾಲಂಕೃತ ಭಾಷಣಗಳು ಕೇವಲ ಗಾಳಿಯಲ್ಲಿನ ಚಿತ್ತಾರಗಳಂತೆˌ ಹೀಗೆ ಮಿಂಚಿ ಹಾಗೆ ಕಣ್ಮರೆಯಾಗುತ್ತವೆ. ಅವರ ಬಣ್ಣದ ಮಾತುಗಳಿಗೆ ಕೈ ˌ ಕಾಲುˌ ಅತೀಂದ್ರಿಯ ಶಕ್ತಿ ತುಂಬುವ ಭಾರತೀಯ ಮಾಧ್ಯಮಗಳಂತೂ ನಗೆಪಾಟಲಿಗೀಡಾಗಿದ್ದಾವೆ. ಮೋದಿಯವರ ಸಂಸದರ ದತ್ತು ಗ್ರಾಮ ಯೋಜನೆಯ ಕುರಿತು ಯಾರಿಗಾದರೂ ಏನಾದರೂ ಮಾಹಿತಿ ಇದ್ದರೆ ಹೇಳಬೇಕು. ಇದು ಮೋದಿ ಮೊದಲ ಅವಧಿಯಲ್ಲಿ ಘೋಷಣೆಯಾದ ಯೋಜನೆ. ಮೋದಿಯವರ ಉಳಿದ ಯೋಜನೆಗಳಂತೆ ಇದೂ ಕೂಡ ಮಾಮೂಲಿನಂತೆ ಕೇವಲ ಘೋಷಣೆಗಾಗಿಯೇ ಘೋಷಿಸಿದ ಯೋಜನೆ ಎನ್ನದೆ ಅದನ್ನು ಸಮರ್ಥಿಸಲು ಅಥವಾ ಬೆಂಬಲಿಸಲು ಬೇರೆ ಆಧಾರಗಳು ನನಗೆ ಲಭ್ಯವಿಲ್ಲ. ಹೋಗಲಿ ಆ ಕುರಿತು ಎಂದಾದರೂ ನಮ್ಮ ಮಾಧ್ಯಮಗಳು ಪ್ರಶ್ನಿಸಿದ ಉದಾಹರಣೆಯಾದರೂ ಇದೆಯಾ ಅಂದರೆ ಅದೂ ಇಲ್ಲ. ಮಾಧ್ಯಮಗಳು ಆಡಳಿತ ಪಕ್ಷಕ್ಕೆ ಮಾರಿಕೊಂಡ ಮೇಲೆ ಹೀಗೆ ಪ್ರಶ್ನಿಸಬೇಕು ಎಂದು ಅಪೇಕ್ಷಿಸುವುದೆ ನಿರರ್ಥಕ.
ದೇಶದ ಜನ ಬಡತನˌ ನಿರುದ್ಯೋಗˌ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವಾಗ ಅದರ ಕುರಿತು ಒಂದಿಷ್ಟೂ ಕಾಳಜಿ ಇರದ ಮೋದಿಯವರು ಆಕರ್ಶಕ ಬುಲೆಟ್ ರೈಲು ಯೋಜನೆ ಘೋಷಿಸಿ ಮುಗುಳ್ನಗೆ ಬೀರಿದರು. ಹೋಗಲಿˌ ತಾವೇ ಘೋಷಿಸಿದ ಯೋಜನೆಯಡಿಯಲ್ಲಿ ಮೋದಿಯವರು ಕಳೆದ ಒಂಬತ್ತು ವರ್ಷಗಳಲ್ಲಿ ಎಷ್ಟು ಬುಲೆಟ್ ರೈಲುಗಳನ್ನು ಉದ್ಘಾಟಿಸಿದರು ಎಂದರೆ ಸೊನ್ನೆ ಎಂದು ಹೇಳಬೇಕಾಗುತ್ತದೆ. ಬುಲೆಟ್ ರೈಲು ಹೋಗಲಿˌ ಇದ್ದ ರೈಲುಗಳ ಪ್ರಯಾಣ ದರವನ್ನು ಎರ್ರಾಬಿರ್ರಿ ಏರಿಸಿದ ಮೋದಿ ಸರಕಾರ ಬಡವರ ಬದುಕನ್ನು ಮೂರಾಬಟ್ಟೆ ಮಾಡಿಬಿಟ್ಟಿದೆ. ಇನ್ನು ಭಾರತೀಯ ಮಾರಿಕೊಂಡ ಮಾಧ್ಯಮಗಳು ಮತ್ತು ಬ್ರಿಗೇಡ್ ಗಳು ಸ್ಥಾಪಿಸಿಕೊಂಡ ಮಾರಿಕೊಂಡ ಬಾಡಿಗೆ ಭಾಷಣಕಾರರು ಮೋದಿ ಭಜನೆಯಲ್ಲಿ ಇಂದಿಗೂ ಲಜ್ಜೆ ಬಿಟ್ಟು ಹೆಜ್ಜೆ ಹಾಕುತ್ತಿದ್ದಾರೆ. ಸಾಲದಕ್ಕೆ ರೈಲುಗಳನ್ನು ಮತ್ತು ರೈಲು ನಿಲ್ದಾಣಗಳ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಲಾಗಿದೆ.
