ಕಲಬುರ್ಗಿ: ಕಲಬುರ್ಗಿಯಲ್ಲಿ ಅಂಬೇಡ್ಕರ್ ಪ್ರತಿಮೆಗಾಗಿ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಸಂಬಂಧ ಮಾತನಾಡಿರುವ ಅವರು, ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ನಾಲ್ಕು ಜನರನ್ನು ಬಂಧಿಸಿದ್ದಾರೆ. ಆದರೆ ಇದರ ಹಿಂದಿನ ಉದ್ದೇಶ ಏನು? ಎಂಬುದರ ತನಿಖೆ ನಡೆಸಲು ತಿಳಿಸಿದ್ದೇನೆ. ಈ ಘಟನೆ ನಡೆಯಬೇಕಾದರೆ ಅದಕ್ಕೆ ಮೋಟಿವೇಶನ್ ಇದ್ದೇ ಇರುತ್ತದೆ. ಹೀಗಾಗಿ ಘಟನೆಗೆ ಕಾರಣ ಹಾಗೂ ಅದರ ಹಿಂದೆ ಇರುವವರು ಯಾರು? ಎಂಬುದನ್ನು ವಿಚಾರಿಸಲು ತಿಳಿಸಿದ್ದೇನೆ. ಈ ಕುರಿತಂತೆ ಸೂಕ್ತ ತನಿಖೆ ನಡೆಸಲಿದ್ದು, ಇಂದು ಬಂಧಿತ ನಾಲ್ವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ ಎಂದರು.
ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮಕ್ಕೆ ಬಿಜೆಪಿ ಆಗ್ರಹ ಮಾಡಿರುವ ವಿಚಾರದ ಬಗ್ಗೆ ಮಾತನಾಡಿದ ಅವರು, ಬಿಜೆಪಿ ಅವರಿಗೆ ಯಾರು ಮಾಡಿದ್ದಾರೆ ಅಂತಾ ಗೊತ್ತಾಗುತ್ತೆ. ಈ ಬಗ್ಗೆ ಈಗಲೇ ಕೆಲವೊಂದು ಮಾಹಿತಿ ಹೇಳೊಕ್ಕೆ ಆಗಲ್ಲ, ಯಾರೂ ಹೇಳಿಕೊಟ್ಟಿದ್ದಾರೆ ಇದರ ಹಿಂದೆ ಯಾರಿದ್ದಾರೆ ಎಲ್ಲವೂ ಸಹ ಪರಿಶೀಲನೆ ನಡೆಸಬೇಕಾಗುತ್ತದೆ ಎಂದು ಹೇಳಿದರು.