
ಧರ್ಮ ಎಂದರೆ, ಆಂಗ್ಲದ ‘Religion’ ಎಂದು ಭಾವಿಸಿದ್ದೇನೆ. ನನ್ನ ಉತ್ತರವು ಈ ಭಾವದ ಆಧಾರದ ಮೇಲೆ ಕಟ್ತಿರಲಾಗುತ್ತದೆ.
ಮೊದಲನೆಯದಾಗಿ, ಧರ್ಮ ಎಂದರೇನು ಎಂದು ನಾವು ಯೋಚಿಸಬೇಕು. ಧರ್ಮ ಎಂದರೆ ಗತಕಾಲದ ಯಾವುದೋ ಪುಸ್ತಕದಲ್ಲಿರುವ ನಿಬಂಧನೆಗಳೋ? ಅಥವ ನಾವು ಮಾಡಿಕೊಂಡಿರುವ ಕಟ್ಟುಪಾಡುಗಳೋ? ಧರ್ಮಗುರುಗಳು, ಪುರೋಹಿತರು ಹೇಳುವ ಶಾಸ್ತ್ರವೋ? ಇಲ್ಲವೇ ಆ ಧರ್ಮದ ದೇವತೆಗಳನ್ನು ಪೂಜಿಸುವುದೋ?
ನನ್ನ ಪ್ರಕಾರ ಧರ್ಮ ಎಂಬುದು ಅವರವರು ಇಟ್ಟುಕೊಂಡಿರುವ ನಂಬಿಕೆಗಳಷ್ಟೇ. ಪ್ರತಿಯೊಬ್ಬರ ನಂಬಿಕೆಗಳು ಅವರದ್ದೇ. ನಾನು ಹಿಂದು ಧರ್ಮ ಪಾಲಿಸುತ್ತೇನೆ ಎಂದರೆ ಹಿಂದೂ ಧರ್ಮಗುರುಗಳು, ಗ್ರಂಥಗಳು ಹೇಳಿರುವುದನ್ನು ಪಾಲಿಸಬೇಕೆಂದಲ್ಲ. ಆದರೆ ಆ ಧರ್ಮದ ಸಿದ್ಧಾಂತಗಳನ್ನು ಒಪ್ಪಿರುತ್ತೇನೆ ಎಂದು.

ಬೌದ್ಧ ಧರ್ಮಿಗಳು ದೇವರ ಅಸ್ತಿತ್ವವನ್ನು ಒಪ್ಪುವುದಿಲ್ಲ. ಹಿಂದೂ ಧರ್ಮಿಗಳು ದೇವರ ಅಸ್ತಿತ್ವವನ್ನು ಒಪ್ಪಿ, ಅವರಿಗೆ ಪೂಜೆ ಸಲ್ಲಿಸುತ್ತಾರೆ. ಕೆಲವರು ಪೂಜೆಯನ್ನು ಮೂರ್ತಿಯೊಂದಕ್ಕೆ ಸಲ್ಲಿಸಬಹುದು. ಇನ್ನು ಕೆಲವರು ಪ್ರಾಣಿಗಳನ್ನೇ ದೇವರೆಂದು ನಂಬುತ್ತಾರೆ. ಹೀಗೆ ಧರ್ಮ ಎಂಬುದು ಅವರವರ ನಂಬಿಕೆಗಳಿಂದ ರೂಪಿಸಿಕೊಂಡಿರುತ್ತದೆ. ನಂಬಿಕೆಯಿಂದ ಧರ್ಮವೇ ಹೊರೆತು, ಧರ್ಮದಿಂದ ನಂಬಿಕೆಯಲ್ಲ.
ನೀವು ಅವೈಜ್ಞಾನಿಕ ನಂಬಿಕೆಗಳ್ಳನ್ನು ಇಟ್ಟುಕೊಂಡಿದ್ದರೆ, ಧರ್ಮ ಹಾಗೂ ವಿಜ್ಞಾನ ಎರಡನ್ನೂ ಒಪ್ಪುವುದು ಸಾಧ್ಯವಿಲ್ಲ. ಎರಡರ ನಡುವೆ ನಿಮ್ಮ ಮನಸ್ಸಿನಲ್ಲಿ ಸದಾಕಾಲ ಗೊಂದಲವಿರುತ್ತದೆ. ಆದರೆ ನೀವು ನಿಮ್ಮ ನಂಬಿಕೆಗಳನ್ನು, ವಿಜ್ಞಾನದ ಅಡಿಪಾಯದ ಮೇಲೆ ಕಟ್ಟಿಕೊಂಡರೆ, ಧರ್ಮ ಹಾಗೂ ವಿಜ್ಞಾನವೆರಡನ್ನೂ ಒಪ್ಪಬಹುದು. ಎರಡರ ಸವಿಯನ್ನೂ ಸವಿಯಬಹುದು.