ನಷ್ಟದಲ್ಲಿದ್ದ ರೈಲು ಇಲಾಖೆಯನ್ನು ಲಾಭಮಯಗೊಳಿಸಿ ಬಡವರ ಕೈಗೆಟುಕುವಂತೆ ಜನಸ್ನೇಹಿಯಾಗಿದ್ದ ಲಾಲು ಪ್ರಯಾದ ಯಾದವ ಅವರ ಕನಸನ್ನೆಲ್ಲ ಬುಡಮೇಲು ಮಾಡಿದ ಮೋದಿ ಸರಕಾರ ಕಾಯ್ದಿರಿಸಿದ ಟಿಕೇಟ್ ಕ್ಯಾನ್ಸಲ್ ಮಾಡಿದರೂ ಕೂಡ ಮರಳಿ ಹಣ ಬರದಂತೆ ಅದ್ವಾನಗೊಳಿಸಿಟ್ಟಿದ್ದಾರೆ. ಹಿರಿಯ ನಾಗರಿಗೆ ಸಿಗುತ್ತಿದ್ದ ಪ್ರಯಾಣದ ರಿಯಾಯತಿ ಕೂಡ ತೆಗೆದು ಹಾಕಲಾಗಿದೆ. ಹೀಗೆ ಮೋದಿಯವರು ತಾವೇ ಘೋಷಿಯಿದ ಯಾವೊಂದು ಯೋಜನೆಗಳನ್ನು ಪೂರ್ಣಗೊಳಿಸಿಲ್ಲ ಮತ್ತು ಅವರ ಎಲ್ಲ ಘೋಷಿತ ಯೋಜನೆಗಳು ಕೇವಲ ಕಾಗದದ ಮೇಲಿದ್ದು ಅವು ಕೇವಲ ಜನರನ್ನು ಮರಳು ಮಾಡುವಂತವಾಗಿವೆ. ಬಹುಶಃ ಭಾರತೀಯ ಸುಶಿಕ್ಷಿತ ನಾಗರಿಕರು ಶಾಲೆಯ ಮುಖವೆ ಮೋಡದವರ ಮೋಡಿಗೆ ಬಲಿಯಾಗಿ ಸ್ವತಂತ್ರವಾಗಿ ಚಿಂತಿಸುವ ಶಕ್ತಿಯನ್ನೆ ಕಳೆದುಕೊಂಡು ಬದುಕುತ್ತಿರುವ ವಿಷಮ ಹಾಗು ದುರಂತ ಕಾಲಘಟ್ಟದಲ್ಲಿ ನಾವೆಲ್ಲ ಬದುಕುತ್ತಿರುವುದೇ ನಾಚಿಕೆಗೇಡಿನ ಸಂಗತಿಯಾಗಿದೆ.
~ಡಾ. ಜೆ ಎಸ್ ಪಾಟೀಲ.