ತಿರುಪತಿ ; ತಿರುಪತಿಯ ಜಗದ್ವಿಖ್ಯಾತ ಶ್ರೀ ವೆಂಕಟೇಶ್ವರ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ದನ ಹಾಗೂ ಹಂದಿ ಮಾಂಸದ ಕೊಬ್ಬು, ಮೀನಿನ ಎಣ್ಣೆ ಅಲ್ಲದೆ ಪಾಮ್ ಆಯಿಲ್, ಸೂರ್ಯಕಾಂತಿ ಮತ್ತು ಸೋಯಾಬೀನ್ ಮುಂತಾದ ಅಂಶಗಳು ಪತ್ತೆ ಆಗಿರುವುದು ಕೋಟ್ಯಾಂತರ ಭಕ್ತರಲ್ಲಿ ಭಾರೀ ಕೋಲಾಹಲವನ್ನೇ ಸೃಷ್ಟಿಸಿದೆ.
ಅದರಲ್ಲೂ ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಯಲ್ಲಿಯೇ ಧೃಢಪಟ್ಟಿರುವುದರಿಂದ ದೇವಾಲಯದ ಆಡಳಿತ ಮಂಡಳಿಯೂ ಇದನ್ನು ನಿರಾಕರಿಸಲು ಸಾದ್ಯವೇ ಇಲ್ಲ. ಇದು ಹೇಗೆ ಸೇರಿತೆಂಬುದನ್ನು ಪತ್ತೆ ಹಚ್ಚುವುದಷ್ಟೇ ಈಗ ಉಳಿದಿರುವ ಮಾರ್ಗ. ಲಡ್ಡು ತಯಾರಿಕೆಗೆ ಬಳಸಿದ ಪದಾರ್ಥಗಳನ್ನು ನೋಡಿದಾಗ ಈ ಕಲಬೆರಕೆ ಆಗಿರುವುದು ತುಪ್ಪದಿಂದಲೇ ಎನ್ನುವುದು ಖಚಿತವಾಗುತ್ತದೆ. ಅಂದ ಹಾಗೆ 2020 ಕ್ಕೂ ಮೊದಲು ಹೆಮ್ಮೆಯ ಕರ್ನಾಟಕ ಹಾಲು ಮಹಾ ಮಂಡಳವು ಟಿಟಿಡಿಗೆ ತುಪ್ಪವನ್ನು ಟೆಂಡರ್ ಪಡೆದು ಸರಬರಾಜು ಮಾಡುತಿತ್ತು. ಆದರೆ ಖಾಸಗಿಯವರ ಪೈಪೋಟಿ ಜಾಸ್ತಿಯಾದ ನಂತರ ಟಿಟಿಡಿ ಆಡಳಿತ ಮಂಡಳಿಯು ಟೆಂಡರ್ ಕಡಿಮೆ ದರ ನಮೂದಿಸಿದವರಿಗೆ ಟೆಂಡರ್ ನೀಡತೊಡಗಿತು. ಕೆಎಂಎಫ್ ಅಧಿಕಾರಿಗಳು ಟಿಟಿಡಿ ಮುಖ್ಯಸ್ಥರ ಜತೆ ಚರ್ಚೆ ನಡೆಸಿ ಮನವಿ ಮಾಡಿಕೊಂಡು ತುಪ್ಪದ ಸರಬರಾಜಿಗೆ ಅವಕಾಶ ನೀಡುವಂತೆ ಕೋರಿದ್ದರೂ ಟಿಟಿಡಿ ಮಾತ್ರ ಕ್ಯಾರೇ ಅನ್ನಲಿಲ್ಲ. ಇತರ ಖಾಸಗೀ ಸರಬರಾಜುದಾರರು ಕಡಿಮೆ ಬೆಲೆಗೇ ಉತ್ತಮ ತುಪ್ಪ ಸರಬರಾಜು ಮಾಡುತ್ತಾರೆ ಎಂದು ಹೇಳಿ ನಿರಾಕರಿಸಿತ್ತು.
ಇದೀಗ ಕಡಿಮೆ ಬೆಲೆಗೆ ತುಪ್ಪ ಸರಬರಾಜು ಮಾಡುವವರ ನಿಜ ಬಣ್ಣ ಬಯಲಾಗಿದೆ. ಇದು ಟಿಟಿಡಿಗೆ ನಿಜಕ್ಕೂ ಒಂದು ಮರೆಯಲಾಗದ ಪಾಠವೇ ಆಗಿದೆ. ಸರ್ಕಾರೀ ಸ್ವಾಮ್ಯದ ಉತ್ಕೃಷ್ಟ ದರ್ಜೆಯ ತುಪ್ಪದ ಸರಬರಾಜನ್ನು ನಿರಾಕರಿಸಿದ ಕಾರಣಕ್ಕೆ ಟಿಟಿಡಿ ಭಾರಿ ಬೆಲೆಯನ್ನೇ ತೆತ್ತಿದೆ. ಲಕ್ಷಾಂತರ ಭಕ್ತರೂ ಆಘಾತಕ್ಕೀಡಾಗಿದ್ದಾರೆ. ಈ ಪ್ರಕರಣ ದೊಡ್ಡದಾಗಿರುವುದರಿಂದ ಕಲಬೆರಕೆ ತುಪ್ಪ ಸರಬರಾಜು ಮಾಡಿದ ಭಾರೀ ಕುಳಗಳೂ ಬಂಧನವಾಗುವುದು ಖಚಿತವೇ ಆಗಿದೆ. ಆದರೆ ಭಕ್ತರಿಗೆ ಆಗಿರುವ ನೋವು , ಘಾಸಿ ಮಾತ್ರ ಭರಿಸಲಾಗದ್ದಾಗಿದೆ.
(ವರದಿ ; ಕೋವರ್ ಕೊಲ್ಲಿ ಇಂದ್ರೇಶ್ )