ಕರ್ನಾಟಕದಲ್ಲಿ ಒಂದೆಡೆ ಕೋಮು ಧ್ರುವೀಕರಣ ವಿಪರೀತವಾಗುತ್ತಿದೆ. ಬಿಜೆಪಿ ಪರ ಇರುವ ಹಿಂದುತ್ವವಾದಿ ಸಂಘಟನೆಗಳು ಅಲ್ಪಸಂಖ್ಯಾತರ ವಿರುದ್ಧ ಬಹಿರಂಗವಾಗಿ ಧ್ವೇಷ ಅಭಿಯಾನ ನಡೆಸುತ್ತಿದ್ದಾರೆ. ಇನ್ನೊಂದೆಡೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಸರ್ಕಾರವೇ ಸ್ವತಃ ಶಾಂತಿ ಕದಡಲು ಪ್ರಯತ್ನ ಪಡುತ್ತಿದೆ. ಸಾಧಾರಣ ಕೊಲೆಯೊಂದಕ್ಕೆ ಭಾಷೆ ಹಾಗೂ ಧರ್ಮದ ಜಾಡ್ಯ ಅಂಟಿಸಿ ಅದಕ್ಕೊಂದು ಮತೀಯ ಆಯಾಮವನ್ನು ನೀಡಲು ಸ್ವತಃ ರಾಜ್ಯದ ಗೃಹ ಮಂತ್ರಿಯೇ ಪ್ರಯತ್ನ ಪಟ್ಟು ಪೇಚಿಗೀಡಾಗಿದ್ದಾರೆ.
ಬೈಕ್ ತಾಗಿದ ವಿಚಾರಕ್ಕೆ ಸಂಬಂಧಿಸಿದ ಕ್ಷುಲ್ಲಕ ಜಗಳದಲ್ಲಿ ನಡೆದ ಕೊಲೆಯನ್ನು ಉರ್ದು ಮಾತನಾಡದಕ್ಕೆ ಕನ್ನಡದವನನ್ನು ಕೊಲೆ ಮಾಡಲಾಗಿದೆ ಎಂದು ಗೃಹ ಸಚಿವರೇ ಕತೆಯನ್ನು ಕಟ್ಟಿದ್ದು, ಆತಂಕಕ್ಕೆ ಕಾರಣವಾಗಿತ್ತು. ಮೂಲತಃ ತಮಿಳು ನಾಡು ಮೂಲದ ದಲಿತ-ಕ್ರಿಶ್ಚಿಯನ್ ಸಮುದಾಯದ ಹುಡುಗನಾಗಿದ್ದ ಸಂತ್ರಸ್ತನನ್ನು ಹಿಂದೂ ಹಾಗೂ ಕನ್ನಡಿಗನೆಂದು ಸಾಬೀತುಪಡಿಸಲು ಸಾಧ್ಯವಾಗದ ಕಾರಣ ಗೃಹಸಚಿವರು ತಕ್ಷಣವೇ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ ಎನ್ನಲಾಗಿದೆ. ಅದೇನೇ ಇದ್ದರೂ ಗೃಹ ಸಚಿವ ಸ್ಥಾನದಲ್ಲಿರುವ ವ್ಯಕ್ತಿಗೆ ಅದರ ಸ್ಥಾನದ್ದೇ ಆದ ಒಂದು ಘನತೆ ಇರುತ್ತದೆ. ಆದರೆ ಆರಗಗೆ ಅದರ ಕಿಂಚಿತ್ ಜ್ಞಾನವಿಲ್ಲ ಅನಿಸುತ್ತೆ. ಆರಗ ಜ್ಞಾನೇಂದ್ರ ಗೃಹ ಖಾತೆ ವಹಿಸಿದಾಗಿನಿಂದಲೂ ಒಂದಲ್ಲೊಂದು ಅಸೂಕ್ಷ್ಮ ಹೇಳಿಕೆ ನೀಡುತ್ತಲೇ ಬಂದಿದ್ದಾರೆ.
ಗೃಹ ಸಚಿವರಾದ ಆರಂಭದಲ್ಲೇ, ಸಭೆಯೊಂದರಲ್ಲಿ ಗೃಹ ಖಾತೆಯ ಬಗ್ಗೆ ಅಲ್ಪವಾಗಿ ಮಾತನಾಡಿ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದ್ದರು.
ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ಅಧಿಕಾರಿಯ ವಿರುದ್ಧ ಫೋನ್ನಲ್ಲಿ ಮಾತನಾಡಿದ್ದ ಸಚಿವ ಆರಗ ಜ್ಞಾನೇಂದ್ರ, ಪೊಲೀಸರಿಗೆ ಕೈ ತುಂಬಾ ಸಂಬಳ ಕೊಟ್ಟರೂ ಲಂಚ ತಿಂದುಕೊಂಡು ನಾಯಿಯ ಹಾಗೆ ಬಿದ್ದಿರುತ್ತಾರೆ. ಪೊಲೀಸರೆಲ್ಲ ಕೆಟ್ಟು ಹೋಗಿದ್ದಾರೆ, ಎಂಜಲು ಕಾಸನ್ನು ತಿಂದು ಬದುಕುತ್ತಿದ್ದಾರೆ. ಪೊಲೀಸರಾಗಲು ಯೋಗ್ಯತೆ ಇಲ್ಲದಿದ್ದ ಮೇಲೆ ಯೂನಿಫಾರ್ಮ್ ಬಿಚ್ಚಿಟ್ಟು ಮನೆಗೆ ಹೋಗಲಿ ಎಂದು ಕೂಗಾಡಿರುವ ವಿಡಿಯೋ ಈಗ ವೈರಲ್ ಆಗಿತ್ತು.
