ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಒಂದೊಂದೆ ಪ್ರಸಂಗಗಳು ನಡೆಯುತ್ತಲೇ ಇವೆ. ನಾನು ಸಿಎಂ ಆಗಿ ನೂರಾರು ಸಬ್ ಇನ್ಸಪೆಕ್ಟರ್ ಗಳ ನೇಮಕ ಮಾಡಿದರೂ ಒಂದು ಸೊಲ್ಲು ಬರಲಿಲ್ಲ. ಗೃಹ ಇಲಾಖೆಯೇ ಗೃಹ ಸಚಿವರ ಹತೋಟಿಯಲ್ಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರದ ಹೊಣೆಯನ್ನು ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಇಲಾಖೆ ಸಚಿವರು ಹೊರಬೇಕು. ಈ ಬಗ್ಗೆ ಮುಖ್ಯಮಂತ್ರಿ ಚಿಂತನೆ ಮಾಡಬೇಕು. ಈವರೆಗೆ ಈ ವಿಚಾರವಾಗಿ ಉನ್ನತ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಿಲ್ಲ. ಅಥವಾ ಸಚಿವರು ಪದವಿಗಳನ್ನು ಬಿಟ್ಟುಕೊಡಲಿಲ್ಲ. ಇವರಲ್ಲಿ ನೈತಿಕ ಹಾಗೂ ಭೌತಿಕ ಎರಡೂ ಜವಾಬ್ದಾರಿಗಳು ಇಲ್ಲ. ಹೀಗಾಗಿ ಇದೊಂದು ಜವಾಬ್ದಾರಿಯಿಲ್ಲದ ಸರ್ಕಾರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಖಂಡಿತ ಅಧಿಕಾರಕ್ಕೆ ಬರುತ್ತದೆ. ಆದರೆ ಕಾಂಗ್ರೆಸ್ ಕೂಡ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಅಹಂಭಾವ ತಾಳಬಾರದು. ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ಹೇಗೆ ಕೊಡಬೇಕು ಎನ್ನುವ ಬಗ್ಗೆ ಜನರಲ್ಲಿ ವಿಶ್ವಾಸ ತುಂಬಿದರೆ ನೂರಕ್ಕೆ ನೂರು ಪಾಲು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಬಿಜೆಪಿಯಂತೆ, ಅವರು ಮಾಡಿದ್ದೆ ಕಾನೂನು ಎನ್ನುವಂತೆ ಕಾಂಗ್ರೆಸ್ ನಲ್ಲಿ ಇಲ್ಲ. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕ, ಡಿಕೆಶಿ ಕೆಪಿಸಿಸಿ ಅಧ್ಯಕ್ಷರು. ಹೀಗಿರುವಾಗ ಅವರವರ ಜವಾಬ್ದಾರಿಯನ್ನು ಅವರವರು ನಿಭಾಯಿಸಿಕೊಂಡು ಹೋಗಲೇಬೇಕಿದೆ. ಹೀಗಿದ್ದ ಮಾತ್ರಕ್ಕೆ ಭಿನ್ನಾಭಿಪ್ರಾಯವಿದೆ ಎಂದು ಹೇಳಲಿಕ್ಕೆ ಆಗಲ್ಲ ಎಂದರು.