ಬೆಂಗಳೂರು: ರಾಜ್ಯದಲ್ಲಿನ ನಾಯಕತ್ವ ಬದಲಾವಣೆ ಬಿಕ್ಕಟ್ಟು ಈ ವರ್ಷವೂ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಸಿಎಂ ಸಿದ್ದರಾಮಯ್ಯ(CM Siddaramaiah) ಅವರನ್ನು ಕೆಳಗಿಳಿಸಿ ತಾವು ಸಿಎಂ ಹುದ್ದೆ ಗಿಟ್ಟಿಸಿಕೊಳ್ಳಲು ಕಸರತ್ತು ನಡೆಸುತ್ತಿರುವ ಡಿಸಿಎಂ ಡಿಕೆ ಶಿವಕುಮಾರ್(DK Shivakumar )ಅವರಿಗೆ ನಿರಾಸೆಯಾಗಿದೆ.

ಡಿಸೆಂಬರ್ 28 ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶ ಪ್ರವಾಸ ಬೆಳೆಸಿರುವ ಕಾರಣಕ್ಕೆ ರಾಜ್ಯ ಕಾಂಗ್ರೆಸ್ ನಾಯಕತ್ವ ಬದಲಾವಣೆಯ ವಿಚಾರ ಮುಂದೂಡಿಕೆಯಾದಂತೆ ಕಂಡುಬರುತ್ತಿದೆ.

ಡಿಸೆಂಬರ್ 27 ರಂದೇ ಉಭಯ ನಾಯಕರನ್ನು ದೆಹಲಿಗೆ ಆಹ್ವಾನಿಸಿ ಈ ಬಗ್ಗೆ ಹೈಕಮಾಂಡ್ ಸ್ಪಷ್ಟ ನಿರ್ಧಾರಕ್ಕೆ ಬರುತ್ತದೆ ಎನ್ನಲಾಗಿತ್ತು. ಆದರೆ ಕಾರ್ಯಕಾರಿಣಿ ಸಭೆಯ ಬಳಿಕ ರಾಹುಲ್ ನಾಯಕರ ಕೈಗೆ ಸಿಗುವುದಿಲ್ಲ. ಹೀಗಾಗಿ ಅವರು ವಿದೇಶ ಪ್ರವಾಸದಿಂದ ಭಾರತಕ್ಕೆ ಮರಳುವುದು ಜನವರಿ ತಿಂಗಳ ಮೊದಲ ವಾರದಲ್ಲಿ. ಅಲ್ಲಿಯವರೆಗೆ ಡಿಕೆ ಶಿವಕುಮಾರ್ ಮತ್ತಷ್ಟು ದಿನಗಳ ಕಾಲ ಕಾಯುವ ಸ್ಥಿತಿ ಎದುರಾಗಿದೆ.

ಈಗಾಗಲೇ ರಾಜ್ಯದ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವರನ್ನು ಭೇಟಿಯಾಗಲು ದೆಹಲಿಯಲ್ಲಿ ಡಿಕೆ ಶಿವಕುಮಾರ್ ಬೀಡುಬಿಟ್ಟಿದ್ದಾರೆ. ಆದರೆ ಹೈಕಮಾಂಡ್ ನಾಯಕರ ಭೇಟಿ ಅವರಿಂದ ಸಾಧ್ಯವಾಗುತ್ತಿಲ್ಲ. ಇದರಿಂದ ಪಕ್ಷದ ವಿರುದ್ಧ ಪರೋಕ್ಷವಾಗಿ ಸಾಕಷ್ಟು ಬೇಸರವನ್ನು ಹೊರಹಾಕಿದ್ದಾರೆ. ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷಕ್ಕೆ ಸೇವೆ ಸಲ್ಲಿಸುತ್ತೇನೆ. ಯಾವ ಹುದ್ದೆಯೂ ಶಾಶ್ವತವಾಗಿ ಉಳಿಯುವುದಿಲ್ಲ. ಕಾರ್ಯಕರ್ತನಾಗಿ ಇರೋದು ಒಳ್ಳೆಯದು ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಕನಸು ಕಾಣುತ್ತಿರುವ ಡಿಕೆ ಶಿವಕುಮಾರ್ ಅವರ ಈ ಮಾತುಗಳು ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿವೆ. ಪಕ್ಷಕ್ಕಾಗಿ ತ್ಯಾಗ, ಸಂಕಷ್ಟಗಳನ್ನು ಅನುಭವಿಸಿದರೂ ಅದರ ಗಣನೆಗೆ ಯಾರೂ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ ಎಂಬ ಬೇಸರ ಡಿಕೆ ಬಣದಲ್ಲಿ ಕೇಳಿ ಬರುತ್ತಿದೆ.











