18ನೇ ವಯಸ್ಸಿಗೆ ತನ್ನ ಕುಟುಂಬಸ್ಥರಿಂದ ಹಾಗೂ ಬಳಿಕ ತನ್ನ ಗಂಡನಿಂದ ತ್ಯಜಿಸಲ್ಪಟ್ಟ ಮಹಿಳೆಯೋರ್ವಳು ಸ್ವಂತ ಪರಿಶ್ರಮದಿಂದ ಕೇರಳ ಪೊಲೀಸ್ ಪರೀಕ್ಷೆ ಬರೆದು ಇದೀಗ ಠಾಣಾ ಉಪನಿರೀಕ್ಷಕಿ ಹುದ್ದೆ ಪಡೆದುಕೊಂಡಿದ್ದಾಳೆ.
ಕುಟುಂಬಸ್ಥರಿಂದ ತ್ಯಜಿಸಲ್ಪಟ್ಟ ಬಳಿಕ ವರ್ಕಳದಲ್ಲಿ ಐಸ್ ಕ್ರೀಂ ಹಾಗೂ ನಿಂಬೆ ಶರಬತ್ತು ಮಾರಾಟ ಮಾಡುತ್ತಾ ಬದುಕಿನ ದಾರಿ ಕಂಡುಕೊಂಡ ಆ್ಯನಿ ಶಿವ ಎಸ್ಐ ಹುದ್ದೆ ಪಡೆದುಕೊಂಡವರು. ತಾನು ಜೀವನ ನಿರ್ವಹಣೆಗೆ ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದ ಅದೇ ಊರಿನಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಆಯ್ಕೆಗೊಂಡ ಕೀರ್ತಿ ಕೇರಳದ ತಿರುವನಂತಪುರಂ ಜಿಲ್ಲೆಯ 31 ವರ್ಷದ ಆ್ಯನಿ ಬೇರೆ ಊರಿಗೆ ವರ್ಗಾವಣೆ ಮಾಡುವಂತೆ ಕೋರಿಕೊಂಡಿದ್ದಾರೆ. ಕೋರಿಕೆಯಂತೆ ಸದ್ಯ ಆಕೆಯನ್ನು ಎರ್ನಾಕುಲಂನ ಸೆಂಟ್ರಲ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿದೆ ಎಂದು ಮರುನಾಡನ್ ವಾಹಿನಿ ವರದಿ ಮಾಡಿದೆ.

