ಹಿಂದಿ ರಾಷ್ಟ್ರ ಭಾಷೆಯ ವಿಚಾರವಾಗಿ ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಮತ್ತು ಬಾಲಿವುಡ್ ನಟ ಅಜಯ್ ದೇವಗನ್ ನಡುವೆ ಟ್ವಿಟ್ ಸಮರ ನಡುವೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಎಂಟ್ರಿಯಾಗಿದ್ದಾರೆ.
ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದು ಸುದೀಪ್ ಹೇಳಿದ್ದಕ್ಕೆ, ನೀವೇಕೆ ಹಿಂದಿಯಲ್ಲಿ ನಿಮ್ಮ ಸಿನಿಮಾಗಳನ್ನು ಡಬ್ ಮಾಡಿ ಬಿಡುತ್ತೀರಿ ಎಂದು ಅಜಯ್ ದೇವಗನ್ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದರು. ಇದರಿಂದಾಗಿ ಇಬ್ಬರು ಸ್ಟಾರ್‌ಗಳ ನಡುವೆ ಟ್ವಿಟ್ಟರ್‌ನಲ್ಲೇ ಪ್ರಶ್ನೋತ್ತರ ನಡೆದಿತ್ತು.
ಅಜಯ್ ದೇವಗನ್ ಅವರ ಟ್ವೀಟ್‌ಗೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಂದಿ ಎಂದಿಗೂ ಮತ್ತು ಎಂದೆಂದಿಗೂ ನಮ್ಮ ರಾಷ್ಟ್ರ ಭಾಷೆಯಾಗುವುದಿಲ್ಲ ನಮ್ಮ ದೇಶದ ಭಾಷಾ ವೈವಿಧ್ಯತೆಯನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಪ್ರತಿಯೊಂದು ಭಾಷೆಯು ತನ್ನದೇ ಆದ ಶ್ರೀಮಂತ ಇತಿಹಾಸವನ್ನು ಹೊಂದಿದೆ, ಅದರ ಬಗ್ಗೆ ಜನರು ಹೆಮ್ಮೆಪಡುತ್ತಾರೆ. ನಾನೊಬ್ಬ ಕನ್ನಡಿಗ ಎಂದು ಹೆಮ್ಮೆ ಪಡುತ್ತೇನೆ!! ಎಂದು ಪ್ರತಿಕ್ರಿಯಿಸಿದ್ದಾರೆ.

ಹಿಂದೂ ರಾಷ್ಟ್ರ ಭಾಷೆ ಹೌದ ಅಥವಾ ಇಲ್ವ ಎಂಬ ಚರ್ಚೆ ಹಲವು ವರ್ಷಗಳಿಂದ ನಡೆಯುತ್ತಾ ಬಂದಿದೆ. ರಾಜಕೀಯ ವಲಯದಲ್ಲಿದ್ದ ಈ ಚರ್ಚೆ ಈಗ ಸಿನಿಮಾ ರಂಗಕ್ಕೆ ಕಾಲಿಟ್ಟಿದೆ.