ಕಾಂಗ್ರೆಸ್(Congress)ನಲ್ಲಿ ಹೆಚ್ಚುವರಿ ಡಿಸಿಎಂ(DCM) ವಿಚಾರವಾಗಿ ಸಾಕಷ್ಟು ದಿನಗಳಿಂದ ಚರ್ಚೆ ನಡೆದಿತ್ತು. ಈ ಬೆಳವಣಿಗೆ ಡಿಸಿಎಂ ಡಿ.ಕೆ ಶಿವಕುಮಾರ್(DK Shivakumar) ಕಟ್ಟಿ ಹಾಕುವ ಉದ್ದೇಶದಿಂದಲೇ ನಡೆದಿದೆ ಅನ್ನೋ ಮಾತುಗಳು ರಾಜಕೀಯ ವಲಯದಲ್ಲಿ ಚರ್ಚೆ ಆಗುತ್ತಿದ್ದವು. ಸಿದ್ದರಾಮಯ್ಯ ಬಣದ ನಾಯಕರೇ ಈ ವಿಚಾರವಾಗಿ ಮಾಧ್ಯಮಗಳ ಎದುರು ಬಹಿರಂಗವಾಗಿ ಮಾತನಾಡಿ ಪಕ್ಷಕ್ಕೆ ಇರಿಸು ಮುರಿಸು ಮಾಡಿದ್ದರು ಅನ್ನೋದು ಕೂಡ ಸತ್ಯ. ಇದೀಗ ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯ ಸರ್ಕಾರದಲ್ಲಿ ಹೆಚ್ಚುವರಿ ಉಪಮುಖ್ಯಮಂತ್ರಿ ಆಯ್ಕೆ ಮಾಡದೆ ಇರಲು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಮಾಡಿದೆ. ಡಿಸಿಎಂ ಸ್ಥಾನದ ಬಗ್ಗೆ ಶುರುವಾಗಿದ್ದ ಚರ್ಚೆಗೆ ಇತಿಶ್ರೀ ಹಾಡಲು ಕಾಂಗ್ರೆಸ್ ಹೈಕಮಾಂಡ್ ಯಶಸ್ವಿಯಾಗಿದೆ.

ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತಯಾರಿ ಸಭೆ..!:
ಕಾಂಗ್ರೆಸ್ನಲ್ಲಿ ಭಿನ್ನಮತ ಶುರುವಾಗುವ ಭೀತಿಯಲ್ಲಿದ್ದ ಹೈಕಮಾಂಡ್ ನಾಯಕರು ರಣ್ದೀಪ್ ಸಿಂಗ್ ಸುರ್ಜೆವಾಲ ಅವರ ಮೂಲಕ ಸಭೆ ನಡೆಸಿದ್ದು ಇನ್ಮುಂದೆ ಡಿಸಿಎಂ ವಿಚಾರವಾಗಿ ಯಾರೊಬ್ಬರೂ ಮಾಧ್ಯಮಗಳ ಎದುರಲ್ಲಿ ಬಹಿರಂಗ ಹೇಳಿಕೆ ನೀಡದಂತೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಎದುರಾಗಲಿದ್ದು, ಕಾಂಗ್ರೆಸ್ನಲ್ಲಿನ ಗೊಂದಲ ಎದುರಾದರೆ ಎದುರಾಳಿ ಪಕ್ಷಗಳು ಸುಲಭವಾಗಿ ಗೆಲುವು ಸಾಧಿಸುತ್ತಾರೆ. ಅದಕ್ಕೆ ಅವಕಾಶ ಮಾಡಿಕೊಡುವುದು ಬೇಡ. ಯಾವುದೇ ಬಣಗಳು ಇದ್ದರೂ ಚುನಾವಣೆಯಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಿ, ಚುನಾವಣೆಯಲ್ಲಿ ಗೆಲುವು ಒಂದೇ ಮಾನದಂಡ. ನಿಮಗೆ ಸಿಗಬೇಕಿರುವ ಗೌರವ, ಅಧಿಕಾರ ಸಿಗುತ್ತದೆ. ಅದರ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಸುರ್ಜೇವಾಲ ತಿಳಿಸಿದ್ದಾರೆ ಎನ್ನಲಾಗಿದೆ.
