ಗುಜರಾತಿನಲ್ಲಿ ಮುಸ್ಲಿಮರ ವಿರುದ್ಧ ವ್ಯಾಪಕವಾಗಿ ಹೆಚ್ಚುತ್ತಿರುವ ಜನಾಂಗೀಯ ಧ್ವೇಷವು ಅಲ್ಪಸಂಖ್ಯಾತರನ್ನು ಆತಂಕಕ್ಕೆ ದೂಡಿವೆ. ಹೈವೇಗಳಲ್ಲಿರುವ ಮುಸ್ಲಿಮರ ಮಾಲಕತ್ವದ ಸ್ನಾಕ್ ಅಂಗಡಿಗಳಲ್ಲಿ, ಢಾಬಾಗಳಲ್ಲಿ ಬಸ್ಸುಗಳನ್ನು ನಿಲ್ಲಿಸುವುದು ಕಂಡು ಬಂದರೆ ಮಾಹಿತಿ ನೀಡುವಂತೆ ಅಂತರಾಷ್ಟ್ರೀಯ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಪ್ರಚಾರ ಮಾಡುತ್ತಿರುವುದರಿಂದ ಸಣ್ಣಪುಟ್ಟ ಢಾಬಾಗಳನ್ನು, ರೆಸ್ಟೋರೆಂಟ್‌ಗಳನ್ನು ಹೊಂದಿರುವ ಮುಸ್ಲಿಮರು ಭಯಭೀತಗೊಂಡಿದ್ದಾರೆ.
“ಸೌರಾಷ್ಟ್ರ-ಸೂರತ್ ರಸ್ತೆಯಿಂದ ಇದನ್ನು ಪ್ರಾರಂಭಿಸೋಣ“ ಎಂದು ಕೇಸರಿಧಾರಿ ಹೇಳುತ್ತಿರುವ ವಿಡಿಯೋ ವಾಟ್ಸಾಪ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.
ಗುರುವಾರ, ಸೌರಾಷ್ಟ್ರದ ಹೆದ್ದಾರಿಯಲ್ಲಿರುವ ಮುಸ್ಲಿಂ ವ್ಯಾಪಾರಿಯ ಹೋಟೇಲಿನಲ್ಲಿ ಎಂದಿನಂತೆ ಬಸ್ ನಿಲ್ಲಿಸಿದ್ದು, ಅದರಲ್ಲಿದ್ದ ಮೂವರು ಪ್ರಯಾಣಿಕರು ಹೊಟೇಲಿನ ಫೋಟೋ ಕ್ಲಿಕ್ಕಿಸಲು ಪ್ರಾರಂಭಿಸಿದ್ದಾರೆ, ಇದರಿಂದ ಮಾಲಕ ಆತಂಕಕ್ಕೆ ಈಡಾಗಿದ್ದಾರೆ.
“ನನ್ನ ಉಪಾಹಾರ ಗೃಹಕ್ಕೆ ಹಿಂದೂ ಹೆಸರಿದೆ. ನಾವು ಮಾಂಸಾಹಾರ ನೀಡುವುದಿಲ್ಲ. ನಾವು ಮೊಟ್ಟೆಗಳನ್ನು ಅಥವಾ ಮೊಟ್ಟೆಗಳನ್ನು ಒಳಗೊಂಡಿರುವ ಆಹಾರಗಳನ್ನು ಸಹ ನೀಡುವುದಿಲ್ಲ. ನನ್ನ ಯಾವ ಸಿಬ್ಬಂದಿಗೂ ಗಡ್ಡವಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ, ನಾವು ನಮ್ಮ ಧರ್ಮದ ಗುರುತುಗಳನ್ನು ಧರಿಸದ ಅತ್ಯಂತ ಉದಾರ ಮುಸ್ಲಿಮರು. ನನ್ನ ಹೊಟೇಲಿಗೆ ಸ್ಥಳೀಯ ಹಿಂದೂ ದೇವತೆಯ ಹೆಸರು ಇಡಲಾಗಿದೆ. ಪ್ರತಿದಿನ ಕನಿಷ್ಠ 11 ಬಸ್‌ಗಳು ನನ್ನ ಉಪಾಹಾರ ಗೃಹದಲ್ಲಿ ನಿಲ್ಲುತ್ತಿತ್ತು. ಇಂದು, ಯಾವ ಬಸ್ ಕೂಡಾ ಬಂದಿಲ್ಲ. ಬಸ್ಸಿನ ಚಾಲಕ ನನ್ನ ಸ್ನೇಹಿತ, ಆತನಿಗೆ ನಾವು ಕಮಿಷನ್ ನೀಡುತ್ತೇವೆ. ಆದರೆ, ಪ್ರಯಾಣಿಕರು ಮುಸ್ಲಿಂ ಒಡೆತನದ ಹೋಟೆಲಿಗೆ ಕರೆದೊಯ್ಯದೆ ಹಿಂದೂ ವ್ಯಕ್ತಿಯ ಮಾಲಕತ್ವದ ಹೊಟೇಲಿಗೆ ಕರೆದೊಯ್ಯಲು ಚಾಲಕನನ್ನು ಒತ್ತಾಯಪಡಿಸಿದ್ದಾರೆ. ” ಎಂದು ಆ ಮಾಲಕ ಹೇಳಿರುವುದಾಗಿ thewire.in ವರದಿ ಮಾಡಿದೆ.
