ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿ ಡಿ ಪ್ರಕರಣದ ಕುರಿತಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿರುವ ಕರ್ನಾಟಕ ಹೈಕೋರ್ಟ್ ಎಸ್‌ಐಟಿ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ತನಿಖೆ ಹೇಗೆ ನಡೆದಿದೆ ಎಂದು ಕರ್ನಾಟಕ ಸರ್ಕಾರವನ್ನು ಪ್ರಶ್ನಿಸಿದೆ.
ಎಸ್‌ಐಟಿ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ನಡೆದಿರುವ ತನಿಖೆಯ ಕುರಿತು ಹೈಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಸಿ ಡಿ ಹಗರಣಕ್ಕೆ ಸಂಬಂಧಿಸಿದಂತೆ ಮೂರು ಪ್ರತ್ಯೇಕ ಪಿಐಎಲ್‌ಅನ್ನು ಒಟ್ಟಿಗೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸಂಜಯ್ ಗೌಡ ನೇತೃತ್ವದ ವಿಭಾಗೀಯ ಪೀಠವು ಎಸ್ಐಟಿಗೆ ಹಿರಿಯ ಅಧಿಕಾರಿಗಳ ನೇಮಿಸುವ ಉದ್ದೇಶವೇನು? ಎಂದು ಪ್ರಶ್ನಿಸಿದೆ.
ಹಿರಿಯ ಅಧಿಕಾರಿಯ ಅನುಭವ ಮತ್ತು ಹಿರಿತನ ತನಿಖೆಗೆ ನೆರವಾಗಬೇಕು. ಅಧಿಕಾರಿ ರಜೆಯಲ್ಲಿದ್ದರೆ ತನಿಖೆ ಹೇಗೆ ಸಾಧ್ಯ? ಎಂದು ಪ್ರಶ್ನಿಸಿರುವ ಕೋರ್ಟ್ ಎಸ್‍ಐಟಿ ಮುಖ್ಯಸ್ಥರು ಮೂರು ತಿಂಗಳು ರಜೆ ಪಡೆದುಕೊಂಡಿದ್ದರು. ಆ ಸಂದರ್ಭದಲ್ಲಿ ಇಡೀ ಪ್ರಕರಣದ ತನಿಖೆ ನಡೆದಿರುವುದನ್ನು ಗಮನಿಸಿದ ಕೋರ್ಟ್ ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ನಡೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ತನಿಖೆ ನಡೆಯುತ್ತಿದ್ದಂತೆಯೇ ರಜೆಯ ಮೇಲೆ ಹೋಗಿದ್ದ ಸೌಮೆಂದು, ರಜೆ ಮುಗಿಸಿಕೊಂಡು ವಾಪಸ್ ಬಂದು ಎಸ್‍ಐಟಿ ಅಧಿಕಾರಗಳ ಜೊತೆ ಪ್ರಕರಣ ಕುರಿತು ರಿವ್ಯೂ ಮೀಟಿಂಗ್ ಕೂಡ ಮಾಡಿಲ್ಲ. ರಿವ್ಯೂ ಮೀಟಿಂಗ್ ಮಾಡದಿರುವುದರಿಂದ ತನಿಖಾ ವರದಿಯ ಬಗ್ಗೆ ಸೌಮೆಂದು ಅವರಿಗೆ ಒಪ್ಪಿಗೆ ಇದೆಯೋ, ಇಲ್ಲವೇ ಎಂಬ ನಿಲುವು ತಿಳಿಸುವಂತೆ 20 ನಿಮಿಷಗಳ ಕಾಲ ಹೈಕೋರ್ಟ್ ಅವಕಾಶ ನೀಡಿತ್ತು.
ತನ್ನ ಸುದೀರ್ಘ ಅನುಪಸ್ಥಿತಿಯಲ್ಲಿ ನಡೆಸಿರುವ ತನಿಖಾ ವರದಿಯನ್ನು ತಾನು ಪರಿಶೀಲಿಸುವುದಿಲ್ಲ ಎಂದು ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಅವರು ತಮ್ಮ ವಕೀಲರ ಮೂಲಕ ಹೈಕೋರ್ಟ್‌ಗೆ ತಿಳಿಸಿದ್ದಾರೆ

ಸೌಮೆಂದು ವಕೀಲರ ವಾದವನ್ನು ಆಲಿಸಿದ ಹೈಕೋರ್ಟ್, ತಮ್ಮ ನಿಲುವಿನ ಕುರಿತು ಸ್ಪಷ್ಟ ಪ್ರಮಾಣಪತ್ರ ನೀಡುವಂತೆ ಎಸ್‍ಐಟಿ ಮುಖ್ಯಸ್ಥರಿಗೆ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿದೆ.
ಎಪ್ರಿಲ್ 28ರಿಂದ ಜುಲೈ 29 ರವರೆಗೆ ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಸುದೀರ್ಘ ವೈದ್ಯಕೀಯ ರಜೆಯನ್ನು ಪಡೆದಿದ್ದರು. ರಜೆಯ ಮೇಲೆ ಕರ್ತವ್ಯಕ್ಕೆ ಮರಳಿದ ಬಳಿಕವೂ ಅವರ ನಿಗಾದಲ್ಲಿ ನಡೆಯಬೇಕಿದ್ದ ತನಿಖೆಯ ವರದಿಯನ್ನು ಅವರ ರಿವ್ಯೂ ಮಾಡದೆಯೇ ಹೈಕೋರ್ಟ್‌ಗೆ ಸಲ್ಲಿಸಿದ್ದರು.
ಎಸ್‌ಐಟಿ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ಅಧಿಕಾರಿಗಳ ತಂಡ ತನಿಖೆ ನಡೆಸಿ, ವರದಿ ಸಲ್ಲಿಸಿದ್ದಾರೆ. ಈಗ ಮುಖರ್ಜಿ ಅವರು ತನಿಖಾ ತಂಡವನ್ನು ಸೇರಿಕೊಂಡಿದ್ದಾರೆ. ಮುಖರ್ಜಿ ಅನುಪಸ್ಥಿತಿಯಲ್ಲಿ ತನಿಖೆ ದುರ್ಬಲವಾಗಿಲ್ಲ ಎಂದು ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಕೋರ್ಟಿಗೆ ತಿಳಿಸಿದ್ದಾರೆ.ಆದರೆ, ಇಂತಹ ಸೂಕ್ಷ್ಮ ಪ್ರಕರಣದಲ್ಲಿ ಈ ರೀತಿಯ ಗೊಂದಲಗಳು ಹಲವು ಊಹಾಪೋಹಗಳಿಗೆ ಕಾರಣವಾಗುತ್ತದೆ ಎಂದು ನ್ಯಾಯಪೀಠವು ಹೇಳಿದೆ.
ಸಂತ್ರಸ್ತೆ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಹಾಜರಾಗಿದ್ದರೆ, ಆರೋಪಿ ರಮೇಶ್ ಜಾರಕಿಹೊಳಿ ಪರ ಹಿರಿಯ ವಕೀಲ ಸಿ ವಿ ನಾಗೇಶ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.