ಈಗ ಇನ್ನೊಂದು ಸೂಕ್ಷ್ಮ ವಿಚಾರದ ಕಡೆ ನಾವು ನಮ್ಮ ಗಮನ ಹರಿಸೋಣ. ವಿಜ್ಞಾನದ ಪುಸ್ತಕದಲ್ಲಿ ಹೇಳಿದ್ದೆಲ್ಲವೂ ಸತ್ಯ ಎಂದು ತಿಳಿಯಬೇಡಿ. ಅದನ್ನು ಪ್ರಶ್ನಿಸಿ, ಪರೀಕ್ಷಿಸಿ. ಹೇಗೆ ನಾವು ವಿಜ್ಞಾನವನ್ನು ಪ್ರಶ್ನಿಸಿ ಪರೀಕ್ಷಿಸುತ್ತೇವೋ, ಹಾಗೆಯೆ ನಾವು ನಮ್ಮ ಧರ್ಮಗ್ರಂಥಗಳು, ಧರ್ಮಗುರುಗಳು, ಧರ್ಮಗಳು, ನಂಬಿಕೆಗಳನ್ನೂ ಪ್ರಶ್ನಿಸಬೇಕು, ಪರೀಕ್ಷಿಸಬೇಕು.
ನಮ್ಮ ದೇಶದ ಇತಿಹಾಸದಲ್ಲಿ ಧರ್ಮವನ್ನು ನಾವು ಹಲವಾರು ಬಾರಿ ಪ್ರಶ್ನಿಸಿದ್ದೇವೆ. ಶಂಕರರು, ಮಂಡನ ಮಿಶ್ರರ ನಡುವಿನ ತರ್ಕ ನಮಗೆ ತಿಳಿದಿರುತ್ತದೆ. ಆಗ ಅವರಿಗಿದ್ದ ವಿವೇಕ ಈಗ ನಮಗೇಕಿಲ್ಲ?

ಧರ್ಮಗ್ರಂಥಗಳನ್ನು ಆಗಿನ ಚಿಂತಕರು, ತತ್ವಜ್ಞಾನಿಗಳು ತಮ್ಮ ಕಾಲ, ವಾಸಸ್ಥಳ, ಜೀವನಶೈಲಿ, ಹಾಗೂ ಅವರ ನಂಬಿಕೆಗಳ ಮೇಲೆ ರಚಿಸಿರುತ್ತರೆ. ನಾವು ಅದರಲ್ಲಿರುವ ಎಲ್ಲ ಸಿದ್ಧಾಂತಗಳನ್ನು ಈಗ ಒಪ್ಪಲೇ ಬೇಕೆಂದಲ್ಲ. ಅವನ್ನು ಪ್ರಶ್ನಿಸಿ, ಬದಲಾಯಿಸುವ ಎಲ್ಲ ಹಕ್ಕು ನಮಗಿದೆ.
ಕೊನೆಯದಾಗಿ, ದಯೆಯಿಲ್ಲದ ಧರ್ಮವಾವುದಯ್ಯ? ದಯೆಯೇ ಧರ್ಮದ ಮೂಲವಯ್ಯ.
ನವೀನ ಹೆಚ್ ಎ
ಹನುಮನಹಳ್ಳಿ
ಕೆ ಆರ್ ನಗರ