ಹೋಟೆಲ್ ಮಾಲೀಕರು ತಮ್ಮ ಹೋಟೆಲಿನ ಹೆಸರು ಹಾಗೂ ಅದರ ಸ್ಥಳವನ್ನು ಬಹಿರಂಗಪಡಿಸಲು ಹಿಂಜರಿದಿದ್ದಾರೆ. ಇಂತಹದ್ದೇ ಸನ್ನಿವೇಶಗಳನ್ನು ಭಾವನಗರ್, ಅಮ್ರೇಲಿ ಮತ್ತು ಜುನೇಗದ್ ಪ್ರದೇಶದ ಮುಸ್ಲಿಂ ಹೋಟೆಲ್ ಮಾಲೀಕರು ಎದುರಿಸಿದ್ದಾರೆ.
ಗುಜರಾತಿನ ಹೆದ್ದಾರಿಗಳ ಬಹುತೇಕ ಢಾಬಾಗಳು ಮುಸ್ಲಿಮರಿಗೆ ಸೇರಿದ್ದು, ಇವರು ತಮ್ಮ ಢಾಬಾಗಳಲ್ಲಿ ಸಸ್ಯಹಾರವನ್ನು ಮಾತ್ರ ನೀಡುತ್ತಾ ಬಂದಿದ್ದಾರೆ. ಅಲ್ಲದೆ, ಭಾರತ್, ನವ್‌ಭಾರತ್, ತುಳಸಿ, ಕಬೀರ, ಜೈಹಿಂದ್, ಸರ್ವೋದಯ ಮೊದಲಾದ ಹೆಸರುಗಳನ್ನು ಮಾತ್ರ ತಮ್ಮ ಢಾಬಾಗಳಿಗೆ ಇಟ್ಟುಕೊಂಡಿದ್ದಾರೆ.
ಪ್ರವೀಣ್ ತೊಗಾಡಿಯಾ ನೇತೃತ್ವದ ಅಂತರರಾಷ್ಟ್ರೀಯ ವಿಶ್ವ ಹಿಂದೂ ಪರಿಷತ್ತು ಈ ಎಚ್ಚರಿಕೆಯನ್ನು ಸಾಮಾಜಿಕ ಮಾಧ್ಯಮ ಮತ್ತು ಸ್ಥಳೀಯ ಮಾಧ್ಯಮಗಳು ಸೇರಿದಂತೆ ವಿವಿಧ ವಾಟ್ಸಾಪ್ ಗುಂಪುಗಳಲ್ಲಿ ಪೋಸ್ಟ್ ಮಾಡಿದ್ದು,
ಯಾವುದೇ ಖಾಸಗಿ ಐಷಾರಾಮಿ ಬಸ್ ನಿರ್ವಾಹಕರು ತಮ್ಮ ಬಸ್ ಅನ್ನು ಮುಸ್ಲಿಮರು ನಡೆಸುವ ಢಾಬಾದಲ್ಲಿ ನಿಲ್ಲಿಸಿದರೆ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಗುಜರಾತಿ ಭಾಷೆಯಲ್ಲಿ ಎಚ್ಚರಿಸಲಾಗಿದೆ.
ತಮ್ಮ ಸಂಘಟನೆಯು ಈ ಸೂಚನೆಯನ್ನು ನೀಡಿರುವುದು ನಿಜವೆಂದು ಅಂತರಾಷ್ಟ್ರೀಯ ವಿಎಚ್‌ಪಿಯ ಸೂರತ್ ಘಟಕದ ಕಾರ್ಯದರ್ಶಿ ರಾಜು ಶೆವಾಲ್ ವೈಬ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.

