
ಯಡಿಯೂರಪ್ಪ ವಿರುದ್ದ ಪೋಕ್ಸೊ ಪ್ರಕರಣದಲ್ಲಿ ಬಿಗ್ ರಿಲೀಫ್ ಸಿಕ್ಕಿದೆ. ಮಾರ್ಚ್ 15ರಂದು ಖುದ್ದು ವಿಚಾರಣೆ ಹಾಜರಾಗುವಂತೆ ವಿಶೇಷ ನ್ಯಾಯಾಲಯ ಜಾರಿ ಮಾಡಿರುವ ಸಮನ್ಸ್ ರದ್ದತಿ ಕೋರಿ ಅರ್ಜಿ ಸಲ್ಲಿಸಿದ್ದ ವೇಳೆ ವಿಚಾರಣೆ ನಡೆಸಿದ ಹೈಕೋರ್ಟ್ ತಡೆಯಾಜ್ಞೆ ನೀಡಿ ಆದೇಶ ಮಾಡಿದೆ.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಇತರ ಮೂವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ನಲ್ಲಿ ಯಡಿಯೂರಪ್ಪ ಪರ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದ್ದಾರೆ. ರಾಜ್ಯ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಹಾಜರಾಗಿದ್ದಾರೆ. ಹಾಗೂ ವಿಶೇಷ ಸರ್ಕಾರಿ ಅಭಿಯೋಜಕರಾದ ಅಶೋಕ್ ನಾಯ್ಕ್ ಕೂಡ ವಾದ ಮಂಡಿಸಿದ್ದಾರೆ.

ವಿಚಾರಣಾಧೀನ ನ್ಯಾಯಾಲಯವು ಈ ಹಿಂದೆ ಸಂಜ್ಞೇ ಪರಿಗಣಿಸಿದ್ದನ್ನು ನಿರ್ಧರಿಸುವವರೆಗೆ ವಿಚಾರಣಾಧೀನ ನ್ಯಾಯಾಲಯದಲ್ಲಿನ ಪ್ರಕ್ರಿಯೆಗೆ ತಡೆ ನೀಡಿತ್ತು ಎಂದು ಸಿ ವಿ ನಾಗೇಶ್ ವಾದಿಸಿದ್ದಾರೆ. ಸಂತ್ರಸ್ತೆ ಮತ್ತು ಆಕೆಯ ತಾಯಿ ದೂರು ದಾಖಲಿಸಿರುವ ಮತ್ತು ದಾಖಲಿಸುವಾಗ ಅನುಸರಿಸಿರುವ ವಿಧಾನಗಳ ಬಗ್ಗೆ ಕೋರ್ಟ್ಗೆ ಹಿರಿಯ ವಕೀಲ ಸಿ ವಿ ನಾಗೇಶ್ ವಿವರಿಸಿದ್ದಾರೆ. ಐಪಿಸಿ ಸೆಕ್ಷನ್ 204 ಮತ್ತು 214 ಅಡಿ ವಿಚಾರಣಾಧೀನ ನ್ಯಾಯಾಲಯ ಸಂಜ್ಞೇ ಪರಿಗಣಿಸುವುದರಲ್ಲಿ ಲೋಪವಿದೆ ಎಂದು ವಾದಿಸಿದ್ದಾರೆ.
ವಾದ ಆಲಿಸಿದ ನ್ಯಾಯಮೂರ್ತಿಗಳು, ಬಿಎಸ್ ಯಡಿಯೂರಪ್ಪಗೆ ಹೈಕೋರ್ಟ್ ಮಧ್ಯಂತರ ರಿಲೀಫ್ ನೀಡಿದೆ. ಕಾಗ್ನಿಜೆನ್ಸ್, ಸಮನ್ಸ್ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದ್ದು, ಖುದ್ದು ಹಾಜರಾತಿಯಿಂದಲೂ ಬಿ.ಎಸ್ ಯಡಿಯೂರಪ್ಪಗೆ ವಿನಾಯಿತಿ ಕೊಟ್ಟು ನ್ಯಾಯಾಧೀಶರು ಆದೇಶ ಮಾಡಿದ್ದಾರೆ. ಪೋಕ್ಸೋ ಕೇಸ್ನಲ್ಲಿ ಸಂಕಷ್ಟ ಎದುರಾಗುತ್ತದೆ ಎನ್ನುವ ಆತಂಕದಲ್ಲಿ ಯಡಿಯೂರಪ್ಪಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.