ಗೋ ಸಾಗಾಟ ಮಾಡೋದು ಯಾರು ಅಂತ ಪೊಲೀಸರಿಗೆ ಗೊತ್ತಿದೆ. ಆದರೆ, ಲಂಚ ತಿಂದು ಏನೂ ಗೊತ್ತಿಲ್ಲದಂತೆ ನಾಯಿಯ ಹಾಗೆ ಬಿದ್ದಿರುತ್ತಾರೆ. ಪೊಲೀಸರಿಗೆ ಆತ್ಮಗೌರವ ಬೇಕಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರಿಗೆ ಆರಗ ಜ್ಞಾನೇಂದ್ರ ಅವ್ಯಾಚ್ಯವಾಗಿ ನಿಂದಿಸಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಮೈಸೂರು ಗ್ಯಾಂಗ್ ರೇಪ್ ಪ್ರಕರಣದಲ್ಲೂ ತಮ್ಮ ನಿರ್ಲಜ್ಜತನವನ್ನು ಹಾಗೂ ಅಸೂಕ್ಷ್ಮತೆಯನ್ನು ಆರಗ ಪ್ರದರ್ಶಿಸಿದ್ದರು. ರೇಪ್ ಆಗಿರೋದು ಮೈಸೂರಿನಲ್ಲಿ. ಆದರೆ ಈ ಕಾಂಗ್ರೆಸ್ಸಿನವರು ನನ್ನನ್ನು ರೇಪ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದರು. ಅಷ್ಟೇ ಅಲ್ಲದೆ, ಅತ್ಯಾಚಾರಕ್ಕೊಳಗಾದ ಯುವತಿ ಸಮಯವಲ್ಲದ ಸಮಯದಲ್ಲಿ ಅಲ್ಲಿ ಹೋಗಿದ್ದೇ ತಪ್ಪು ಎಂದು ಕೂಡಾ ಹೇಳಿಕೆ ನೀಡಿ ಸಾರ್ವಜನಿಕ ಕೆಂಗಣ್ಣಿಗೆ ಗುರಿಯಾಗಿದ್ದರು.
ಅದರ ಬಳಿಕ ಇತ್ತೀಚೆಗೆ ನಡೆದ ಹರ್ಷ ಹತ್ಯೆ ಪ್ರಕರಣದಲ್ಲೂ ಇದೇ ರೀತಿ ಮೊದಲು ನೀಡಿದ್ದ ಹೇಳಿಕೆಯನ್ನು ತಾನು ಹೇಳಿಯೇ ಇಲ್ಲವೆಂದು ಸುಳ್ಲೂ ಹೇಳಿ ಮಾಧ್ಯಮಗಳ ಬಾಯಿಗೆ ಆಹಾರವಾಗಿದ್ದರು. ಕೊಲೆಯಾದ ಹರ್ಷನ ಮೇಲೆ ಕ್ರಿಮಿನಲ್ ಕೇಸ್ ಗಳಿತ್ತು ಎಂದ ಗೃಹ ಸಚಿವರು, ಆತನನ್ನು ಒಬ್ಬ ಕ್ರಿಮಿನಲ್ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದರು, ಬಳಿಕ ತಮ್ಮ ಹೇಳಿಕೆಯನ್ನೇ ನಿರಾಕರಿಸಿದ್ದರು.
ಗೃಹ ಸಚಿವ ಸ್ಥಾನದಿಂದ ಗೇಟ್ ಪಾಸ್?
ಈ ನಡುವೆ ಗೃಹ ಸಚಿವ ಸ್ಥಾನದಿಂದ ಜ್ಞಾನೇಂದ್ರ ಅವರನ್ನು ಕೈ ಬಿಡುವ ಕುರಿತೂ ಮಾತುಕತೆಗಳಾಗುತ್ತಿವೆ ಎಂಬ ಸೂಚನೆಗಳು ಲಭಿಸಲಾರಂಭಿಸಿವೆ. ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಮುಜುಗರ ತರುವ ರೀತಿಯಲ್ಲಿ ಪದೇ ಪದೇ ವರ್ತಿಸುವ ಆರಗ ಜ್ಞಾನೇಂದ್ರ ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕೆಂದು ಸ್ವಪಕ್ಷೀಯರಿಂದಲೇ ಬೇಡಿಕೆ ಬಂದಿದೆ ಎನ್ನಲಾಗಿದೆ. ಕರಾವಳಿ ಮೂಲದ ಶಾಸಕ ಸುನಿಲ್ ಕುಮಾರ್ ಅವರಿಗೆ ಗೃಹ ಖಾತೆ ಒಲಿಯುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆ.