ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಕ್ಯಾಂಪಸ್‌ನಲ್ಲಿ ಮಾಂಸಾಹಾರದ ವಿಚಾರವಾಗಿ ಭಾನುವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ಎಡಪಂಥೀಯ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು ಪರಸ್ಪರ ಘರ್ಷಣೆ ನಡೆದಿತ್ತು. ಘಟನೆಯಲ್ಲಿ ಎರಡೂ ಬಣಗಳ ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲಪಂಥೀಯ ವಿದ್ಯಾರ್ಥಿ ಸಂಘಟನೆಗಳು ಹಾಗೂ ಹಿಂದೂ ಪರ ಸಂಘಟನೆಗಳು ವಿಶ್ವವಿದ್ಯಾಲಯದ ಆವರಣದಲ್ಲಿ ಪೋಸ್ಟರ್ಗಳು ಹಾಗೂ ಕೇಸರಿ ಬಾವುಟಗಳನ್ನು ಹಾಕಿದ್ದು, ಕೇಸರಿ ಬಣ್ಣಕ್ಕೆ ಅವಮಾನವಾದರೆ ಸರಿ ಇರಲ್ಲ ಎಂದು ಎಚ್ಚರಿಕೆ ರವಾನಿಸಿದೆ. ಮತ್ತು ವಿಶ್ವವಿದ್ಯಾಲಯದ ಸುತ್ತ ʻʻಭಗವಾ (ಕೇಸರಿ) JNUʼʼ ಎಂದು ಅಂಟಿಸಲಾಗಿದೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಹಿಂದೂ ಸಂಘಟನೆಯ ಮುಖ್ಯಸ್ಥ ವಿಷ್ಣು ಗುಪ್ತಾ ಪ್ರತಿನಿತ್ಯ JNU ಕ್ಯಾಂಪಸ್ನಲ್ಲಿ ಕೇಸರಿ ಬಣ್ಣಕ್ಕೆ ಒಂದಲ್ಲ ಒಂದು ರೀತಿ ಅವಮಾನ ಮಾಡಲಾಗುತ್ತಿದೆ. ನಾವು ಇದನ್ನೆಲ್ಲಾ ಸಹಿಸುವುದಿಲ್ಲ ಇದನ್ನು ಆದಷ್ಟು ಬೇಗ ಸರಿಪಡಿಸಿ ಇಲ್ಲವಾದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ವಿಡಿಯೋದಲ್ಲಿ ಹೇಳುತ್ತಿರುವುದು ಕಂಡು ಬರುತ್ತದೆ.
ನಾವು ಪ್ರತಿಯೊಬ್ಬರ ತತ್ವ, ಸಿದ್ಧಾಂತ ಮತ್ತು ಪ್ರತಿಯೊಂದು ಧರ್ಮವನ್ನ ಗೌರವಿಸುತ್ತೇವೆ. ಆದರೆ, ಕೇಸರಿಗೆ ಆಗುವ ಅವಮಾನವನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಹೀಗೆ ನಡೆದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಕೈ ಮೀರಬಹುದು ಎಂದು ಹೇಳಿದ್ದಾರೆ ಎಂದು NDTV ವರದಿ ಮಾಡಿದೆ.
ಭಾನುವಾರ ಸಂಜೆ JNUನ ಕಾವೇರಿ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳು ಎರಡು ಗುಂಪುಗಳ ನಡುವೆ ಮಾರಾಮಾರಿ ಹೊಡೆದಾಟ ನಡೆದಿತ್ತು. ರಾಮನವಮಿಯಂದು ಮಾಂಸಹಾರವನ್ನು ಬಡಿಸಲಾಗುತ್ತಿದೆ ಎಂದು ವಿದ್ಯಾರ್ಥಿಗಳ ನಡುವೆ ಘರ್ಷಣೆ ನಡೆದಿತ್ತು. ಘಟನೆಯಲ್ಲಿ 6 ಜನ ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸದಸ್ಯರು ಹಾಸ್ಟೆಲ್ ಮೆಸ್ನಲ್ಲಿ ಮಾಂಸಹಾರ ಸೇವಿಸದಂತೆ ಹಿಂಸಾತ್ಮಕ ವಾತವರಣವನ್ನು ಸೃಷ್ಟಿಸಿದ್ದಾರೆ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಸಂಘದ (JNUSU) ಸದಸ್ಯರು ಆರೋಪಿಸಿದ್ದರು.
ಅದಾಗ್ಯೂ ಎಡಪಂಥೀಯ ಸಂಘಟನೆಗಳ ಸದಸ್ಯರುಗಳು ಹಾಸ್ಟೆಲ್ನಲ್ಲಿ ಆಯೋಜಿಸಿದ ರಾಮನಾವಮಿ ಪೂಜಾ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು ಎಂದು ಎಬಿವಿಪಿ ಸದಸ್ಯರು ಆರೋಪಿಸಿದರು.