ಬೆಂಗಳೂರು: ನಗರದಲ್ಲಿ ಹಾಡಹಗಲೇ ಎಟಿಎಂ ವಾಹನ ದರೋಡೆ ಪ್ರಕರಣ ಸಂಬಂಧ ಆರೋಪಿಗಳ ಸುಳಿವು ಸಿಕ್ಕಿದ್ದು, ಆರೋಪಿಗಳನ್ನು ಹಿಡಿಯುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ಹೇಳಿದ್ದಾರೆ
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಎಟಿಎಂಗಳಿಗೆ ಹಣ ಹಾಕುವ ಮಾಹಿತಿಯನ್ನು ಯಾರೋ ಆರೋಪಿಗಳಿಗೆ ನೀಡಿದ್ದಾರೆ. ಇದಕ್ಕೆ ಕಾರಣೀಕರ್ತರು ಯಾರು..? ಎಟಿಎಂಗೆ ಹಣ ತಂದು ಹಾಕುವ ಮಾಹಿತಿ ಕೊಟ್ಟಿದ್ದು ಯಾರು.? ಹಣ ಹಾಕುವವರಲ್ಲಿ ಯಾರಾದರೂ ಇದ್ದಾರಾ ಎಂಬುದರ ಬಗ್ಗೆ ಈಗಷ್ಟೇ ಲೀಡ್ ಸಿಕ್ಕಿದೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದರು.
ಬೆಂಗಳೂರಿನಲ್ಲಿ ಏಳು ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಹಣ ರಾಬರಿಯಾಗಿದೆ. ವಾಹನ ಸಂಖ್ಯೆ ಎಲ್ಲ ಮಾಹಿತಿ ಸಿಕ್ಕಿದೆ. ಕೃತ್ಯ ಎಸಗಿದವರು ಇಲ್ಲಿಯವರಾ? ಹೊರ ರಾಜ್ಯದಲ್ಲಿಯವರಾ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಮಾಹಿತಿ ಸಿಕ್ಕಿದೆ. ತನಿಖೆಗೆ ಅಡ್ಡಿಯಾಗುವುದರಿಂದ ಎಲ್ಲ ಮಾಹಿತಿಯನ್ನು ಹಂಚಿಕೊಳ್ಳಲಾಗುವುದಿಲ್ಲ. ಖಂಡಿತವಾಗಿ ಅವರನ್ನು ಹಿಡಿದು ಹಾಕುತ್ತೇವೆ ಎಂದು ಹೇಳಿದರು.
ಇನ್ನು ಬೆಂಗಳೂರಿನಲ್ಲಿ ಹಾಡಹಗಲೇ ರಾಬರಿ ಪ್ರಕರಣ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸಿಎಂಎಸ್ ಸೆಕ್ಯೂರಿಟಿ ಮ್ಯಾನೇಜರ್ ನಟರಾಜ್ ದೂರಿನಡಿ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಮೂರು ಕಾರ್ ಬಳಸಿ ಡಾಕಾಯಿತಿ ನಡೆಸಿರುವುದು ಗೊತ್ತಾಗಿದೆ.