ಸರ್ಕಾರದಲ್ಲಿ ಪ್ರಮುಖವಾಗಿ ಸಚಿವರು ಮತ್ತು ಶಾಸಕರ ನಡುವೆ ಸಮನ್ವಯತೆ ಕಡಿಮೆ ಆಗಿದೆ ಅನ್ನೋ ಕಾರಣಕ್ಕೆ ಪ್ರಮುಖ ಸಚಿವರ ಜೊತೆಗೆ ಸಭೆ ನಡೆಸಿದ್ದು, ಸಮನ್ವಯತೆ ಮೂಡಿಸೋ ಬಗ್ಗೆ ಗಂಭೀರ ಚರ್ಚೆ ಮಾಡಲಾಗಿದೆ. ಆಪರೇಷನ್ ಹಸ್ತದಿಂದ ಪಕ್ಷಕ್ಕೆ ಲಾಭ ಆಗ್ತಿದ್ಯಾ..? ಅಥವಾ ಪಕ್ಷಕ್ಕೆ ಡ್ಯಾಮೇಜ್ ಆಗ್ತಿದ್ಯಾ..? ಅನ್ನೋ ಬಗ್ಗೆ ಚರ್ಚೆ ನಡೆಸಿದ್ದು, ಪ್ರತೀ ಕ್ಷೇತ್ರಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳು ಯಾರ್ಯಾರಿದ್ದಾರೆ..? ಉಸ್ತುವಾರಿಗಳು ಸೂಚಿಸಿರೋ ಅಭ್ಯರ್ಥಿಗಳು ಅರ್ಹರ..? ಇಲ್ವಾ..? ಅನ್ನೋ ಬಗ್ಗೆಯೂ ಚರ್ಚೆಯಾಗಿದೆ. ಒಮ್ಮತದ ಅಭ್ಯರ್ಥಿ ಯಾರಾಗಬೇಕು..? ಆಯಾ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಅನುಕೂಲಕರ ವಾತಾವರಣ ಇದ್ಯಾ..? ಇಲ್ವಾ..? ಪ್ರಬಲ ಅಭ್ಯರ್ಥಿಗಳು ಇಲ್ಲದ ಕಡೆ ರಣತಂತ್ರ ಹೇಗಿರಬೇಕು..? ಅನಿವಾರ್ಯತೆ ಎದುರಾದರೆ ಯಾವೆಲ್ಲಾ ಸಚಿವರನ್ನ ಚುನಾವಣಾ ಕಣಕ್ಕಿಳಿಸಬೇಕು..? ನಿಗಮ ಮಂಡಳಿ ನೇಮಕ ಹಾಗೂ ಅಸಮಧಾನಿತರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳೋದು ಹೇಗೆ..? ಅನ್ನೋ ಬಗ್ಗೆಯೂ ಸಲಹೆ ಸೂಚನೆ ನೀಡಲಾಗಿದೆ.

ಬಿಜೆಪಿ – ಜೆಡಿಎಸ್ ಮೈತ್ರಿಯಿಂದ ಎಲ್ಲೆಲ್ಲಿ ಪ್ಲಸ್.. ಎಲ್ಲೆಲ್ಲಿ ಮೈನಸ್ ಆಗುತ್ತೆ. ಗ್ಯಾರಂಟಿಗಳನ್ನ ಮನೆಮನೆಗೆ ತಲುಪಿಸಲು ಕಾರ್ಯತಂತ್ರ ಹೇಗಿರಬೇಕು..? ಎಲ್ಲೆಲ್ಲಿ ಜಾತಿವಾರು ಸಮಾವೇಶ, ಗ್ಯಾರಂಟಿ ಸಮಾವೇಶಗಳನ್ನ ಆಯೋಜಿಸಬೇಕು.. ಸ್ಥಳೀಯ ಮುಖಂಡರಲ್ಲಿರೋ ಅಸಮಧಾನ ಶಮನ ಮಾಡೋದು ಹೇಗೆ..? ಮಿಶನ್ 20 ಸಕ್ಸಸ್ ಗೊಳಿಸಲು ಒಗ್ಗಟ್ಟಿನ ಹೋರಾಟ ರೂಪಿಸೋಲು ನಾಯಕರು ಸಲಹೆ ನೀಡಿದ್ದಾರೆ. ಸಭೆ ಬಳಿಕ ಮಾತನಾಡಿರುವ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಹೆಚ್ಚುವರಿ ಡಿಸಿಎಂ ವಿಚಾರ ಪಕ್ಷದ ವೇದಿಕೆಯಲ್ಲಿ ಚರ್ಚೆ ಆಗಿಲ್ಲ. ಇವೆಲ್ಲಾ ಸಿನಿಮೀಯ ರೀತಿಯ ಮಾತುಕತೆಗಳು. ಜನ ನಮಗೆ ಅಧಿಕಾರ ಕೊಟ್ಟಿದ್ದಾರೆ, ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಜೊತೆಗೆ ಇಂದಿನ ಕಾಂಗ್ರೆಸ್ ರಣತಂತ್ರ ಸಭೆಯಲ್ಲಿ ಭಾಗಿಯಾಗಿದ್ದ ಸಚಿವರೂ ಕೂಡ ಯಾರೊಬ್ಬರೂ ಡಿಸಿಎಂ ಸ್ಥಾನದ ಬಗ್ಗೆ ಮಾತನಾಡಿಲ್ಲ ಅನ್ನೋದು ವಿಶೇಷ. ಒಟ್ಟಾರೆ ಗೊಂದಲ ಸರಿಮಾಡಿರುವ ಕಾಂಗ್ರೆಸ್ ಹೈಕಮಾಂಡ್ ಒಗ್ಗಟ್ಟಿ ಮಂತ್ರ ಜಪಿಸಿದೆ ಎನ್ನಬಹುದು.
ಕೃಷ್ಣಮಣಿ