ಬೆಂಗಳೂರು: ಕರ್ನಾಟಕ ಆರೋಗ್ಯ ಇಲಾಖೆ ಜಾರಿಗೆ ತಂದ ಗೃಹ ಆರೋಗ್ಯ ಯೋಜನೆ ಯಶಸ್ವಿ ಹೆಜ್ಜೆಯತ್ತ ಸಾಗುತ್ತಿದೆ. ಅಗತ್ಯ ಆರೋಗ್ಯ ಸೇವೆಗಳನ್ನು ನೇರವಾಗಿ ನಿವಾಸಿಗಳ ಮನೆ ಬಾಗಿಲಿಗೆ ತಲುಪಿಸುವ ಸರ್ಕಾರದ ಈ ಕ್ರಮವು ಜನರಿಗೆ ಉಪಯುಕ್ತವಾಗುತ್ತಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ಹಂಚಿಕೊಂಡಿದ್ದು, ಎರಡು ತಿಂಗಳ ವರದಿಯಲ್ಲಿ ಪತ್ತೆಯಾದ ಕ್ಯಾನ್ಸರ್ ಪ್ರಕರಣಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಗೃಹ ಆರೋಗ್ಯ ಯೋಜನೆಯಡಿಯಲ್ಲಿ 2 ತಿಂಗಳಲ್ಲಿ 2 ಮಿಲಿಯನ್ಗೂ ಹೆಚ್ಚು ಜನರ ತಪಾಸಣೆ ಮಾಡಲಾಗಿದ್ದು, 5,664 ಜನರಲ್ಲಿ ಕ್ಯಾನ್ಸರ್ ಪತ್ತೆ ಹಚ್ಚಿ ಚಿಕಿತ್ಸೆಗೆ ದಾರಿ ಮಾಡಿಕೊಡಲಾಗಿದೆ. ಕ್ಯಾನ್ಸರ್ ಒಂದು ಪಿಡುಗು, ಈ ಪಿಡುಗಿನ ದಾಳಿಗೆ ಇಂದು ತತ್ತರಿಸಿದ ಕುಟುಂಬಗಳೇ ಇಲ್ಲಾ. ಇದು ಕೇವಲ ಒಬ್ಬರ ಆರೋಗ್ಯದ ಮೇಲೆ ಮಾತ್ರವಲ್ಲದೇ, ಆ ವ್ಯಕ್ತಿಯ ಇಡೀ ಕುಟುಂಬದ ಆರ್ಥಿಕ, ಸಾಮಾಜಿಕ ಹಾಗೂ ಔದ್ಯೋಗಿಕ ಸ್ಥಿತಿಯನ್ನೇ ಬುಡಮೇಲು ಮಾಡುತ್ತದೆ. ಜನರಲ್ಲಿ ಇದರ ಬಗೆಗಿನ ಜಾಗೃತಿ ಹೆಚ್ಚಿಸುವ ನಿಟ್ಟಿನಲ್ಲಿ ಯುದ್ಧೋಪಾದಿಯಲ್ಲಿ ನಮ್ಮ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಕ್ಯಾನ್ಸರ್ ಬಗ್ಗೆ ಹೆಚ್ಚು ತಿಳಿದುಕೊಂಡಷ್ಟೂ, ಅದನ್ನು ಬೇಗನೇ ಪತ್ತೆ ಹಚ್ಚಲು ಸಹಾಯವಾಗುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಇನ್ನು ಕಳೆದ 2 ತಿಂಗಳಲ್ಲಿ ರಾಜ್ಯಾದ್ಯಂತ 21 ಲಕ್ಷಕ್ಕೂ ಹೆಚ್ಚು ಜನರನ್ನು ಆರೋಗ್ಯ ಇಲಾಖೆ ಬಾಯಿ, ಸ್ತನ ಹಾಗೂ ಗರ್ಭಕೋಶ ಕ್ಯಾನ್ಸರ್ ಪರೀಕ್ಷೆಗೆ ಒಳಪಡಿಸಿ, ಕ್ಯಾನ್ಸರ್ನಿಂದ ಬಳಲುತ್ತಿರುವವರನ್ನು ಪತ್ತೆ ಹಚ್ಚಿ ಸಾವಿರಾರು ಕುಟುಂಬಗಳು ಈ ಪಿಡುಗಿನ ದಾಳಿಗೆ ಸಿಲುಕುವುದನ್ನು ತಪ್ಪಿಸಲಾಗಿದೆ. ಈ ನಮ್ಮ ಪ್ರಯತ್ನದಲ್ಲಿ ಪ್ರತಿದಿನ ಶ್ರದ್ಧೆಯಿಂದ ತೊಡಗಿಸಿಕೊಂಡು ಕೆಲಸ ಮಾಡಿರುವ ಇಲಾಖೆಯ ಪ್ರತಿಯೊಬ್ಬ ಅಧಿಕಾರಿ ಹಾಗೂ ನೌಕರರಿಗೂ ಸಚಿವರು ಧನ್ಯವಾದ ತಿಳಿಸಿದ್ದಾರೆ.












