ಮುಂಬರುವ ಪಂಚ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ. ಅದರಂತೆಯೇ ರಾಜ್ಯ ಕಾಂಗ್ರೆಸ್ನಲ್ಲಿ ಶೀಘ್ರ ಮಹತ್ತರ ಬದಲಾವಣೆಗಳು ನಡೆಯಲಿವೆ. ಇದರ ಭಾಗವಾಗಿಯೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲರನ್ನು ದೆಹಲಿಗೆ ಕರೆಸಿಕೊಳ್ಳಲು ಚಿಂತನೆ ನಡೆದಿದೆ. ಇವರ ಬದಲಿಗೆ ಮುಂದೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸ್ಥಾನಕ್ಕೆ ಕೇರಳದ ಪ್ರಭಾವಿ ನಾಯಕ ನೇಮಕವಾಗುವ ಸಾಧ್ಯತೆ ಇದೆ.
2023ರ ರಾಜ್ಯದ ವಿಧಾನಸಭಾ ಚುನಾವಣೆ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ. ಇದರ ಜೊತೆಗೆ ಇತರ ರಾಜ್ಯಗಳ ಚುನಾವಣೆಯೂ ಕಾಂಗ್ರೆಸ್ ಹೈಕಮಾಂಡ್ಗೆ ಅಷ್ಟೇ ಮುಖ್ಯವಾಗಿದೆ. ಹೀಗಾಗಿ ರಾಜ್ಯ ಕಾಂಗ್ರೆಸ್ನಲ್ಲಿ ಶೀಘ್ರ ಮಹತ್ತರ ಬದಲಾವಣೆ ಮಾಡಲು ಹೈಕಮಾಂಡ್ ಮುಂದಾಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಸ್ಥಾನಕ್ಕೆ ಕೇರಳದ ಪ್ರಭಾವಿ ನಾಯಕ ರಮೇಶ್ ಚೆನ್ನಿತಾಲ ನೇಮಕವಾಗುವ ಸಾಧ್ಯತೆ ಇದೆ.
ರಮೇಶ್ ಚೆನ್ನಿತಾಲ ಕೇರಳ ಕಾಂಗ್ರೆಸ್ನ ಪ್ರಭಾವಿ ನಾಯಕರಾಗಿದ್ದಾರೆ. 1982ರಲ್ಲಿ ಎನ್ಎಸ್ಯುಐನ ರಾಷ್ಟ್ರೀಯ ಅಧ್ಯಕ್ಷರಾಗಿ, 2004ರಲ್ಲಿ ಕಾಂಗ್ರೆಸ್ನ ನೀತಿ ನಿರೂಪಣೆಯ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. 2021ರಲ್ಲಿ ಹರಿಪಾದ್ ಕ್ಷೇತ್ರದಿಂದ 5ನೇ ಸಲ ವಿಧಾನಸಭೆ ಪ್ರವೇಶಿದರು. ಇದುವರೆಗೂ ಒಟ್ಟು ನಾಲ್ಕು ಬಾರಿ ಲೋಕಸಭೆ, ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇನ್ನು ಸಂಘಟನಾ ಚತುರರಾಗಿರುವ ರಮೇಶ್ ಚೆನ್ನಿತಾಲ ಹೈಕಮಾಂಡ್ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ.
ಈ ಹಿಂದೆಯೇ ರಮೇಶ್ ಚೆನ್ನಿತಾಲರನ್ನು ಕರ್ನಾಟಕದ ಉಸ್ತುವಾರಿ ಮಾಡಲು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಹೈಕಮಾಂಡ್ಗೆ ಪ್ರಸ್ತಾವನೆ ಕಳಿಸಿದ್ದರು. ಕೇರಳದ ಕಾಂಗ್ರೆಸ್ ನಾಯಕ ತ್ರಿವಿಕ್ರಮ ತಂಬಿ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹಾಕಿದ್ದರು. ಇದಕ್ಕೆ ಕಾರಣ ರಮೇಶ್ ಚೆನ್ನಿತಾಲ ಡಿ. ಕೆ ಶಿವಕುಮಾರ್ ಆಪ್ತ ಎನ್ನಬಹುದು.
ಇನ್ನು, ಕರ್ನಾಟಕ ರಾಜಕಾರಣದ ಬಗ್ಗೆ ರಮೇಶ್ ಚೆನ್ನಿತಾಲಗೆ ಅಪಾರ ಅರಿವಿದೆ. ಡಿಕೆಶಿ ಗುರುವಾದ ರಮೇಶ್ ಚೆನ್ನಿತಾಲ ಕರ್ನಾಟಕದ ರಾಜಕಾರಣವನ್ನು ಹತ್ತಾರು ವರ್ಷಗಳಿಂದ ಹತ್ತಿರದಿಂದಲೇ ಗಮನಿಸಿದ್ದಾರೆ. ಈ ಎಲ್ಲಾ ಕಾರಣದಿಂದ ಸುರ್ಜೆವಾಲ ಅವರನ್ನ ಬದಲಾಯಿಸಿ ರಮೇಶ್ ಚನ್ನಿತಾಲ್ ಮೂಲಕ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಹೈಕಮಾಂಡ್ ತಯಾರಿ ನಡೆಸಿದೆ.
