ನಮ್ಮ ಹಿಂದೂ ರಾಷ್ಟ್ರ ಹೋರಾಟಕ್ಕೆ ಬಿಜೆಪಿ ಮತ್ತು ಆರ್ ಎಸ್ ಎಸ್ ಬೆಂಬಲಿಸುತ್ತಿಲ್ಲ ಎಂದು ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.
ಹುಬ್ಬಳ್ಳಿ-ಧಾರವಾಡ ಜಿಲ್ಲಾ ಘಟಕ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮುತಾಲಿಕ್, ʻಹಿಂದೂ ರಾಷ್ಟ್ರ ಸ್ಥಾಪನೆಯ ನಮ್ಮ ಪ್ರಯತ್ನಕ್ಕೆ ವ್ಯತಿರಿಕ್ತವಾಗಿ ಬಿಜೆಪಿ ಮತ್ತು ಸಂಘ ಪರಿವಾರದವರು ಅಡ್ಡಿಪಡಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
ಶ್ರೀರಾಮಚಂದ್ರನು ತಮ್ಮೊಂದಿಗೆ ಇದ್ದಾನೆ ಹೊರತು ಯಾವುದೇ ರಾಜಕೀಯ ಪಕ್ಷಗಳ ಅಥವಾ ಸಂಘಟನೆಗಳ ಜೊತೆ ಇಲ್ಲ ಎಂದು ಮುತಾಲಿಕ್ ಹೇಳಿದ್ದಾರೆ. ನಾವು ಹಿಂದುತ್ವಕ್ಕಾಗಿ ಹೋರಾಡುತ್ತಿದ್ದೇವೆ ಎಂದು ನನ್ನ ವಿರುದ್ದ ಸರ್ಕಾರ 107 ಪ್ರಕರಣಗಳನ್ನು ದಾಖಲಿಸಿದೆ. ನಮ್ಮ ಸಂಘಟನೆಯ ಮುಖಂಡರ ಮೇಲೂ ಸಹ ಪ್ರಕರಣ ದಾಖಲಿಸಲಾಗಿದೆ. ಇಂತಹ, ಎಷ್ಟೇ ಪ್ರಕರಣ ದಾಖಲಿಸಿದ್ರು ಸಹ ಶ್ರೀರಾಮಸೇನೆಯು ಹಿಂದುತ್ವವನ್ನು ರಕ್ಷಿಸುವ ಹೋರಾಟವನ್ನು ಮುಂದುವರೆಸುತ್ತದೆ ಎಂದು ಹೇಳಿದ್ದಾರೆ.
ಸರ್ಕಾರ ನಮ್ಮನ್ನು ಅಪರಾಧಿಗಳಂತೆ ಪರಿಗಣಿಸುತ್ತಿದೆ. ಮುಸ್ಲಿಮರ ಮತ್ತು ಕ್ರಿಶ್ಚಿಯನ್ನರ ಪ್ರತಿ ಹಬ್ಬಕ್ಕೆ ನಮ್ಮನ್ನು ಪೊಲೀಸ್ ಠಾಣೆಗೆ ಭೇಟಿ ನೀಡುವಂತೆ ಸೂಚಿಸುತ್ತದೆ. ಗೋರಕ್ಷಕರ ಮತ್ತು ಹಿಂದುತ್ವದ ಯೋಧರನ್ನ ಕ್ರಿಮಿನಲ್ಗಳೆಂದು ಸರ್ಕಾರ ಭಾವಿಸುತ್ತಿದೆ. ಲವ್ ಜಿಹಾದ್ ಪ್ರಕರಣಗಳನ್ನು ತಡೆದ ನಮ್ಮ ಕಾರ್ಯಕರ್ತರ ವಿರುದ್ದವೂ ಸಹ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಮುಸ್ಲಿಮರ ಮತ್ತು ಕ್ರಿಶ್ಚಿಯನ್ನರ ವಿಚಾರದಲ್ಲಿ ರಾಜಿ ಮಾಡಿಕೊಳ್ಳು ಮಾತೇ ಇಲ್ಲ. ಶ್ರೀರಾಮಸೇನೆ ಉಡುಪಿ ಮಠದಲ್ಲಿ ನಡೆದ ಇಫ್ತಾರ್ ಕೂಟವನ್ನ ವಿರೋಧಿಸಿ ಪ್ರತಿಭಟನೆ ನಡೆಸಿತ್ತು. ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ನಮ್ಮಗೆ ಮಠಾಧೀಶರ ಮತ್ತು ಧರ್ಮಗುರುಗಳ ಬೆಂಬಲವಿದೆ ಎಂದು ಹೇಳಿದ್ದಾರೆ.