ರಾಮ ಮಂದಿರ ಹಿಂದೂ ಸಮಾಜದ ನಿರ್ಮಾಣದ ಮೊದಲ ಹೆಜ್ಜೆ ಗುರುತು. ಸಿದ್ದರಾಮಯ್ಯನವರಿಗೆ ದಮ್ ಇದ್ದರೆ ಹಿಂದೂ ರಾಷ್ಟ್ರ ಆಗುವುದನ್ನು ತಡೆಯಲಿ ಎಂದು ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಹೇಳಿದ್ದಾರೆ.
ಶಿರಸಿಯ ತಮ್ಮ ಮನೆಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮ ಮಂದಿರ ಉದ್ಘಾಟನೆ ಹಿಂದು ಸಮಾಜದ ವಿಜಯ. ಹಿಂದೂ ಸಮಾಜ ನಿರ್ಮಾಣದ ಮೊದಲ ಹೆಜ್ಜೆ ಗುರುತು. ಕಾನೂನು ತಿದ್ದುಪಡಿ ಮಾಡಿ ಭವ್ಯ ಮಂದಿರ ನಿರ್ಮಾಣಕ್ಕೆ ಕಾರಣಕರ್ತರಾಗಿರುವ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಅಲ್ಪಸಂಖ್ಯಾತರ ಓಟುಗಳಿಲ್ಲದೇ ಕಾಂಗ್ರೆಸ್ಗೆ ಬದುಕಲು ಸಾಧ್ಯವಿಲ್ಲ. ಹಿಂದಿನಿಂದಲೂ ಅವರು ಬಹುಸಂಖ್ಯಾತ ರಾಜಕಾರಣ ಮಾಡಿಲ್ಲ. ಈ ನಿಟ್ಟಿನಲ್ಲಿ ಹಿಜಾಬ್ ನಿಷೇಧ ಹಿಂಪಡೆಯಲು ನಿರ್ಧರಿಸಿರುವ ಈ ಸರ್ಕಾರಕ್ಕೆ ಹೆಚ್ಚು ದಿನ ಉಳಿಗಾಲವಿಲ್ಲ ಎಂದರು.
ಸಿದ್ದರಾಮಯ್ಯ ಯಾರು ಬೇಕಾದ್ರೂ ಏನು ಬೇಕಾದ್ರೂ ಡ್ರೆಸ್ ಹಾಕಿಕೊಂಡು ಹೋಗಬಹುದು ಎಂಬ ಹೇಳಿಕೆ ನೀಡಿರುವುದು, ಮುಂದಿನ ದಿನಗಳಲ್ಲಿ ಆತಂಕಕಾರಿ ಬೆಳವಣಿಗೆಗೆ ಕಾರಣವಾಗುತ್ತದೆ. ನಮ್ಮವರು ಕೇಸರಿ ಶಾಲು ಹಾಕಿಕೊಂಡು ಹೋಗ್ತಾರೆ. ಒಂದು ಚೌಕಟ್ಟಿನ ಕಲ್ಪನೆ ಇಲ್ಲ ಎಂದಾದರೆ ಸರ್ಕಾರ ಇದೆ ಎಂದು ಅನಿಸುವುದಿಲ್ಲ ಎಂದು ಹೇಳಿದ್ದಾರೆ.