ರಣದೀಪ್ ಸುರ್ಜೇವಾಲ ಹೈಕಮಾಂಡ್ನ ನಂಬಿಕಸ್ಥ ನಾಯಕರು. ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಮಾಧ್ಯಮಗಳನ್ನ ಉತ್ತರಮವಾಗಿ ಬಳಕೆ ಮಾಡಿಕೊಳ್ಳುವ ಚಾಕಚಕ್ಯತೆ ಇದೆ. ಹೀಗಾಗಿ ಮುಂಬರುವ ಇತರೆ ರಾಜ್ಯಗಳ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಸುರ್ಜೇವಾಲರನ್ನು ದೆಹಲಿಗೆ ಕರೆಸಿಕೊಂಡು ಹೆಚ್ಚಿನ ಹೊಣೆ ನೀಡಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ.
ಸುರ್ಜೇವಾಲರನ್ನ ದೆಹಲಿಯಲ್ಲಿ ಪೂರ್ಣ ಪ್ರಮಾಣದ ಬಳಕೆಗೆ ಕಾಂಗ್ರೆಸ್ ಹೈಕಮಾಂಡ್ ಪ್ಲಾನ್ ಮಾಡಿದೆ. ಹೈಕಮಾಂಡ್ ಮಟ್ಟದ ಕಾರ್ಯಕ್ರಮಗಳಲ್ಲಿ ಬಳಸಿಕೊಳ್ಳಲು ತಯಾರಿ ನಡೆದಿದ್ದು, ಮುಂದಿನ ವರ್ಷ ಎದುರಾಗೋ ಚುನಾವಣೆಗಳತ್ತ ಚಿತ್ತ ಹರಿಸಲು ಸುರ್ಜೇವಾಲರಿಗೆ ಜವಾಬ್ದಾರಿ ನೀಡುವ ಸಾಧ್ಯತೆ ಇದೆ.
ಪಂಚ ರಾಜ್ಯಗಳ ಚುನಾವಣೆಯತ್ತ ಗಮನ ಹರಿಸಲು ನಿಯೋಜನೆ ಮಾಡಲು ಕಾಂಗ್ರೆಸ್ ಹೈಕಮಾಂಡ್ ಪ್ಲ್ಯಾನ್ ಮಾಡಿದ್ದು, ಚುನಾವಣೆ ನಡೆಯೋ ರಾಜ್ಯಗಳತ್ತ ಸುರ್ಜೇವಾಲರ ಹೆಜ್ಜೆ ಸಾಧ್ಯತೆ ಇದೆ. ಅದ್ರಲ್ಲೂ ಗೋವಾ ಚುನಾವಣೆಗೆ ರಣದೀಪ್ ಸುರ್ಜೇವಾಲ ಬಳಕೆಗೆ ಮಾಡಿಕೊಳ್ಳಲು ಹೈಕಮಾಂಡ್ ಮುಂದಾಗಿದೆ.
ಒಟ್ನಲ್ಲಿ ರಣದೀಪ್ ಸುರ್ಜೇವಾಲರನ್ನು ದೆಹಲಿಯಲ್ಲಿ ಬಳಸಿಕೊಳ್ಳುವ ಕಾರಣಕ್ಕೆ ರಾಜ್ಯ ಉಸ್ತುವಾರಿ ಸ್ಥಾನದಿಂದ ಕರೆಸಿಕೊಳ್ಳಲು ಹೈಕಮಾಂಡ್ ಮುಂದಾಗಿದೆ. ಆದ್ರೆ ಆ ಸ್ಥಾನ ತುಂಬಲಿರುವ ಕೇರಳದ ರಮೇಶ್ ಚೆನ್ನಿತಾಲ ಪ್ರಭಾವಿ ನಾಯಕರಾಗಿದ್ರೂ, ಉಸ್ತುವಾರಿಗಳಾಗಿ ಕಾರ್ಯನಿರ್ವಹಿಸಿದ ಅನುಭವವಿಲ್ಲ. ಹೀಗಿದ್ದರೂ ಅವರನ್ನ ಕರ್ನಾಟಕ ಉಸ್ತುವಾರಿಯಾಗಿ ನೇಮಿಸಲು ಹೈಕಮಾಂಡ್ ಚಿಂತನೆ ನಡೆಸಿರುವುದು ಸಾಕಷ್ಟೂ ಕುತೂಹಲಕ್ಕೆ ಕಾರಣವಾಗಿದೆ.