“ಕಿಶನ್ ಭಾರವಾಡ್ ಹತ್ಯೆಯ ನಂತರ ಗುಜರಾತ್‌ನ ಜನರು ಮುಸ್ಲಿಮರ ಮೇಲೆ ಕೋಪಗೊಂಡಿದ್ದಾರೆ. ಮುಸ್ಲಿಂ ಧರ್ಮಗುರುಗಳು ದೊಡ್ಡ ಪಿತೂರಿಯಲ್ಲಿ ಹಿಂದೂಗಳನ್ನು ಕೊಲ್ಲಲು ಶಸ್ತ್ರಾಸ್ತ್ರಗಳನ್ನು ಆಯೋಜಿಸುತ್ತಿದ್ದಾರೆ” ಎಂದು ಶೆವಾಲ್ ಹೇಳಿದ್ದಾರೆ.
“ಮುಸ್ಲಿಮರು ನಡೆಸುತ್ತಿರುವ ಹೆದ್ದಾರಿ ರೆಸ್ಟೋರೆಂಟ್‌ಗಳು ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರವನ್ನು ಬೇಯಿಸಲು ಒಂದೇ ಪಾತ್ರೆಗಳನ್ನು ಬಳಸುತ್ತಾರೆ. ಅಲ್ಲದೆ, ಅವರು ಜನರಿಗೆ ಬಡಿಸುವ ಮೊದಲು ಸಸ್ಯಾಹಾರಿ ಆಹಾರಗಳಲ್ಲಿ ಉಗುಳುತ್ತಾರೆ ಎಂಬ ವರದಿಗಳು ನಮ್ಮಲ್ಲಿವೆ” ಎಂದು ಶೆವಾಲೆ ಹೇಳಿದ್ದಾರೆ.
ಕೆಲವು ಬಸ್ ಚಾಲಕರು ಉದ್ದೇಶಪೂರ್ವಕವಾಗಿ ಮುಸ್ಲಿಮರು ನಡೆಸುವ ಹೋಟೆಲುಗಳಲ್ಲಿ ಉದ್ದೇಶಪೂರ್ವಕವಾಗಿ ನಿಲ್ಲಿಸುತ್ತಾರೆ, ಮತ್ತು ಕಮಿಷನ್ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಗುಜರಾತ್ ಬಸ್ ನಿರ್ವಾಹಕರು ಮತ್ತು ಅದರ ಚಾಲಕರೊಂದಿಗೆ ಅಂತರರಾಷ್ಟ್ರೀಯ ವಿಎಚ್‌ಪಿ ಸಭೆಗಳನ್ನು ನಡೆಸಿದೆ. ಅವರು ಇನ್ನೂ ತಮ್ಮ ಬಸ್‌ಗಳನ್ನು ಮುಸ್ಲಿಮರ ವ್ಯಾಪಾರ ಸ್ಥಳದಲ್ಲಿ ನಿಲ್ಲಿಸುವುದನ್ನು ಮುಂದುವರಿಸಿದರೆ, ಅವರು ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ, ಇದರಿಂದ ಅವರು ಅನುಭವಿಸುವ ಹಾನಿಗೆ ನಾವು ಜವಾಬ್ದಾರರಾಗಿರುವುದಿಲ್ಲ ಎಂದು ನಾವು ಅವರಿಗೆ ಎಚ್ಚರಿಸಿದ್ದೇವೆ.” ಎಂದು ಅವರು ವೈಬ್ಸ್ ಆಫ್ ಇಂಡಿಯಾಗೆ ಅವರು ತಿಳಿಸಿದ್ದಾರೆ.
ಅಂತರಾಷ್ಟ್ರೀಯ ವಿಎಚ್‌ಪಿಯ ಗುಜರಾತ್ ವಕ್ತಾರ ನೀರಜ್ ವಘೇಲಾ ಅವರ ಕುರಿತು ಈ ಪ್ರಕರಣದ ಬಗ್ಗೆ ಮಾಹಿತಿ ಕೇಳಿದಾಗ ಇದೊಂದು ಸ್ಥಳೀಯ ಸಮಸ್ಯೆ ಎಂದು ತಳ್ಳಿಹಾಕಿದ್ದಾರೆ.
“ಈ ನಡೆಯು ಅಂತರಾಷ್ಟ್ರೀಯ VHP ಯ ಸ್ಥಳೀಯ ಘಟಕದಿಂದ ಆಗಿದೆ ಹಾಗೂ ಇದು ರಾಜ್ಯ ಮಟ್ಟದ ಯೋಜನೆ ಅಲ್ಲ” ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇಲ್ಲ ಎಂದು ಸಾಗಹಾಕಿದ್ದಾರೆ.
“ನನಗೆ ಈ ಬಗ್ಗೆ ಯಾವುದೇ ದೂರು ಅಥವಾ ಮಾಹಿತಿ ಬಂದಿಲ್ಲ. ಸಿಕ್ಕರೆ ಪರಿಶೀಲಿಸುತ್ತೇವೆ’ ಎಂದು ಸೂರತ್ ಪೊಲೀಸ್ ಕಮಿಷನರ್ ಅಜಯ್ ತೋಮರ್ ವೈಬ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.
