ರಕ್ಷಣಾ ಕ್ಷೇತ್ರಕ್ಕೆ ಬಜೆಟ್‌ನಲ್ಲಿ 6.81 ಲಕ್ಷ ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಲಾಗಿದೆ. ಕಳೆದ ವರ್ಷ ಇದು 6,21,940 ಕೋಟಿ ರೂಪಾಯಿ ಆಗಿತ್ತು. ಬಜೆಟ್‌ನಲ್ಲಿ ಒಟ್ಟು ರಕ್ಷಣಾ ಬಂಡವಾಳ ವೆಚ್ಚವನ್ನು 1.92 ಲಕ್ಷ ಕೋಟಿ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಇದರಲ್ಲಿ ಪಿಂಚಣಿಗಾಗಿ 1.61 ಲಕ್ಷ ಕೋಟಿ ರೂಪಾಯಿ, ರಾಜಸ್ವ ವೆಚ್ಚ 4.8 ಲಕ್ಷ ಕೋಟಿ ರೂಪಾಯಿ ಇದೆ. ಬಂಡವಾಳ ವೆಚ್ಚದ ಅಡಿಯಲ್ಲಿ ವಿಮಾನ ಮತ್ತು ಏರೋ ಇಂಜಿನ್‌ಗಳಿಗೆ 48,614 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದ್ದು, ನೌಕಾಪಡೆಗೆ 24,390 ಕೋಟಿ ರೂಪಾಯಿ ತೆಗೆದಿಡಲಾಗಿದೆ. ಇತರೆ ಉಪಕರಣಗಳ ಖರೀದಿಗೆ 63,099 ಕೋಟಿ ರೂಪಾಯಿ ಘೋಷಿಸಲಾಗಿದೆ.
ಕೃಷಿ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಮೊದಲ ಆದ್ಯತೆ ನೀಡಲಾಗಿದೆ.. ಕೇಂದ್ರ ಸರ್ಕಾರವು ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಮಿತಿಯನ್ನು ಈಗಿರುವ 3 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಹೆಚ್ಚಿಸಿದೆ. ಇದರೊಂದಿಗೆ ರೈತರಿಗೆ ನೀರಾವರಿ ಸೌಲಭ್ಯಗಳನ್ನು ಒದಗಿಸಲು ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆಯನ್ನು ಘೋಷಿಸಲಾಗಿದೆ.. ಈ ಯೋಜಯಿಂದ 1.7 ಕೋಟಿ ರೈತರಿಗೆ ಅನುಕೂಲ ಆಗಲಿದೆ. ಹೆಚ್ಚಿನ ಇಳುವರಿಯ ಬೀಜಗಳಿಗಾಗಿ ರಾಷ್ಟ್ರೀಯ ಮಿಷನ್ ಆರಂಭ ಮಾಡಲು ನಿರ್ಧಾರ ಮಾಡಿದ್ದು, ಉತ್ಪಾದನೆ, ಮಾರಾಟ, ಮಾರುಕಟ್ಟೆ ಸೃಷ್ಟಿಗೆ ರಾಜ್ಯಗಳಲ್ಲಿ ಮಖಾನಾ ಬೋರ್ಡ್ ಸ್ಥಾಪನೆ ಮಾಡುವುದಾಗಿ ಕೇಂದ್ರ ವಿತ್ತ ಸಚಿವರು ಘೋಷಿಸಿದ್ದಾರೆ.
ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳ ಉತ್ತೇಜನಕ್ಕೆ ಬಜೆಟ್‌ನಲ್ಲಿ ಹೆಚ್ಚು ಒತ್ತು ನೀಡಲಾಗಿದೆ. MSMEಗೆ ನೀಡಲಾಗುತ್ತಿರುವ ಸಾಲದ ಮಿತಿಯನ್ನು 5 ಕೋಟಿ ರೂಪಾಯಿಯಿಂದ 10 ಕೋಟಿ ರೂಪಾಯಿಗಳವರೆಗೂ ಏರಿಸಲಾಗಿದೆ. ರಫ್ತುದಾರ MSME ಗಳಿಗೆ 20 ಕೋಟಿ ರೂಪಾಯಿಗಳವರೆಗೂ ದೀರ್ಘಾವಧಿ ಸಾಲಗಳು ನೀಡುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ. ಚರ್ಮೋದ್ಯಮ, ಪಾದರಕ್ಷೆ ಉತ್ಪಾದನೆಗೆ ವಿಶೇಷ ಸವಲತ್ತು ನೀಡಲಾಗುತ್ತದೆ.. ಈ ಮೂಲಕ ಚರ್ಮೋದ್ಯಮದಲ್ಲಿ 22 ಲಕ್ಷ ಜನರಿಗೆ ಉದ್ಯೋಗ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ.
ಕೇಂದ್ರ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ಮಧ್ಯಮ, ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕಾ ವಲಯಕ್ಕೆ ಭರ್ಜರಿ ಕೊಡುಗೆ ಕೊಟ್ಟಿದೆ. ಮೊದಲ ಬಾರಿ ಉದ್ಯಮ ಆರಂಭಿಸುವ ಎಸ್‌ಸಿ, ಎಸ್‌ಟಿ ಸಮುದಾಯದವರು ಹಾಗೂ ಮಹಿಳೆಯರಿಗೆ 2 ಕೋಟಿ ರೂಪಾಯಿವರೆಗೂ ಸಾಲ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಉದ್ಯೋಗ ಸೃಷ್ಟಿಗೆ ಸಹಾಯ ಆಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಹಾಲುಣಿಸುವ ತಾಯಂದಿರಿಗೆ ಪೋಶಕಾಂಶಭರಿತ ಆಹಾರ ಒದಗಿಸುವ ಯೋಜನೆ ಈ ಬಾರಿಯ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದಾರೆ. ಇದರಿಂದ ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿರುವ 1 ಕೋಟಿ ಬಾಣಂತಿಯರಿಗೆ ಅನುಕೂಲ ಆಗಲಿದೆ ಎನ್ನಲಾಗಿದೆ.
ದೇಶದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಡೇ ಕೇರ್ ಕ್ಯಾನ್ಸರ್ ಸೆಂಟರ್ ತೆರೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಅಲ್ಲದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬ್ರಾಡ್‌ಬ್ಯಾಂಡ್ ಅಳವಡಿಸುವುದಾಗಿಯೂ ಬಜೆಟ್‌ನಲ್ಲಿ ಘೋಷಿಸಲಾಗಿದೆ.. ವೈದ್ಯಕೀಯ ವಲಯದ ಸಂಶೋಧನೆಗೆ 20 ಸಾವಿರ ಕೋಟಿ ಮೀಸಲಿಡಲಾಗಿದೆ.. 36 ಜೀವ ಉಳಿಸುವ ಔಷಧಿಗಳನ್ನು ಮೂಲಭೂತ ಕಸ್ಟಮ್ ಸುಂಕಗಳಿಂದ ಸಂಪೂರ್ಣವಾಗಿ ವಿನಾಯಿತಿ ನೀಡುವುದಾಗಿ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. ಪ್ರಮುಖವಾಗಿ ಕ್ಯಾನ್ಸರ್ ಮತ್ತು ಅಪರೂಪದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ದೊಡ್ಡಮಟ್ಟದ ಅನುಕೂಲವಾಗಲಿದೆ ಎನ್ನಲಾಗಿದೆ.