ಆರು ತಿಂಗಳ ತನ್ನ ಸಣ್ಣ ಮಗುವಿನೊಂದಿಗೆ ಕುಟುಂಬಸ್ಥರಿಂದ ಹಾಗೂ ತನ್ನ ಗಂಡನಿಂದ ನಿರಾಕರಿಸಲ್ಪಟ್ಟ ಮಹಿಳೆ ಇಂದು ವರ್ಕಳ ಠಾಣೆಗೆ ಉಪನಿರೀಕ್ಷಕರಾಗಿ ನೇಮಕಗೊಂಡಿದ್ದಾರೆ. ಛಲ, ದೃಢನಿರ್ಧಾರ ಮತ್ತು ಆತ್ಮವಿಶ್ವಾಸದ ಗುರಿಗೆ ಈಕೆ ಒಂದು ಉತ್ತಮ ಮಾದರಿ” ಎಂದು ಕೇರಳ ಪೊಲೀಸ್ ಟ್ವೀಟ್ ಮಾಡಿ ಅಭಿನಂದಿಸಿದೆ.
“ಯಾರೂ ನನ್ನ ಸಹಾಯಕ್ಕೆ ಧಾವಿಸದೆ, ಇದೇ ಊರಿನಲ್ಲಿ ನನ್ನ ಪುಟ್ಟ ಮಗುವಿನೊಂದಿಗೆ ಹಲವಾರು ದಿನಗಳು ಕಣ್ಣೀರಿನಿಂದ ಕಳೆದಿದ್ದೇನೆ. ನನಗೆ ವರ್ಕಳ ಪೋಲಿಸ್ ಠಾಣೆಯ ಉಪನಿರೀಕ್ಷಕ ಹುದ್ದೆ ಒದಗಿದ ಸುದ್ದಿ ಕೇಳಿ ತುಂಬಾ ಖುಷಿಯಾಯಿತು” ಎಂದು ಆ್ಯನಿ ಮಾಧ್ಯಮದೊಂದಿಗೆ ಸಂತಸ ವ್ಯಕ್ತಪಡಿಸಿದ್ದಾರೆ.
“ ವರ್ಕಳದ ಶಿವಗಿರಿ ಆಶ್ರಮದ ಮುಂದೆ , ನಿಂಬೆ ಹಣ್ಣಿನ ರಸ ಮತ್ತು ಐಸ್ ಕ್ರೀಂ ಮಾರುವ ಸಣ್ಣ ವ್ಯಾಪಾರವನ್ನು ಮಾಡುತ್ತಿದ್ದೆ. ಹಲವು ದಿನಗಳ ನಂತರ ಈ ವ್ಯಾಪಾರವು ನಷ್ಟವನ್ನು ಕಂಡಿತು. ನಾನು ಐಪಿಎಸ್ ಅಧಿಕಾರಿಯಾಗಬೇಕೆಂಬ ಗುರಿಯನ್ನು ಹೊಂದಿದ್ದೆ. ನನ್ನ ವ್ಯಾಪಾರದ ನಷ್ಟದ ಬಳಿಕ ಒಬ್ಬರು ನನಗೆ ಉಪನಿರೀಕ್ಷಕ ಹುದ್ದೆಯ ಪರೀಕ್ಷೆಯ ಮಾಹಿತಿ ಹಾಗೂ ಧನಸಹಾಯ ಮಾಡುವ ಮೂಲಕ ಉತ್ತೇಜನ ನೀಡಿದರು” ಎಂದು ತಿಳಿಸಿದ್ದಾರೆ.

ಆ್ಯನಿ ಪ್ರಥಮ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗ ಕುಟುಂಬದವರ ಒಪ್ಪಿಗೆಯಿಲ್ಲದೆ ಮದುವೆಯಾದರು. ಒಂದು ಮಗುವನ್ನು ಹೆತ್ತ ನಂತರ ಕ್ಷುಲ್ಲಕ ಕಾರಣಕ್ಕೆ ಆಕೆಯ ಗಂಡ ತ್ಯಜಿಸಿ ಬಿಟ್ಟು ಹೋಗಿದ್ದಾನೆ. ಆ ಬಳಿಕ ತನ್ನ ತವರು ಮನೆಗೆ ಹಿಂತಿರುಗಿದಾಗಲೂ ಆಕೆ ನಿರಾಕರಣೆಯನ್ನೇ ಎದುರಿಸಬೇಕಾಯಿತು. ತನ್ನ ಅಜ್ಜಿಯ ಮನೆಯ ಸಣ್ಣ ಗುಡಿಸಲಿನಲ್ಲಿ ಪುಟ್ಟ ಮಗು ಶಿವಸೂರ್ಯನೊಂದಿಗೆ ತನ್ನ ಮುಂದಿನ ಜೀವನವನ್ನು ಸಾಗಿಸಿದರು.

ಅವರ ದೃಢ ನಿರ್ಧಾರ ಹಾಗೂ ಪ್ರಯತ್ನದಿಂದ ಇಂದು ಪೋಲಿಸ್ ಅಧಿಕಾರಿಯಾಗಿ ನೇಮಕಗೊಂಡಿದ್ದು ನಿಜಕ್ಕೂ ಪ್ರೇರಣೀಯ ಹಾಗೂ ಶ್ಲಾಘನೀಯ ಎಂದು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
			