ಕೊರೊನಾ ವೈರಸ್ ನಿಂದ ಏನೂ ಆಗಲ್ಲ ಎಂದು ಜನರು ಉದಾಸೀನ ತೋರುತ್ತಿದ್ದಾರೆ. ಆದರೆ 17ರಿಂದ 21 ವರ್ಷದೊಳಗಿನ ಯುವಕರೇ ಹೆಚ್ಚಾಗಿ ಕೋವಿಡ್ ಗೆ ಬಲಿಯಾಗುತ್ತಿದ್ದು, ಎಲ್ಲರೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ನಿಂದ ಮೃತಪಟ್ಟವರ ಡೆತ್ ಆಡಿಟ್ ನಡೀತಿದೆ. 60 ವರ್ಷ ಮೇಲ್ಪಟ್ಟವರು ಅತೀ ಜರೂರಾಗಿ ಮೂರನೇ ಡೋಸ್ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಾಸ್ಕ್ ಹಾಕದಿದ್ದರೆ ಯಾವುದೇ ದಂಡ ವಿಧಿಸುವುದಿಲ್ಲ. ಆದರೆ ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಧರಿಸಬೇಕು. ಈ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ಕೊಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ಕೊವಿಡ್ ಸೋಂಕು ಏರಿಕೆ ಆದರೆ ಕ್ರಮ ಕೈಗೊಳ್ಳುತ್ತೇವೆ. 15 ದಿನಗಳಲ್ಲಿ ಮತ್ತೊಮ್ಮೆ ಸಭೆ ಮಾಡ್ತೇವೆ ಎಂದು ಅವರು ಹೇಳಿದರು.

ಸಭೆ-ಸಮಾರಂಭ ನಿರ್ಬಂಧಿಸಬೇಕು ಎಂದು ತಜ್ಞರು ಹೇಳಿಲ್ಲ. ಆದರೆ ಜನರು ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಹಬ್ಬಕ್ಕೆ ಯಾವುದೇ ಪ್ರತ್ಯೇಕ ನಿಯಮ ಜಾರಿ ಇಲ್ಲ. ವ್ಯಾಕ್ಸಿನ್ ಹಾಕಿಸಿದರೆ ಸಾವು ಬರಲ್ಲ, ಸೋಂಕು ತಡೆಯಬಹುದು. ಸಿಎಂ ಬೊಮ್ಮಾಯಿ ಮೂರು ಡೋಸ್ ತೆಗೆದುಕೊಂಡಿದ್ದಾರೆ. ಅದಕ್ಕೆ ಅವರಿಗೆ ಏನೂ ಸಮಸ್ಯೆ ಆಗಿಲ್ಲ ಎಂದು ಸುಧಾಕರ್ ಉದಾಹರಣೆ ನೀಡಿದರು.
ಮಂಕಿಪಾಕ್ಸ್ ಬಗ್ಗೆಯೂ ಚರ್ಚೆ ಮಾಡಿದ್ದೀವಿ. ದೇಶದಲ್ಲಿ ಒಂಬತ್ತು ಪ್ರಕರಣ ದಾಖಲಾಗಿವೆ. ಕೇರಳದಲ್ಲಿ ಐದು, ದೆಹಲಿಯಲ್ಲಿ ನಾಲ್ಕು ಕೇಸ್ ಪತ್ತೆಯಾಗಿದ್ದು, ಕರ್ನಾಟಕದಲ್ಲಿ ಮಂಕಿಪಾಕ್ಸ್ ಕೇಸ್ ಪತ್ತೆ ಆಗಿಲ್ಲ. ಗಡಿ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಮಲೇರಿಯ, ಡೆಂಘೀ, ಹೆಚ್ 1 ಎನ್ 1 ಬಗ್ಗೆಯೂ ಅಧ್ಯಯನ ಆಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಾಗಿದೆ. ಮಲೇರಿಯಾ 114 ಪಕ್ರರಣ ಇದೆ. ಡೆಂಘೀ 4415 ಮಂದಿಗೆ ಬಂದಿದ್ದು, 36 ಸಾವಿರ ಟೆಸ್ಟಿಂಗ್ ಮಾಡಿದ್ದೇವೆ. ಚಿಕೂನ್ ಗುನ್ಯಾ 978, ಹೆಚ್ 1ಎನ್ 1 303 ಪ್ರಕರಣ ದಾಖಲಾಗಿದೆ. ಇದರ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಈಗಾಗಲೇ ನಾನೂ ಸ್ಪಷ್ಟ ಪಡಿಸಿದ್ದೇನೆ. ಆಡಳಿತದ ಮೇಲೆ ಹಲವು ವರ್ಷಗಳ ಬಳಿಕ ಹಿಡಿತ ಇಟ್ಕೊಂಡು ಸಿಎಂ ಒಳ್ಳೆಯ ಆಡಳಿತ ನೀಡ್ತಿದ್ದಾರೆ. ಹೈಕಮಾಂಡ್, ಅಮಿತ್ ಷಾ ಕೂಡ ಸ್ಪಷ್ಟ ಪಡಿಸಿದ್ದಾರೆ. ಬೊಮ್ಮಾಯಿ ನಾಯಕತ್ವದಲ್ಲೇ ಚುನಾವಣೆ ಅಂತ ಹೇಳಿದ್ದಾರೆ. ಕಾಂಗ್ರೆಸ್ನವರಿಗೆ ಕೆಲಸ ಇಲ್ಲ. ಕೆಲಸ ಹುಡಿಕೊಂಡು ಏನೇನೋ ಹೇಳುತ್ತಾರೆ. ಕಾಂಗ್ರೆಸ್ ಡಬಲ್ ದೋರ್ ಬಸ್, ಯಾರು ಎತ್ತಗೆ ತಿರುಗಿಸ್ತಾರೆ ಅಂತ ಗೊತ್ತಾಗಲ್ಲ. ಸಿಎಂ ದೆಹಲಿ ಭೇಟಿಗೆ ವಿಶೇಷ ಅರ್ಥ ಬೇಡ, ಕಾಂಗ್ರೆಸ್ ನಾಯಕರೂ ದೆಹಲಿಗೆ ಹೋಗುತ್ತಾರೆ ಎಂದು ಹೇಳಿದರು.