ಧ್ವೇಷ ಹರಡುವವರ ವಿರುದ್ಧ ಕ್ರಮಕ್ಕೆ ಆಗ್ರಹ
ಸೂರತ್‌ನಲ್ಲಿ ಮುಸ್ಲಿಮರು ನಡೆಸುತ್ತಿರುವ ಹೆದ್ದಾರಿ ರೆಸ್ಟೋರೆಂಟ್‌ಗಳಲ್ಲಿ ಬಸ್ ನಿಲ್ಲಿಸುವ ಬಸ್ ನಿರ್ವಾಹಕರಿಗೆ ಬೆದರಿಕೆ ಹಾಕುವ ಸಾಮಾಜಿಕ ಮಾಧ್ಯಮ ಮತ್ತು ಪೋಸ್ಟರ್ ಅಭಿಯಾನದ ವಿರುದ್ಧ ಕ್ರಮ ಕೈಗೊಳ್ಳುವಂತೆ ಗುಜರಾತ್ ಮೂಲದ ಮಾನವ ಹಕ್ಕುಗಳ ಸಂಘಟನೆಯು ರಾಜ್ಯ ಡಿಜಿಪಿ ಆಶಿಶ್ ಭಾಟಿಯಾ ಅವರಿಗೆ ಪತ್ರವನ್ನು ಪತ್ರ ಬರೆದಿದೆ. ಮುಸ್ಲಿಮರು ನಡೆಸುವ ಯಾವುದೇ ಹೋಟೆಲ್, ರೆಸ್ಟೋರೆಂಟ್ ಅಥವಾ ಢಾಬಾದಲ್ಲಿ ನಿಲ್ಲಿಸಿದರೆ ವಾಹನಗಳಿಗೆ ಹಾನಿಯಾಗಬಹುದು ಎಂದು ಐಷಾರಾಮಿ ಬಸ್ ನಿರ್ವಾಹಕರು ಮತ್ತು ಚಾಲಕರನ್ನು ಪೋಸ್ಟರ್‌ನಲ್ಲಿ ಬೆದರಿಸಿರುವುದನ್ನು ಎನ್‌ಜಿಒ ಅಲ್ಪಸಂಖ್ಯಾತರ ಸಮನ್ವಯ ಸಮಿತಿಯ ಸಂಚಾಲಕ ಮುಜಾಹಿದ್ ನಫೀಸ್ ಅವರು ಪತ್ರದಲ್ಲಿ ಗಮನಸೆಳೆದಿದ್ದಾರೆ.
ಬೆದರಿಕೆ ಪೋಸ್ಟ್‌ಗೆ ಕಾರಣರಾದವರ ವಿರುದ್ಧ ಎಫ್‌ಐಆರ್ ದಾಖಲಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎನ್‌ಜಿಒ ಡಿಜಿಪಿಗೆ ಮನವಿ ಮಾಡಿದೆ.
“ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ರೀತಿಯ ಪೋಸ್ಟರ್‌ಗಳು ಜನರಲ್ಲಿ ಭಯವನ್ನು ಉಂಟುಮಾಡುತ್ತವೆ. ಹಿಂಸಾಚಾರವನ್ನು ಗಮನಿಸಿದ ಜನರು ಹೊರ ರಾಜ್ಯಗಳ ಬಸ್ ಪ್ರಯಾಣವಕ್ಕೆ ಹಿಂದೇಟು ಹಾಕಲು ಪ್ರಾರಂಭಿಸಿದ್ದಾರೆ. ಇದು ರಾಜ್ಯದಲ್ಲಿನ ವ್ಯವಹಾರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ” ಎಂದು ಎನ್‌ಜಿಒ ಬರೆದಿದೆ.
ಬೆದರಿಕೆ ಹಾಕಿರುವ ಅಂತರಾಷ್ಟ್ರೀಯ ವಿಎಚ್‌ಪಿ ಮತ್ತು ಅಂತರಾಷ್ಟ್ರೀಯ ಬಜರಂಗದಳದ ಪದಾಧಿಕಾರಿಗಳಾದ ರಾಜು ಶೆವಾಲೆ ಮತ್ತು ಓಂಪ್ರಕಾಶ್ ಶಾ ಅವರ ಪೋಸ್ಟರ್ ಮತ್ತು ವಿಡಿಯೋ ಕುರಿತು ಸಂಘಟನೆಯು ಡಿಜಿಪಿ ಗಮನ ಸೆಳೆದಿದೆ.